Sunday, May 5, 2024
spot_imgspot_img
spot_imgspot_img

ಹರ್ಷ ಕೊಲೆ ಪ್ರಕರಣ; ಭಯ ಹುಟ್ಟಿಸಲು ಹಿಂದೂ ಕಾರ್ಯಕರ್ತನ ಹತ್ಯೆ..! 750ಕ್ಕೂ ಹೆಚ್ಚು ಪುಟಗಳ ಚಾರ್ಜ್‌ಶೀಟ್‌ನಲ್ಲಿ ಬಹಿರಂಗ

- Advertisement -G L Acharya panikkar
- Advertisement -
astr

ಹಿಜಾಬ್‌ ವಿವಾದದಿಂದ ಮುಸ್ಲಿಂ ಸಮುದಾಯವನ್ನು ರಾಜ್ಯದಲ್ಲಿ ಅವಗಣನೆ ಮಾಡಲಾಗುತ್ತಿದೆ. ಹಿಂದೂ ಕಾರ್ಯಕರ್ತರ ಕೊಲೆಯ ಮುಖಾಂತರ ಭಯ ಹುಟ್ಟಿಸುವುದರೊಂದಿಗೆ ಕೋಮು ಗಲಭೆ ಸೃಷ್ಟಿಸಬೇಕು. ಈ ಉದ್ದೇಶದಿಂದ ಹಿಂದೂ ಕಾರ್ಯಕರ್ತ ಹರ್ಷ ಹತ್ಯೆ ನಡೆದಿದೆ. ಆದರೆ ಹತ್ಯೆಗೈದವರು ಯಾವುದೇ ಸಂಘಟನೆಗೆ ಸೇರಿದವರಲ್ಲ ಎಂದು ರಾಷ್ಟ್ರೀಯ ತನಿಖಾ ದಳವು ಹರ್ಷ ಹತ್ಯೆಯ ಆರೋಪಿಗಳ ವಿರುದ್ದ ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿರುವ ಪ್ರಮುಖಾಂಶಗಳು.

ಹರ್ಷ ಕೊಲೆ ಪ್ರಕರಣದ ತನಿಖೆ ಸಂಬಂಧಿಸಿ 750ಕ್ಕೂ ಹೆಚ್ಚು ಪುಟಗಳ ಆರೋಪ ಪಟ್ಟಿಯನ್ನು ಎನ್‌ಐಎ ಅಧಿಕಾರಿಗಳು ಶನಿವಾರ ಬೆಂಗಳೂರಿನ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.

ಈ ಕೊಲೆಯ ಮುಖಾಂತರ ರಾಜ್ಯದಲ್ಲಿ ಭಯ ಸೃಷ್ಟಿಸುವುದು ಮತ್ತು ಆ ಮೂಲಕ ತಮ್ಮ ಸಮುದಾಯದ ಸಾಮರ್ಥ್ಯವನ್ನು ತೋರಿಸಬೇಕೆಂಬುದು ದುಷ್ಕರ್ಮಿಗಳ ಉದ್ದೇಶವಾಗಿತ್ತು. ಕೋಮು ಗಲಭೆ ಸೃಷ್ಟಿಸುವುದರೊಂದಿಗೆ ಹಳೆ ದ್ವೇಷವೂ ಈ ಕೊಲೆಗೆ ಕಾರಣವಾಗಿದೆ ಎಂದು ತಿಳಿದು ಬಂದಿದೆ.

