
ಬೆಂಗಳೂರು: ರಸ್ತೆ ಜಗಳ (ರೋಡ್ ರೇಜ್) ಸಂಬಂಧ ದೂರು ನೀಡಲು ತೆರಳಿದ್ದ ಮಹಿಳಾ ವಕೀಲೆ ಠಾಣೆಯಲ್ಲಿ ದಾಂಧಲೆ ಎಬ್ಬಿಸಿದ್ದಾರೆ ಎಂಬ ಕಾರಣಕ್ಕೆ ಬೂಟು ಕಾಲಿನಲ್ಲಿ ಒದ್ದು ಹಲ್ಲೆ ನಡೆಸಿದ್ದ ಮಹಿಳಾ ಪೊಲೀಸ್ ಅಧಿಕಾರಿ ವಿರುದ್ಧ ಪ್ರಕರಣ ದಾಖಲಿಸಲು ಹೈಕೋರ್ಟ್ ಆದೇಶಿಸಿದೆ.ನಗರದ ಮೈಕೋ ಲೇಔಟ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ರದ್ದು ಕೋರಿ ವಕೀಲೆ ನಬೋನಿತಾ ಸೇನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ. ಇದೇ ವೇಳೆ, ಅರ್ಜಿದಾರ ವಕೀಲೆಯ ವಿರುದ್ಧ ತಡೆ ನೀಡುವುದಕ್ಕೂ ನ್ಯಾಯಪೀಠ ನಿರಾಕರಿಸಿದೆ.


ಪೊಲೀಸ್ ಠಾಣೆಯ ಟೇಬಲ್ ಮೇಲಿನ ಕೆಲ ದಾಖಲೆಗಳನ್ನು ಅರ್ಜಿದಾರೆ ಎಳೆದು ಬಿಸಾಡಿದರು ಎಂಬ ಕಾರಣಕ್ಕೆ ಮಹಿಳಾ ಪೊಲೀಸ್ ಅಧಿಕಾರಿ ಪದ್ಮಾವತಿ ಅವರು ಸಕಾರಣವಿಲ್ಲದೆ ಬೂಟಿನ ಕಾಲಿನಲ್ಲಿ ಒದ್ದಿದ್ದಾರೆ ಎನ್ನುವುದು ಠಾಣೆಯ ಸಿಸಿ ಕ್ಯಾಮರಾ ದೃಶ್ಯಾವಳಿಯಿಂದ ಖಾತ್ರಿಯಾಗಿದೆ. ಆದರೂ, ಪದ್ಮಾವತಿ ವಿರುದ್ಧ ಪ್ರಕರಣ ದಾಖಲಾಗಿಲ್ಲ. ಆದ್ದರಿಂದ, ಇಂಥ ಕೃತ್ಯ ಎಸಗಿದ ಅಧಿಕಾರಿಗೆ ಇಲಾಖಾ ವಿಚಾರಣೆಯ ಮೂಲಕ ಎಚ್ಚರಿಕೆ ನೀಡುವುದಲ್ಲ, ಅವರ ವಿರುದ್ಧ ಪ್ರಕರಣ ದಾಖಲಿಸಿ, ತನಿಖೆ ನಡೆಸಬೇಕು ಎಂದು ಆದೇಶಿಸಿತು.

ವಕೀಲೆಯ ನಡೆಗೂ ಹೈಕೋರ್ಟ್ ಆಕ್ಷೇಪ:
ವಿಚಾರಣೆಯ ವೇಳೆ ನ್ಯಾಯಪೀಠ ಅರ್ಜಿದಾರೆ ವಕೀಲೆಯನ್ನು ಕುರಿತು, ಪೊಲೀಸ್ ಠಾಣೆಯಲ್ಲಿ ದಾಂಧಲೆ ಸೃಷ್ಟಿಸಿದ್ದೇಕೆ? ಠಾಣೆಯ ಕಾಗದಗಳನ್ನು ಬಿಸಾಡಿರುವುದು ಏಕೆ? ಪ್ರಕರಣ ದಾಖಲಿಸಿದ್ದು, ವಿಳಂಬವಾಯಿತು ಎಂದು ಹೀಗೆಲ್ಲ ಮಾಡಬಹುದೇ? ನಿಮಗೆ ಬೂಟಿನ ಕಾಲಿನಲ್ಲಿ ಒದ್ದ ಮಹಿಳಾ ಪೊಲೀಸ್ ಅಧಿಕಾರಿಯ ವಿರುದ್ಧ ಪ್ರಕರಣ ದಾಖಲಿಸಲು ಆದೇಶಿಸಲಾಗುವುದು. ಆದರೆ, ವಕೀಲೆಯಾಗಿದ್ದು ಕೊಂಡು ನೀವು ನಡೆದುಕೊಂಡಿರುವ ರೀತಿಯೂ ಸರಿಯಲ್ಲ. ಪೊಲೀಸ್ ಅಧಿಕಾರಿಯಾಗಿ ಅವರು ನಡೆದುಕೊಂಡಿರುವುದೂ ಸರಿಯಿಲ್ಲ. ಆದ್ದರಿಂದ, ನಿಮ್ಮ ವಿರುದ್ಧದ ಪ್ರಕರಣವೂ ಮುಂದುವರಿಯಲಿದೆ ಎಂದು ಹೇಳಿತು.ರಾಜ್ಯ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಬಿ.ಎನ್. ಜಗದೀಶ್ ಅವರು, ಪೊಲೀಸ್ ಅಧಿಕಾರಿಯ ವಿರುದ್ಧ ಪ್ರಕರಣ ದಾಖಲಿಸಲು ಆದೇಶಿಸುವುದಕ್ಕೆ ವಿರೋಧವಿಲ್ಲ. ಆದರೆ, ಈ ಅರ್ಜಿಯನ್ನು ಮುಕ್ತಾಯಗೊಳಿಸಬಾರದು. ಅರ್ಜಿದಾರೆ ಅತ್ಯಂತ ಕೆಟ್ಟ ಭಾಷೆ ಬಳಸಿದ್ದಾರೆ ಎಂದರು.
