
ಬೆಂಗಳೂರು: ರಾಜ್ಯದ ವಿದ್ಯುತ್ ನಿಗಮಗಳ ಖಾಸಗೀಕರಣ ಕುರಿತ ಅಂತಿಮ ನಿರ್ಧಾರವನ್ನು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭರವಸೆ ನೀಡಿದ್ದಾರೆ.
ಬೆಂಗಳೂರು ಅರಮನೆ ಮೈದಾನದಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘ ಹಾಗೂ ಅಸೋಸಿಯೇಷನ್ ಒಕ್ಕೂಟ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಖಾಸಗೀಕರಣ ವಿಚಾರದಲ್ಲಿ ತಾವು ಏಕಪಕ್ಷೀಯವಾಗಿ ತೀರ್ಮಾನ ಕೈಗೊಳ್ಳುವುದಿಲ್ಲ. ನೌಕರರ ಅಭಿಪ್ರಾಯಕ್ಕೂ ಸರ್ಕಾರ ಗೌರವ ನೀಡಲಿದೆ ಎಂದು ಹೇಳಿದರು.2003ರಲ್ಲಿ ವಿದ್ಯುತ್ ಕ್ಷೇತ್ರದ ಖಾಸಗೀಕರಣಕ್ಕೆ ಅವಕಾಶ ಕಲ್ಪಿಸುವ ಕಾನೂನು ಜಾರಿಯಾದಾಗ ಯಾರೂ ವಿರೋಧ ವ್ಯಕ್ತಪಡಿಸಲಿಲ್ಲ. ಈಗ ಸರ್ಕಾರದ ಬಳಿ ಬಂದು ಖಾಸಗೀಕರಣ ತಡೆಯುವಂತೆ ಮನವಿ ಮಾಡುತ್ತಿರುವುದಾಗಿ ಹೇಳಿದ ಸಿಎಂ, ಒಳ್ಳೆಯ ಕೆಲಸ ಮಾಡಿದವರನ್ನು ಮೆಚ್ಚುವಂತೆಯೇ ತಪ್ಪು ಮಾಡಿದವರ ವಿರುದ್ಧವೂ ಧ್ವನಿ ಎತ್ತಬೇಕು ಎಂದು ತಿಳಿಸಿದರು.”ನೀವು ನಮ್ಮನ್ನು ಕಾಳಜಿ ಮಾಡಿದರೆ, ನಾವು ನಿಮ್ಮನ್ನು ಕಾಳಜಿ ಮಾಡುತ್ತೇವೆ. ನಿಮ್ಮ ಅಭಿಪ್ರಾಯವೇ ನನ್ನ ಅಭಿಪ್ರಾಯ. ನಿಮ್ಮ ನಂಬಿಕೆಯನ್ನು ಉಳಿಸಿಕೊಳ್ಳುತ್ತೇನೆ” ಎಂದು ಅವರು ನೌಕರರಿಗೆ ಭರವಸೆ ನೀಡಿದರು.
ಇಂಧನ ಇಲಾಖೆ ಸಿಬ್ಬಂದಿಯನ್ನು “ಕತ್ತಲನ್ನು ದೂರ ಮಾಡುವ ಕಾಯಕ ಜೀವಿಗಳು” ಎಂದು ಬಣ್ಣಿಸಿದ ಸಿಎಂ, ರಾಜ್ಯದಲ್ಲಿ ವಿದ್ಯುತ್ ಸೋರಿಕೆ ಪ್ರಮಾಣವನ್ನು 19 ಶೇಕಡೆಯಿಂದ 10 ಶೇಕಡೆಗೆ ಇಳಿಸಿರುವುದು ಸರ್ಕಾರದ ಪ್ರಮುಖ ಸಾಧನೆ ಎಂದು ಹೇಳಿದರು.








