
ಮಂಗಳೂರು: ತೀವ್ರ ಕುತೂಹಲ ಕೆರಳಿಸಿರುವ ನಗರದ ಲೇಡಿಗೋಷನ್ ಆಸ್ಪತ್ರೆಯಲ್ಲಿ ಮಗು ಅದಲು ಬದಲು ಪ್ರಕರಣಕ್ಕೆ ಸಂಬಂಧಿಸಿದಂತೆ ಮಗು, ತಂದೆ ಹಾಗೂ ತಾಯಿಯ ಡಿಎನ್‌ಎ ಪರೀಕ್ಷೆಗೆ ನ್ಯಾಯಾಲಯ ಅನುಮತಿ ನೀಡಿದೆ.
ಮೊದಲು ಹೆಣ್ಣು ಮಗು ಎಂದು ಹೇಳಿ ನಂತರ ಗಂಡು ಮಗು ನೀಡಿದ್ದಾರೆ ಎಂದು ಆರೋಪಿಸಿ ಕುಂದಾಪುರ ನಿವಾಸಿ ಮುಸ್ತಾಫ ಎಂಬವರು ನೀಡಿದ ದೂರಿನ ಆಧಾರದಲ್ಲಿ ಬಂದರು ಪೊಲೀಸ್ ಠಾಣೆಯಲ್ಲಿ ಮಗು ಅಪಹರಣ ದೂರು ದಾಖಲಾಗಿತ್ತು.

ನ್ಯಾಯಾಲಯ ನೀಡಿದ ಸೂಚನೆ ಆಧಾರದಲ್ಲಿ ಅ.19ರಂದು ಮಗು ಹಾಗೂ ಪೋಷಕರ ಡಿಎಎನ್ ಪರೀಕ್ಷೆಯಾಗಲಿದೆ. ಬಳಿಕ ಇದರ ಸ್ಯಾಂಪಲ್‌ನ್ನು ಹೈದರಾಬಾದ್ ಅಥವಾ ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು. ಮೂರು ತಿಂಗಳೊಳಗೆ ಇದರ ವರದಿ ಬರಲಿದ್ದು, ಈ ವರದಿ ಆಧಾರದಲ್ಲಿ ಮುಂದಿನ ತನಿಖೆ ನಡೆಯಲಿದೆ ಎಂದು ಬಂದರು ಪೊಲೀಸರು ತಿಳಿಸಿದ್ದಾರೆ.
ನಗರದ ಲೇಡಿಗೋಶನ್ ಆಸ್ಪತ್ರೆಯಲ್ಲಿ ಹೆರಿಗೆಯ ಸಂದರ್ಭ ಹೆಣ್ಣು ಮಗು ಎಂದು ದಾಖಲೆಯಲ್ಲಿ ನಮೂದಿಸಿ, ನಂತರ ಪೋಷಕರಿಗೆ ಗಂಡು ಮಗುವನ್ನು ನೀಡಿದ್ದು, ಇದರಿಂದ ಅನುಮಾನಗೊಂಡ ಪೋಷಕರು ನಗರದ ಬಂದರು ಪೊಲೀಸ್ ಠಾಣೆಗೆ ದೂರು ನೀಡಿ ನ್ಯಾಯ ಕೊಡಿಸುವಂತೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ತನಿಖೆ ಮುಂದುವರಿದಿದೆ.

ಮಗುವಿನ ಜನನದ ಸಂದರ್ಭ ಕೇಸ್ ಶೀಟ್‌ನಲ್ಲಿ ಮಗುವಿನ ಲಿಂಗವನ್ನು ದಾಖಲಿಸುವಾಗ ಮಾಡಲಾದ ತಪ್ಪಿನಿಂದ ಪೋಷಕರೂ ಗೊಂದಲದ ಜತೆಗೆ ಒತ್ತಡಕ್ಕೆ ಕಾರಣವಾಗಿದೆ. ಪ್ರಕರಣದ ಬಗ್ಗೆ ಸಮಗ್ರ ತನಿಖೆಯನ್ನು ಮಾಡಲಾಗುತ್ತಿದ್ದು, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ವಹಿಸಲಾಗುವುದು. ಮಾತ್ರವಲ್ಲದೆ ಈ ಬಗ್ಗೆ ಜಿಲ್ಲಾಧಿಕಾರಿಯವರ ಗಮನಕ್ಕೂ ತರಲಾಗಿದ್ದು, ಅವರಿಗೂ ಪ್ರಕರಣದ ವರದಿಯನ್ನು ಶೀಘ್ರವೇ ಒಪ್ಪಿಸಲಾಗುವುದು ಎಂದು ಲೇಡಿಗೋಶನ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ದುರ್ಗಾ ಪ್ರಸಾದ್ ಪ್ರತಿಕ್ರಿಯಿಸಿದ್ದರು.











