Sunday, May 5, 2024
spot_imgspot_img
spot_imgspot_img

ಹುಬ್ಬಳ್ಳಿ ಗಲಭೆ ಪ್ರಕರಣದಲ್ಲಿ ಮತ್ತೆ 8 ಆರೋಪಿಗಳ ಬಂಧನ; ಬಂಧಿತರ ಸಂಖ್ಯೆ 154ಕ್ಕೆ ಏರಿಕೆ

- Advertisement -G L Acharya panikkar
- Advertisement -

ಹುಬ್ಬಳ್ಳಿ: ಹಳೇ ಹುಬ್ಬಳ್ಳಿಯಲ್ಲಿ ಇತ್ತೀಚೆಗೆ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮತ್ತೆ 8 ಆರೋಪಿಯನ್ನು ಬಂಧಿಸಿದ್ದು, ಬಂಧಿತರ ಸಂಖ್ಯೆ 154ಕ್ಕೆ ಏರಿಕೆಯಾಗಿದೆ. ಬಂಧನಕ್ಕೊಳಗಾಗಿರುವ ಆರೋಪಿಗಳು ನೀಡಿರುವ ಸುಳಿವಿನ ಮೇರೆಗೆ ತಲೆಮರೆಸಿಕೊಂಡಿರುವ ಆರೋಪಿಗಳನ್ನು ಬಂಧಿಸಲಾಗುತ್ತಿದೆ.

ಹಾವೇರಿ, ಗದಗ, ದಾಂಡೇಲಿಯಲ್ಲಿ ತಲೆಮರೆಸಿಕೊಂಡಿದ್ದ ಕೆಲವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಗಲಭೆ ಪ್ರಕರಣದ ಪ್ರಮುಖ ಆರೋಪಿ ಎನ್ನಲಾದ ವಸೀಂ ಪಠಾಣ್‍ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಪೊಲೀಸ್ ವಶದಲ್ಲಿದ್ದ ವಸೀಂ ಪಠಾಣ್‍ನನ್ನು ಗೌಪ್ಯ ಸ್ಥಳಕ್ಕೆ ಕರೆದೊಯ್ದು ತೀವ್ರ ವಿಚಾರಣೆ ನಡೆಸಲಾಯಿತು. ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದಾಗ ಏ.30ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು, ಸದ್ಯ ಧಾರವಾಡ ಕಾರಾಗೃಹದಲ್ಲಿ ಇರಿಸಲಾಗಿದೆ. ಆರೋಪಿಗಳಾದ ನಾಸೀರ್ ಅಹಮ್ಮದ್ ಹೊನ್ಯಾಳ, ಆರೀಫ್ ನಾಗರಾಜ್ ಅವರನ್ನು ವಿಚಾರಣೆಗೆ ಪೊಲೀಸ್ ವಶಕ್ಕೆ ಪಡೆಯಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಬಂಧಿತರ ವಿಚಾರಣೆ ಮುಂದುವರೆದಿದೆ.

ಗಲಭೆ ಆದಾಗಿನಿಂದಲೂ ಗಲಭೆಕೋರರ ಬಂಧಿಸುವಲ್ಲಿ ಆರಂಭದಲ್ಲಿ ಬ್ಯುಸಿಯಾಗಿದ್ದ ಪೊಲೀಸರು ನಂತರ ಎರಡು ದಿನಗಳ ಕಾಲ ಯಾವುದೇ ಆರೋಪಿಗಳನ್ನು ಬಂಧಿಸಿರಲಿಲ್ಲ. ಮೊದಲು ಬಂಧನ ಮಾಡಿದವರ ವಿಚಾರಣೆ, ನ್ಯಾಯಾಲಯಕ್ಕೆ ಹಾಜರುಪಡಿಸುವುದು, ಸ್ಥಳ ಮಹಜರು ಮಾಡುವುದು, ಎಲ್ಲ ಮಾಹಿತಿಗಳ ಪರಿಶೀಲನೆ ಸೇರಿದಂತೆ ವಿವಿಧ ತನಿಖೆಯಲ್ಲಿ ತಲೀನರಾಗಿದ್ದರು.

ಈಗ ಮತ್ತೆ ಆರೋಪಿಗಳ ಎಡೆಮುರಿ ಕಟ್ಟುತ್ತಿದ್ದು, ಬಂಧಿತರ ಸಂಖ್ಯೆ ಏರಿಕೆಯಾಗುತ್ತಿದೆ. ಬಂಧಿತ ವಿಚಾರಣೆ ಮತ್ತು ಗಲಭೆ ಕುರಿತು ಮತ್ತಷ್ಟು ಮಾಹಿತಿ ಕಲೆ ಹಾಕುತ್ತಿದ್ದಾರೆ. ಈ ಮಧ್ಯೆ ಬಂಧಿತರ ಸಂಬಂಧಿಗಳು ಠಾಣೆಗೆ ಭೇಟಿ ನೀಡುವುದು, ನಮ್ಮ ಮಗ ಅಮಾಯಕ, ಅವನನ್ನು ಬಿಟ್ಟುಬಿಡಿ ಎಂದು ಪೊಲೀಸರ ಎದುರು ಅಳಲು ತೋಡಿಕೊಳ್ಳುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು.

ಗಲಭೆ ನಂತರದಲ್ಲಿ ರಣರಂಗದಂತಾಗಿದ್ದ ಹಳೇ ಹುಬ್ಬಳ್ಳಿ ಪ್ರದೇಶ ಇದೀಗ ಸಹಜ ಸ್ಥಿತಿಗೆ ಮರಳಿದೆ. ನಿಷೇಧಾಜ್ಞೆಯನ್ನು ಹಿಂಪಡೆಯಲಾಗಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಕ್ರಮ ಕೈಗೊಳ್ಳಲಾಗಿದೆ. ಈ ಮೂಲಕ ಹಳೇ ಹುಬ್ಬಳ್ಳಿ ಭಾಗ ಸಹಜ ಸ್ಥಿತಿಯತ್ತ ಮರಳಿದ್ದು, ನಿರಾಂತಕ ವಾತಾವರಣವಿದೆ ಎಂಬ ಸಂದೇಶವನ್ನು ಪೊಲೀಸರು ರವಾನಿಸಿದ್ದಾರೆ.

- Advertisement -

Related news

error: Content is protected !!