Sunday, August 2, 2026
spot_imgspot_img
spot_imgspot_img

ಸ್ನೇಹ ಸಂಬಂಧವಷ್ಟೇ ಅಲ್ಲ, ಬದುಕಿನ ಆಧಾರ-ಇಂದು ಸ್ನೇಹಿತರ ದಿನಾಚರಣೆ

- Advertisement -
- Advertisement -

ಡಾ. ಮೈತ್ರಿ ಭಟ್, ವಿಟ್ಲ

ಒಂದು ಕಾಲದಲ್ಲಿ ಮನೆಯ ಮುಂಭಾಗದ ಅಂಗಳದಲ್ಲಿ ಸಂಜೆ ಹೊತ್ತು ಸ್ನೇಹಿತರ ನಗುವಿನ ಸದ್ದು ಕೇಳಿಸುತ್ತಿತ್ತು. ಈಗ ಅದೇ ಮನೆಯಲ್ಲಿ ಮೌನ ತಾಂಡವವಾಡುತ್ತಿರುತ್ತದೆ. ಮೊಬೈಲ್‌ನಲ್ಲಿ ಸಾವಿರಾರು ಸಂಪರ್ಕಗಳಿದ್ದರೂ, ಮನಸ್ಸಿನ ನೋವನ್ನು ಹೇಳಿಕೊಳ್ಳಲು ಒಬ್ಬ ವ್ಯಕ್ತಿಯೂ ಇಲ್ಲದಿರುವುದು ಇಂದಿನ ನಾಗರೀಕತೆಯ ಅತ್ಯಂತ ದೊಡ್ಡ ವಿಪರ್ಯಾಸ. ವಿಜ್ಞಾನವು ಜಗತ್ತನ್ನು ಬಹಳಷ್ಟು ಹತ್ತಿರಕ್ಕೇನೋ ತಂದಿದೆ; ಆದರೆ ಮನುಷ್ಯನ ಮನಸ್ಸನ್ನು ಮತ್ತಷ್ಟು ಏಕಾಂತಕ್ಕೆ ತಳ್ಳಿದೆ.

ಈ ಏಕಾಂತದಿ ಬೇಯುವ ಮನಸಲಿ ತಂಗಾಳಿಯಂತೆ ಸುಳಿದು ಕತ್ತಲೆಯೊಳಗೆ ದೀಪದಂತೆ ಬೆಳಗಬೇಕಾದದ್ದು ಸ್ನೇಹ.ಮನುಷ್ಯನು ಹುಟ್ಟುವಾಗ ಅವನ ಎಲ್ಲಾ ಸಂಬಂಧಗಳನ್ನು ವಿಧಿಯು ನಿರ್ಧರಿಸುತ್ತದೆ. ತಾಯಿ-ತಂದೆ, ಸಹೋದರ-ಸಹೋದರಿ, ಕುಟುಂಬ ಇವೆಲ್ಲವೂ ವ್ಯಕ್ತಿಯ ಬದುಕಿನಲ್ಲಿ ದೊರೆಯುವ ಅಮೂಲ್ಯ ವರಗಳು. ಆದರೆ ಅವೆಲ್ಲದಕ್ಕಿಂತ ಭಿನ್ನವಾದ ಸ್ನೇಹ ಮಾತ್ರ ನಾವು ಆಯ್ಕೆ ಮಾಡಿಕೊಂಡ ಸಂಬಂಧ. ರಕ್ತದ ಸಂಬಂಧವಿಲ್ಲದಿದ್ದರೂ, ಹೃದಯದ ಬಾಂಧವ್ಯದಿಂದ ಜೀವಮಾನವಿಡೀ ಉಳಿಯಬಲ್ಲ ಬಂಧ ಅದು. ಅದಕ್ಕಾಗಿಯೇ ಸ್ನೇಹವನ್ನು ಸಂಬಂಧಗಳಿಗಿಂತ ಮೌಲ್ಯಗಳ ಮೇಲೆ ನಿಂತಿರುವ ಬಂಧ ಎಂದು ಕರೆಯುತ್ತಾರೆ.ಆದರೆ ಇಂದಿನ ಸಮಾಜದಲ್ಲಿ ಸ್ನೇಹದ ಅರ್ಥವೂ ಬದಲಾಗುತ್ತಿದೆ. ಹಿಂದೆ ಸ್ನೇಹವು ಮನಸ್ಸುಗಳನ್ನು ಜೋಡಿಸುತ್ತಿತ್ತು; ಈಗ ಅದು ಅನೇಕ ಬಾರಿ ‘ನೆಟ್‌ವರ್ಕ್’ಗಳನ್ನು ನಿರ್ಮಿಸುತ್ತಿದೆ. ವ್ಯಕ್ತಿತ್ವಕ್ಕಿಂತ ಉಪಯುಕ್ತತೆ, ಆತ್ಮೀಯತೆಯಿಗಿಂತ ಅವಕಾಶ, ವಿಶ್ವಾಸಕ್ಕಿಂತ ಲಾಭ ಮುಖ್ಯವಾಗುತ್ತಿರುವುದು ವಿಷಾದನೀಯ. “ಈ ವ್ಯಕ್ತಿಯಿಂದ ನನಗೆ ಏನು ಪ್ರಯೋಜನ?” ಎಂಬ ಪ್ರಶ್ನೆ ಸಂಬಂಧಗಳ ಆಧಾರವಾದಾಗ, ಸ್ನೇಹ ತನ್ನ ಪವಿತ್ರತೆಯನ್ನು ಕಳೆದುಕೊಳ್ಳುತ್ತದೆ.