ಅರ್ಜಿದಾರೆಯ ಪರ ವಾದ ಮಂಡಿಸಿದ ವಕೀಲ ಡಿ.ಎಲ್. ಮೂರ್ತಿ, ಪೊಲೀಸರು ಎರಡು ಗಂಟೆ ಕಾಯುವಂತೆ ಮಾಡಿದ್ದಾರೆ. ಪ್ರಕರಣದಿಂದಾಗಿ ಕೆಲಸವೂ ಹೋಗಿದೆ ಎಂದರು.ಆಗ ನ್ಯಾಯಪೀಠ, ಪೊಲೀಸ್ ಅಧಿಕಾರಿ ಪದ್ಮಾವತಿ ಅವರ ಸೇವಾ ದಾಖಲೆಗಳಲ್ಲಿ ಪ್ರಕರಣ ದಾಖಲಾಗಿರುವುದನ್ನು ಉಲ್ಲೇಖಿಸಬೇಕು. ಅವರಿಗೆ ಯಾವುದೇ ಪದೋನ್ನತಿ ನೀಡಬಾರದು. ಇನ್‌ಸ್ಪೆಕ್ಟರ್ (ಮಡಿವಾಳ ಪೊಲೀಸ್ ಠಾಣೆ) ಆಗಿಯೇ ಅವರು ನಿವೃತ್ತಿ ಹೊಂದಬೇಕು ಎಂದು ಹೇಳಿತು.ಮುಂದುವರಿದು, ಎರಡು ಗಂಟೆ ಕಾಯಿಸಲಾಗಿದೆ ಎಂದು ಠಾಣೆಯ ಟೇಬಲ್ ಮೇಲಿನ ದಾಖಲೆಗಳನ್ನು ಆಕ್ರೋಶದಿಂದ ಮಹಿಳಾ ವಕೀಲೆ ಎತ್ತಿ ಬಿಸಾಡಿದ್ದರು.
ಇದರಿಂದ, ರಾತ್ರಿ ಗಸ್ತನಲ್ಲಿದ್ದ ಇನ್‌ಸ್ಪೆಕ್ಟರ್ ಪದ್ಮಾವತಿ ಅವರು ಬೂಟು ಕಾಲಿನಲ್ಲಿ ವಕೀಲೆಯ ಮೇಲೆ ಹಲ್ಲೆ ನಡೆಸಿದ್ದರು. ಇತರ ಪೊಲೀಸರು ಏಕೆ ಇದನ್ನು ತಡೆಯಲಿಲ್ಲ ಎಂದು ಕೇಳಿತು
ಪ್ರಕರಣವೇನು?
ಅರ್ಜಿದಾರ ವಕೀಲೆ 2025ರ ಫೆಬ್ರವರಿ 23ರಂದು ಕಾರಿನಲ್ಲಿ ತೆರಳುತ್ತಿದ್ದಾಗ ಆಟೋ ಚಾಲಕನೊಬ್ಬ ಕಾರನ್ನು ಹಿಂದಿಕ್ಕಿ ಅಡ್ಡಗಟ್ಟಿ ಕಾರಿಗೆ ಕಲ್ಲಿನಿಂದ ಹಲ್ಲೆ ನಡೆಸಿ, ಕಿಟಕಿಯ ಗಾಜು ಪುಡಿಗಟ್ಟಿದ್ದನು. ಈ ಸಂಬಂಧ ದೂರು ದಾಖಲಿಸಲು ವಕೀಲೆ ಪೊಲೀಸ್ ಠಾಣೆಗೆ ತೆರಳಿದ್ದರು.
ಈ ವೇಳೆ ಎರಡು ಗಂಟೆ ಪೊಲೀಸರು ಕಾಯುವಂತೆ ಮಾಡಿದ್ದರಿಂದ ಸಿಟ್ಟಿಗೆದ್ದ ಆಕೆ ಠಾಣೆಯಲ್ಲಿ ದಾಂದಲೆ ಎಬ್ಬಿಸಿದ್ದರು. ಈ ವೇಳೆ ಪೊಲೀಸ್ ಅಧಿಕಾರಿ ಪದ್ಮಾವತಿ ವಕೀಲೆಗೆ ಬೂಟು ಕಾಲಿನಿಂದ ಹಲ್ಲೆ ನಡೆಸಿದ್ದರು ಎಂದು ಆರೋಪಿಸಲಾಗಿದೆ.








