
ಮಂಗಳೂರು: ವೈವಾಹಿಕ ಕಲಹದ ಹಿನ್ನೆಲೆಯಿಂದಾಗಿ ವ್ಯಕ್ತಿಯೊಬ್ಬ ಕತ್ತಿ ಹಿಡಿದು ಮನೆಗೆ ನುಗ್ಗಿ ದಾಳಿ ನಡೆಸಲು ಯತ್ನಿಸಿದ ಘಟನೆ ನಗರದ ಹೊರವಲಯದಲ್ಲಿ ನಡೆದಿದೆ.


ವಾಮಂಜೂರು ನಿವಾಸಿ ನವೀನ್ ಎಂಬಾತನಿಗೆ ಪತ್ನಿಯೊಂದಿಗೆ ಉಂಟಾದ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ವಿಚ್ಛೇದನವಾಗಿದ್ದು, ಪತ್ನಿ ಕಳೆದ ಕೆಲ ತಿಂಗಳಿನಿಂದ ಜೋಕಟ್ಟೆಯಲ್ಲಿ ಪ್ರತ್ಯೇಕವಾಗಿ ವಾಸವಾಗಿದ್ದಳು ಎಂದು ತಿಳಿದುಬಂದಿದೆ.ಈ ನಡುವೆಯೇ, ನಿನ್ನೆ ರಾತ್ರಿ ನವೀನ್ ಕತ್ತಿ ಹಿಡಿದು ಕಲಾವರ ನಿವಾಸಿ ದೇವಿ ಪ್ರಸಾದ್ ಅವರ ಮನೆಗೆ ತೆರಳಿ, ಅವರ ಮೇಲೆ ಹಾಗೂ ಅವರ ಪೋಷಕರ ಮೇಲೆ ದಾಳಿ ನಡೆಸಲು ಯತ್ನಿಸಿದ್ದಾನೆ ಎನ್ನಲಾಗಿದೆ. ಅಪಾಯವನ್ನು ಅರಿತ ದೇವಿ ಪ್ರಸಾದ್ ತಕ್ಷಣವೇ 112ಕ್ಕೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಘಟನೆಯ ಬಳಿಕ ಪರಾರಿಯಾಗಲು ಯತ್ನಿಸಿದ ನವೀನ್, ಬೈಕ್‌ನಲ್ಲಿ ತಪ್ಪಿಸಿಕೊಳ್ಳುವ ವೇಳೆ ಬಿದ್ದು ಗಾಯಗೊಂಡಿದ್ದು, ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಸ್ಥಳಕ್ಕೆ ಬಂದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.ಈ ಸಂಬಂಧ ದೇವಿ ಪ್ರಸಾದ್ ನೀಡಿದ ದೂರಿನ ಮೇರೆಗೆ ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ 307 ಕಲಂ (ಹತ್ಯೆ ಯತ್ನ) ಹಾಗೂ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.ಪ್ರಸ್ತುತ ಆರೋಪಿ ಪೊಲೀಸ್ ಠಾಣೆಯಲ್ಲಿ ವಶದಲ್ಲಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.