ಹಳೇ ದ್ವೇಷ ಕಾರಣ

ಹಿಂದೂ ಕಾರ್ಯಕರ್ತ ಹರ್ಷನ ಜತೆ ಆರೋಪಿಗಳಾದ ಮೊಹಮ್ಮದ್ ಖಾಸಿಫ್, ರಿಯಾನ್ ಶರೀಫ್ ಮತ್ತು ಆಸಿಫ್ ಉಲ್ಲಾಖಾನ್ ಅಲಿಯಾಸ್ ಚಿಕ್ಕು ಜತೆ ಸಣ್ಣ-ಸಣ್ಣ ವಿಚಾರಕ್ಕೆ ಪರಸ್ಪರ ಹೊಡೆದಾಡಿಕೊಳ್ಳುತ್ತಿದ್ದರು. ಈ ಪೈಕಿ ರಿಯಾನ್ ಶರೀಫ್ ಮತ್ತು ಖಾಸಿಫ್ ತಮ್ಮ ಸಮುದಾಯದ ಬಗ್ಗೆ ಅಪಾರ ಅಭಿಮಾನ ಇಟ್ಟುಕೊಂಡಿದ್ದರು. ಈ ಮಧ್ಯೆ ಸಿಗ್ಗಹಟ್ಟಿ ನಿವಾಸಿ ಹರ್ಷ ಮುಸ್ಲಿಂ ಸಮುದಾಯಗಳಿರುವ ಪ್ರದೇಶಗಳಲ್ಲಿ ಕೆಲವೊಂದು ಹಿಂದೂ ಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದ. ಅದನ್ನು ಸಹಿಸಲಾರದೆ ಖಾಸಿಫ್ ಮತ್ತು ರಿಯಾನ್ 2-3 ಬಾರಿ ಹರ್ಷನ ಮೇಲೆ ದಾಳಿ ನಡೆಸಿದ್ದಾರೆ. ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ಕೂಡ ದಾಖಲಾಗಿದೆ. ಜತೆಗೆ ಖಾಸಿಫ್ ತಂಡ ಮತ್ತು ಹರ್ಷನ ತಂಡ ಒಮ್ಮೆ ಶಿವಮೊಗ್ಗ ಜೈಲಿನಲ್ಲಿ ಗಲಾಟೆ ಮಾಡಿಕೊಂಡಿದ್ದರು. ಹೀಗಾಗಿ ಹರ್ಷನ ಕೊಲೆಗೆ ರಿಯಾನ್ ಮತ್ತು ಖಾಸಿಫ್ ಸಂಚು ರೂಪಿಸಿದ್ದರು.

ಹಿಜಾಬ್ ವಿವಾದ ಪ್ರಚೋದನೆ

ರಾಜ್ಯದಲ್ಲಿ ಹಿಜಾಬ್ ವಿವಾದ ಉಂಟಾಗಿದ್ದು, ಮುಸ್ಲಿಂ ಸಮುದಾಯದವನ್ನು ಕಡೆಗಣಿಸಲಾಗುತ್ತಿತ್ತು. ಅದರಿಂದ ಆಕ್ರೋಶಗೊಂಡಿದ್ದ ಖಾಸಿಫ್ ಮತ್ತು ರಿಯಾನ್ ನಗರದಲ್ಲಿ ಯಾರಾದರೂ ಹಿಂದೂ ಕಾರ್ಯಕರ್ತನನ್ನು ಭೀಕರವಾಗಿ ಹತ್ಯೆಗೈಯಬೇಕು. ಅದು ಇಡೀ ರಾಜ್ಯ ಮತ್ತು ಹಿಂದೂ ಸಮುದಾಯದಲ್ಲಿ ಭಯ ಉಂಟು ಮಾಡಬೇಕು ಎಂದು ನಿರ್ಧರಿಸಿದ್ದರು. ಈ ನಡುವೆ ಹರ್ಷ ರಿಯಾನ್ ಜತೆ ಹಿಜಾಬ್ ವಿಚಾರವಾಗಿ ಗಲಾಟೆ ಮಾಡಿಕೊಂಡಿದ್ದ. ಅದರಿಂದ ಪ್ರಚೋದನೆಗೊಂಡ ರಿಯಾನ್, ಖಾಸಿಫ್, ಬೇರೆ ಹಿಂದೂ ಕಾರ್ಯಕರ್ತನ ಬದಲು ಹರ್ಷನ ಕೊಲೆಗೈದರೆ, ಹಳೇ ದ್ವೇಷದ ಪ್ರತಿಕಾರ ಹಾಗೂ ಹಿಂದೂ ಸಮುದಾಯಕ್ಕೂ ಎಚ್ಚರಿಕೆ ನೀಡಿದಂತಾಗುತ್ತದೆ ಎಂದು ತೀರ್ಮಾನಿಸಿ, ಜನವರಿ ಅಂತ್ಯ ಮತ್ತು ಫೆಬ್ರವರಿ ಆರಂಭದಲ್ಲಿ ಹರ್ಷನ ಕೊಲೆಗೆ ವಿಫಲ ಯತ್ನ ನಡೆದಿತ್ತು ಎಂದು ಮೂಲಗಳು ಹೇಳಿವೆ.