ಸಾಮಾಜಿಕ ಜಾಲತಾಣಗಳು ಈ ಬದಲಾವಣೆಯನ್ನು ಇನ್ನಷ್ಟು ವೇಗಗೊಳಿಸಿವೆ. ಫ್ರೆಂಡ್ ರಿಕ್ವೆಸ್ಟ್ ಕಳುಹಿಸುವುದು ಸುಲಭ; ಆದರೆ ಸ್ನೇಹದ ಜವಾಬ್ದಾರಿಯನ್ನು ಹೊರುವುದು ಕಷ್ಟ. ಏನೇ ಹೇಳಿ… ಸಾವಿರಾರು ‘ಲೈಕ್’ಗಳು ಮನಸ್ಸಿನ ಖಾಲಿತನವನ್ನು ತುಂಬಲಾರವು. ನೂರಾರು ‘ಇಮೋಜಿ’ಗಳು ಕಣ್ಣೀರನ್ನು ಒರೆಸಲಾರವು. ಪರದೆಯ ಮೇಲೆ ಹತ್ತಿರವಾಗುವಿಕೆ ಹೆಚ್ಚಿದಂತೆ, ಹೃದಯಗಳ ನಡುವಿನ ಅಂತರವೂ ಹೆಚ್ಚುತ್ತಿರುವುದು ನಮ್ಮ ಕಾಲದ ದುರಂತ.ಈ ಬೆಳವಣಿಗೆಯ ಪರಿಣಾಮ ಇಂದು ಯುವಜನತೆಯಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ. ಒತ್ತಡ, ಆತಂಕ, ಖಿನ್ನತೆ, ಏಕಾಂತ ಇವು ನಮ್ಮ ಸಮಾಜದ ಭಾವನಾತ್ಮಕ ಬಿರುಕುಗಳ ಪ್ರತಿಬಿಂಬಗಳು. ಪರೀಕ್ಷೆಯ ಒತ್ತಡವಾಗಲೀ, ಉದ್ಯೋಗದ ಅನಿಶ್ಚಿತತೆಯಾಗಲೀ, ವೈಯಕ್ತಿಕ ಸೋಲಾಗಲೀ ಇವುಗಳನ್ನು ಎದುರಿಸಲು ಕೆಲವೊಮ್ಮೆ ಔಷಧಿಗಿಂತ ಹೆಚ್ಚು ಬೇಕಾಗುವುದು ಒಬ್ಬ ನಿಜವಾದ ಆತ್ಮೀಯ ಸ್ನೇಹಿತನ ಮಾತು. “ನಿನ್ನ ಜೊತೆ ನಾನಿದ್ದೇನೆ” ಎಂಬ ಸಾಲೇ ಅದೆಷ್ಟೋ ಮುರಿದ ಮನಸ್ಸುಗಳಿಗೆ ಬದುಕುವ ಧೈರ್ಯವನ್ನು ನೀಡುತ್ತದೆ.

