


ಅಮರಾವತಿ: ಪ್ರೀತಿ ನಿರಾಕರಿಸಿದ್ದಕ್ಕೆ 21 ವರ್ಷದ ಯುವಕನೊಬ್ಬ ಶಾಲೆಗೆ ನುಗ್ಗಿ 10ನೇ ತರಗತಿ ವಿದ್ಯಾರ್ಥಿನಿಯ ಮೇಲೆ ಮರ ಕಡಿಯುವ ಯಂತ್ರದಿಂದ ಭೀಕರವಾಗಿ ಹಲ್ಲೆ ನಡೆಸಿರುವ ಘಟನೆ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ರಾಪ್ತಾಡು ಮಂಡಲದ ಸರ್ಕಾರಿ ಶಾಲೆಯಲ್ಲಿ ನಡೆದಿದೆ.
ಗೋಪಿಕಾ ಮೃತ ವಿದ್ಯಾರ್ಥಿನಿ. ತರಗತಿಯಲ್ಲಿ ಪಾಠ ನಡೆಯುತ್ತಿದ್ದ ಸಂದರ್ಭದಲ್ಲಿ ಆರೋಪಿ ಯಂತ್ರದೊಂದಿಗೆ ಒಳನುಗ್ಗಿದ್ದು, ತರಗತಿಯಲ್ಲಿದ್ದ ಇತರ ವಿದ್ಯಾರ್ಥಿಗಳು ನೋಡುತ್ತಿದ್ದಂತೆಯೇ ಆರೋಪಿ ಗೋಪಿಕಾಳ ಮುಖದ ಮೇಲೆ ಭೀಕರವಾಗಿ ಹಲ್ಲೆ ನಡೆಸಿದ್ದಾನೆ. ಅಷ್ಟೇ ಅಲ್ಲದೆ, ಆಕೆಯ ತಲೆ ಮತ್ತು ಬೆನ್ನಿನ ಭಾಗಕ್ಕೂ ಗಾಯಗಳಾಗಿವೆ. ಈ ವೇಳೆ ಹಲ್ಲೆಯನ್ನು ತಡೆಯಲು ಮಧ್ಯಪ್ರವೇಶಿಸಿದ ಲಕ್ಷ್ಮಿ ಎಂಬ ಮತ್ತೊಬ್ಬ ವಿದ್ಯಾರ್ಥಿನಿಗೂ ಗಾಯಗಳಾಗಿವೆ.
ದಾಳಿ ನಡೆಸಿದ ಬಳಿಕ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ಗೋಪಿಕಾ ತೀವ್ರ ರಕ್ತಸ್ರಾವದಿಂದ ತರಗತಿಯಲ್ಲೇ ಕುಸಿದು ಬಿದ್ದಿದ್ದಾಳೆ. ಘಟನೆಯನ್ನು ಕಣ್ಣಾರೆ ಕಂಡ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ತಕ್ಷಣವೇ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತೀವ್ರ ಗಾಯಗೊಂಡಿದ್ದ ಗೋಪಿಕಾಳನ್ನು ಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಕೂಡಲೇ ಸಮೀಪದ ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ಕೊಡಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೇ ವಿದ್ಯಾರ್ಥಿನಿ ಮೃತಪಟ್ಟಿದ್ದಾಳೆ.
ಗೋಪಿಕಾಳ ದೂರದ ಸಂಬಂಧಿಯಾಗಿದ್ದ ಆರೋಪಿ ಕಳೆದ ಕೆಲವು ಸಮಯದಿಂದ ಗೋಪಿಕಾಳಿಗೆ ತನ್ನನ್ನು ಪ್ರೀತಿಸುವಂತೆ ಕಿರುಕುಳ ನೀಡುತ್ತಿದ್ದ ಎಂದು ತಿಳಿದುಬಂದಿದೆ. ಆದರೆ ಗೋಪಿಕಾ ಆತನ ಪ್ರೀತಿ ನಿರಾಕರಿಸಿದ್ದು, ತನ್ನನ್ನು ಹಿಂಬಾಲಿಸದಂತೆ ಹಾಗೂ ಆತನ ವರ್ತನೆಯ ಬಗ್ಗೆ ಪೋಷಕರಿಗೆ ದೂರು ನೀಡುವುದಾಗಿ ಎಚ್ಚರಿಕೆ ನೀಡಿದ್ದಳು ಎನ್ನಲಾಗಿದೆ. ಇದರಿಂದ ಆಕ್ರೋಶಗೊಂಡ ಆರೋಪಿ ಗೋಪಿಕಾಳ ಮೇಲೆ ದ್ವೇಷ ಬೆಳೆಸಿಕೊಂಡಿದ್ದ. ಇದೇ ಕಾರಣಕ್ಕೆ ಶಾಲೆಯ ತರಗತಿಯೊಳಗೆ ನುಗ್ಗಿ ಆಕೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಪರಾರಿಯಾಗಿರುವ ಆರೋಪಿಗಾಗಿ ಪೊಲೀಸರು ಶೋಧ ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ ಎಂದು ತಿಳಿದುಬಂದಿದೆ.