15 ದಿನಗಳಿಂದ ಸಂಚು

ಹರ್ಷನ ಹತ್ಯೆಗೆ ಬೇಕಾದ ಮಾರಕಾಸ್ತ್ರಗಳ ಖರೀದಿಗಾಗಿ ಕುಂಶಿ ಬಳಿ ಮನೆಯೊಂದರಲ್ಲಿ ಕಳ್ಳತನ ಮಾಡಿದ್ದರು. ಅದರಿಂದ ಶಿವಮೊಗ್ಗ ಮತ್ತು ಭದ್ರಾವತಿಯಲ್ಲಿ ಮಾರಕಾಸ್ತ್ರಗಳನ್ನು ಖರೀದಿಸಿದ್ದರು. ನಂತರ ಹರ್ಷನನ್ನು ಭೇಟಿಯಾಗಿದ್ದ ರಿಯಾನ್, ಪ್ರತಿ ಬಾರಿ ತಮ್ಮ ಸಮುದಾಯದ ಬಗ್ಗೆ ಟೀಕೆ ಮಾಡುವುದು ಸರಿಯಲ್ಲ. ಎಚ್ಚರಿಕೆಯಿಂದ ಇರು, ಉಳಿಗಾಲ ಇಲ್ಲ ಎಂದು ವಾರ್ನಿಂಗ್ ಕೊಟ್ಟಿದ್ದ. ಅನಂತರ ಸುಮಾರು 15 ದಿನಗಳ ಕಾಲ ಹರ್ಷನ ಕಾರ್ಯಚಟುವಟಿಕೆಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದ ತಂಡ ಕ್ಲಾರ್ಕ್‌ ಪೇಟೆಯಲ್ಲಿ ಸಭೆ ನಡೆಸಿತ್ತು. ತಮ್ಮ ಎಂಟು ಮಂದಿ ಸಹಚರರಿಗೆ ಹರ್ಷನ ಚಲನವಲನಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ಖಾಸಿಫ್ ಮತ್ತು ರಿಯಾನ್ ಸೂಚಿಸಿದ್ದರು.

ಅಂತಿಮವಾಗಿ ಫೆ.20ರಂದು ಹರ್ಷನನ್ನು ಎನ್.ಟಿ.ರಸ್ತೆಯ ಕಾಮತ್ ಪೆಟ್ರೋಲ್ ಬಂಕ್ ಬಳಿ ಭಾರತಿ ಕಾಲೋನಿಯಲ್ಲಿ ಭೀಕರವಾಗಿ ಹತ್ಯೆಗೈದಿದ್ದರು. ನಂತರ ಕಾನೂನು ಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯ್ದೆ(ಯುಎಪಿಎ) ಪ್ರಕರಣ ದಾಖಲಿಸಿಕೊಂಡ ಪೊಲೀಸರು ಹಾಸನ, ಬೆಂಗಳೂರು ಹಾಗೂ ಇತರೆ ಅಡಗಿದ್ದ ಆರೋಪಿಗಳನ್ನು ಬಂಧಿಸಿದ್ದರು. ತನಿಖೆಯಲ್ಲಿ ಕೋಮುಸೌಹಾರ್ದ ಕದಡುವ ಹುನ್ನಾರ ನಡೆದಿದೆ ಎಂಬ ಆರೋಪ ಮೇಲೆ ಪ್ರಕರಣವನ್ನು ಎನ್‌ಐಎಗೆ ವರ್ಗಾವಣೆ ಮಾಡಲಾಗಿತ್ತು. ಇದೀಗ ತನಿಖೆ ಪೂರ್ಣಗೊಳಿಸಿರುವ ಎನ್‌ಐಎ ಹತ್ತು ಮಂದಿ ಆರೋಪಿಗಳ ಹೇಳಿಕೆ ಹಾಗೂ ತಾಂತ್ರಿಕ ಸಾಕ್ಷಾಧಾರಗಳನ್ನು ಉಲ್ಲೇಖಿಸಿ 750ಕ್ಕೂ ಹೆಚ್ಚು ಪುಟಗಳ ಆರೋಪಪಟ್ಟಿ ಸಲ್ಲಿಸಿದೆ.

- Advertisement -

Related news

error: Content is protected !!