ದುರದೃಷ್ಟವಶಾತ್, ನಮ್ಮ ಶಿಕ್ಷಣ ವ್ಯವಸ್ಥೆಯೂ ಸ್ನೇಹದ ಮೌಲ್ಯವನ್ನು ಮರೆತಂತಿದೆ. ಅಂಕಗಳು, ರ‍್ಯಾಂಕ್‌ಗಳು, ಸ್ಪರ್ಧೆಗಳು ಇವುಗಳ ನಡುವೆ ಸಹಕಾರ, ಸಹಾನುಭೂತಿ, ಹಂಚಿಕೊಳ್ಳುವ ಗುಣಗಳು ಹಿಂಬದಿಗೆ ಸರಿಯುತ್ತಿವೆ. ಗೆಲ್ಲುವುದನ್ನು ಕಲಿಸಲಾಗುತ್ತಿದೆ. ಆದರೆ ಜೊತೆಯಾಗಿ ನಡೆಯುವುದನ್ನು ಕಲಿಸಲಾಗುತ್ತಿಲ್ಲ. ಪ್ರತಿಭಾವಂತ ವಿದ್ಯಾರ್ಥಿಗಳನ್ನು ನಾವು ರೂಪಿಸುತ್ತಿದ್ದೇವೆ; ಆದರೆ ಉತ್ತಮ ಸ್ನೇಹಿತರನ್ನು ರೂಪಿಸುತ್ತಿದ್ದೇವೆಯೇ ಎಂಬ ಪ್ರಶ್ನೆ ಎದುರಾಗುತ್ತದೆ.ಜೊತೆಗೆ, ಇಂದಿನ ಕುಟುಂಬಗಳ ಸ್ಥಿತಿಯೂ ಭಿನ್ನವಾಗಿಲ್ಲ. ಹಿಂದೆ ನೆರೆಮನೆಯವರೇ ಕುಟುಂಬದವರಂತೆ ಬೆರೆಯುತ್ತಿದ್ದರು. ಹಬ್ಬ, ದುಃಖ, ಸಂಭ್ರಮ ಎಲ್ಲದರಲ್ಲೂ ಸ್ನೇಹದ ಪಾಲಿತ್ತು. ಈಗ ಅಪಾರ್ಟ್‌ಮೆಂಟ್‌ಗಳ ಎತ್ತರ ಹೆಚ್ಚಿದಷ್ಟೂ ನೆರೆಹೊರೆಯವರ ಪರಿಚಯ ಕಡಿಮೆಯಾಗಿದೆ. ಬಾಗಿಲುಗಳು ಭದ್ರವಾದಷ್ಟೂ ಹೃದಯಗಳು ಮುಚ್ಚಿಕೊಂಡಿವೆ.

ಒಟ್ಟಿನಲ್ಲಿ ಮನುಷ್ಯನ ಬದುಕಿನಲ್ಲಿ ಭೌತಿಕ ಸೌಲಭ್ಯಗಳು ಹೆಚ್ಚಾದಷ್ಟೂ ಭಾವನಾತ್ಮಕ ಭದ್ರತೆ ಕಡಿಮೆಯಾಗುತ್ತಿರುವುದು ಆತಂಕದ ಸಂಗತಿ.ನಿಜವಾದ ಸ್ನೇಹ ಎಂದರೆ ಯಾವಾಗಲೂ ನಮ್ಮ ಮಾತಿಗೆ ತಲೆಬಾಗುವುದಲ್ಲ. ತಪ್ಪು ಮಾಡಿದಾಗ ತಿದ್ದುವ ಧೈರ್ಯ, ಅಹಂಕಾರ ಬಂದಾಗ ನೆಲದ ಮೇಲೆ ನಿಲ್ಲಿಸುವ ಪ್ರಾಮಾಣಿಕತೆ, ಸಂಕಷ್ಟದ ಸಂದರ್ಭದಲ್ಲಿ ಕೈ ಬಿಡದ ನಿಷ್ಠೆ ಇವುಗಳೇ ಸ್ನೇಹದ ನಿಜವಾದ ಕೊಂಡಿಗಳು. ಹೊಗಳುವವರು ಅನೇಕರಿರುತ್ತಾರೆ; ಆದರೆ ನಮ್ಮ ಒಳಿತಿಗಾಗಿ ಕಹಿ ಸತ್ಯವನ್ನು ಹೇಳುವವರು ಮಾತ್ರ ನಿಜವಾದ ಸ್ನೇಹಿತರು.

ಇತಿಹಾಸ, ಸಾಹಿತ್ಯ ಮತ್ತು ಸಂಸ್ಕೃತಿ ಸ್ನೇಹದ ಅನೇಕ ಶ್ರೇಷ್ಠ ಮಾದರಿಗಳನ್ನು ನಮ್ಮ ಮುಂದಿಟ್ಟಿವೆ. ಅವು ನಮಗೆ ಹೇಳುವುದೊಂದೇ – ಸ್ನೇಹ ಎನ್ನುವುದು ವ್ಯಕ್ತಿ ಲಾಭದ ಉದ್ದೇಶದಿಂದ ಮಾಡಿಕೊಳ್ಳುವ ಒಪ್ಪಂದವಲ್ಲ. ಅದು ನಂಬಿಕೆಯ ಒಡಂಬಡಿಕೆ. ಹಣದಿಂದ ಖರೀದಿಸಲಾಗದ, ಅಧಿಕಾರದಿಂದ ಪಡೆಯಲಾಗದ, ಬಲವಂತದಿಂದ ಉಳಿಸಿಕೊಳ್ಳಲಾಗದ ಸಂಬಂಧವೇ ಸ್ನೇಹ.ಇಂದಿನ ಸಮಾಜದಲ್ಲಿ ಹೆಚ್ಚುತ್ತಿರುವ ದ್ವೇಷ, ಜಾತಿ-ಧರ್ಮದ ವಿಭಜನೆ, ರಾಜಕೀಯ ವೈಷಮ್ಯಗಳ ನಡುವೆ ಸ್ನೇಹವೇ ದೊಡ್ಡ ಸೇತುವೆಯಾಗಬಲ್ಲದು. ವಿಭಿನ್ನ ಅಭಿಪ್ರಾಯಗಳಿದ್ದರೂ ಪರಸ್ಪರ ಗೌರವದಿಂದ ಬದುಕುವುದನ್ನು ಸ್ನೇಹವು ಕಲಿಸುತ್ತದೆ. ಮನುಷ್ಯನನ್ನು ಅವನ ಹೆಸರು, ಜಾತಿ, ಧರ್ಮ, ಭಾಷೆಯಿಂದಲ್ಲ; ಮಾನವೀಯತೆಯಿಂದ ನೋಡುವ ದೃಷ್ಟಿಯನ್ನು ಸ್ನೇಹವು ಬೆಳೆಸುತ್ತದೆ. ವಿಶ್ವಶಾಂತಿಯ ಆರಂಭ ಬದುಕಿನಲ್ಲಿ ಬೆಳೆಸುವ ಸ್ನೇಹದಲ್ಲಿಯೇ ಅಡಗಿದೆ.

ಒಬ್ಬ ವ್ಯಕ್ತಿಯ ಸ್ನೇಹವನ್ನು ಉಳಿಸಿಕೊಳ್ಳಬೇಕಾದರೆ ಸಮಯ, ಸಹನೆ, ವಿಶ್ವಾಸ ಬೇಕು. ಇಂದಿನ ವೇಗದ, ಒತ್ತಡಮಯ ಜೀವನದಲ್ಲಿ ಜನರು ಹಣವನ್ನು ಸಂಪಾದಿಸಲು ಸಮಯವನ್ನು ಕೊಡುತ್ತಾರೆ; ಆರೋಗ್ಯಕ್ಕಾಗಿಯೂ ಸಮಯವನ್ನು ಹೊಂದಿಸುತ್ತಾರೆ; ಆದರೆ ಸಂಬಂಧಗಳಿಗಾಗಿ ಸಮಯ ಮೀಸಲಿಡುವುದನ್ನು ಮರೆತಿದ್ದಾರೆ. ಪರಿಣಾಮವಾಗಿ ಬಾಳಿನಲ್ಲಿ ಯಶಸ್ಸು ಸಿಗುತ್ತದೆ; ಆದರೆ ಸಂತೋಷ ಸಿಗುವುದಿಲ್ಲ. ಮನೆ ದೊಡ್ಡದಾಗುತ್ತದೆ; ಆದರೆ ಮನಸ್ಸು ಖಾಲಿಯಾಗುತ್ತದೆ.ಸಮಾಜದ ಆರೋಗ್ಯವನ್ನು ಜನರ ನಡುವೆ ಇರುವ ವಿಶ್ವಾಸ,

ಸಹಕಾರ ಮತ್ತು ಸ್ನೇಹದ ಗುಣಮಟ್ಟದಿಂದ ಅಳೆಯಬೇಕು. ಒಬ್ಬ ಮನುಷ್ಯನನ್ನು ಒಂಟಿತನದಿಂದ ಹೊರಗೆಳೆಯಬಲ್ಲ ಶಕ್ತಿ ಒಂದು ನಿಸ್ವಾರ್ಥ ಸ್ನೇಹದಲ್ಲಿರಬಹುದು. ಆದ್ದರಿಂದ ಸ್ನೇಹವು ವೈಯಕ್ತಿಕ ಭಾವನೆಯಷ್ಟೇ ಅಲ್ಲ. ಅದು ಸಾಮಾಜಿಕ ಸಂಪತ್ತೂ ಹೌದು.ಇಂದು ನಾವು ಮಕ್ಕಳಿಗೆ ಕಂಪ್ಯೂಟರ್‌ಗಳನ್ನು ಕೊಡುತ್ತಿದ್ದೇವೆ, ಸ್ಮಾರ್ಟ್‌ಫೋನ್‌ಗಳನ್ನು ಕೊಡುತ್ತಿದ್ದೇವೆ, ಅತ್ಯಾಧುನಿಕ ಶಿಕ್ಷಣವನ್ನೂ ಕೊಡುತ್ತಿದ್ದೇವೆ. ಆದರೆ ಉತ್ತಮ ಸ್ನೇಹಿತರಾಗುವುದನ್ನು ಕಲಿಸುತ್ತಿದ್ದೇವೆಯೇ? ಒಬ್ಬರ ನೋವನ್ನು ಮತ್ತೊಬ್ಬರು ಆಲಿಸುವ ಸಂಸ್ಕೃತಿಯನ್ನು ಬೆಳೆಸುತ್ತಿದ್ದೇವೆಯೇ? ಈ ಪ್ರಶ್ನೆಗೆ ನಮ್ಮ ಸಮಾಜ ಪ್ರಾಮಾಣಿಕ ಉತ್ತರವನ್ನು ಹುಡುಕಬೇಕಿದೆ.

ನಮ್ಮ ಜೀವನದ ಅಂತಿಮ ಲೆಕ್ಕಾಚಾರದಲ್ಲಿ ಬ್ಯಾಂಕ್ ಖಾತೆಯ ಮೊತ್ತ ಮುಖ್ಯವಾಗುವುದಿಲ್ಲ. ನಮ್ಮೊಂದಿಗೆ ಹೆಜ್ಜೆ ಹಾಕಿದ ನಮ್ಮ ಆತ್ಮೀಯ ಸ್ನೇಹಿತರ ಸಂಖ್ಯೆ ಮುಖ್ಯವಾಗುತ್ತದೆ. ಸಾಧನೆಗಳು ಇತಿಹಾಸದಲ್ಲಿ ದಾಖಲಾಗಬಹುದು; ಆದರೆ ಸ್ನೇಹ ಸದಾ ವ್ಯಕ್ತಿಯ ನೆನಪಿನಲ್ಲಿ, ಮನಸ್ಸಿನಲ್ಲಿ ಜೀವಿಸುತ್ತದೆ. ಬದುಕಿನ ಕೊನೆಯ ಕ್ಷಣದಲ್ಲಿಯೂ ಹುದ್ದೆ, ಹಣ, ಅಧಿಕಾರ ನಮ್ಮ ಕೈ ಹಿಡಿಯುವುದಿಲ್ಲ; ನಿಜವಾದ ಸಂಬಂಧಗಳು ಮಾತ್ರ ನಮ್ಮ ಜೊತೆಯಾಗುತ್ತವೆ.ಆದ್ದರಿಂದ, ಸ್ನೇಹವನ್ನು ಕೇವಲ ‘ಸ್ನೇಹಿತರ ದಿನ’ದ ಶುಭಾಶಯಗಳಿಗೆ ಸೀಮಿತಗೊಳಿಸಬಾರದು. ಪ್ರತಿದಿನ ಒಬ್ಬರ ಮಾತನ್ನು ಇನ್ನೊಬ್ಬರು ಆಲಿಸುವುದು, ಅರ್ಥಮಾಡಿಕೊಳ್ಳುವುದು, ಜೊತೆಯಾಗಿ ನಿಲ್ಲುವುದು, ತಪ್ಪುಗಳನ್ನು ತಿದ್ದುವುದು, ಸಂಕಷ್ಟದಲ್ಲಿ ಕೈಹಿಡಿಯುವುದು ಇವೇ ಸ್ನೇಹದ ನಿಜವಾದ ಆಚರಣೆಗಳು.

ಯಂತ್ರಗಳು ಮನುಷ್ಯನ ಕೆಲಸವನ್ನು ಮಾಡಬಹುದು, ಕೃತಕ ಬುದ್ಧಿಮತ್ತೆ ಮನುಷ್ಯನ ಚಿಂತನೆಗೆ ನೆರವಾಗಬಹುದು. ಆದರೆ ಒಡೆದ ಮನಸ್ಸನ್ನು ಜೋಡಿಸುವ ಕೆಲಸವನ್ನು ಇನ್ನೂ ಒಂದು ನಿಜವಾದ ಸ್ನೇಹಿತನ ಹೃದಯ ಮಾತ್ರ ಮಾಡಬಲ್ಲದು. ಆದ್ದರಿಂದ, ಭವಿಷ್ಯದ ಜಗತ್ತಿಗೆ ಅತ್ಯಾಧುನಿಕ ತಂತ್ರಜ್ಞಾನಕ್ಕಿಂತಲೂ ಹೆಚ್ಚು ಅಗತ್ಯವಿರುವುದು ಮಾನವೀಯತೆಯಿಂದ ಕೂಡಿದ ಸ್ನೇಹ ಅಂದರೂ ಬಹುಶಃ ತಪ್ಪಾಗಲಾರದೇನೋ…

- Advertisement -

Related news

error: Content is protected !!