Monday, June 22, 2026
spot_imgspot_img
spot_imgspot_img

ಭಾವಿ ಪತ್ನಿಯೊಂದಿಗೆ ಚಾರಣಕ್ಕೆ ತೆರಳಿದ್ದ ಯುವಕ ಫೋಟೊ ಕ್ಲಿಕ್ಕಿಸುವಾಗ 400 ಅಡಿ ಆಳದ ಕಂದಕಕ್ಕೆ ಬಿದ್ದು ಮೃತ್ಯು

- Advertisement -
- Advertisement -

ಪುಣೆ: ತನ್ನ ಭಾವಿ ಪತ್ನಿಯೊಂದಿಗೆ ಚಾರಣಕ್ಕೆಂದು ತೆರಳಿದ್ದ 26 ವರ್ಷದ ಯುವಕನೊಬ್ಬ ಫೋಟೊ ಕ್ಲಿಕ್ಕಿಸುವಾಗ, ಕಂದಕಕ್ಕೆ ಜಾರಿ ಬಿದ್ದು ಮೃತಪಟ್ಟಿರುವ ಘಟನೆ ಲೋಹಾಗಢ್ ಕೋಟೆಯ ಬಳಿ ನಡೆದಿದೆ.

ಗಹುಂಜೆ ನಿವಾಸಿ ಕೇತನ್ ವಿಶಾಲ್ ಅಗರ್ವಾಲ್ ಮೃತ ಯುವಕ. ಕೇತನ್ ತನ್ನ ಕುಟುಂಬದ ರಿಯಲ್ ಎಸ್ಟೇಟ್ ಉದ್ಯಮದ ನಿರ್ದೇಶಕರಾಗಿದ್ದರು ಎನ್ನಲಾಗಿದೆ.

ಗುರುವಾರ ತನ್ನ ಭಾವಿ ಪತ್ನಿ ಹಾಗೂ ತನ್ನ ಇಬ್ಬರು ಸ್ನೇಹಿತರೊಂದಿಗೆ ಮಾವಲ್ ತೆಹ್ಸೀಲ್ ನಲ್ಲಿರುವ ನಯನಮನೋಹರ ಬೆಟ್ಟದ ಮೇಲಿನ ಕೋಟೆಗೆ ತೆರಳಿದ್ದಾರೆ. ಆದರೆ, ಬೆಳಗ್ಗೆ ಸುಮಾರು 10.30 ಗಂಟೆಗೆ ಬಂಡೆಯ ತುದಿಯೊಂದರಲ್ಲಿ ನಿಂತು ಫೋಟೊ ತೆಗೆದುಕೊಳ್ಳಿಲು ಯತ್ನಿಸುವಾಗ, ಜೋರಾದ ಗಾಳಿ ಬೀಸಿದ್ದರಿಂದ ಕೇತನ್ ನಿಯಂತ್ರಣ ಕಳೆದುಕೊಂಡಿದ್ದಾರೆ. ತಕ್ಷಣವೇ ಬಂಡೆಯಿಂದ ಸುಮಾರು 400 ಅಡಿ ಆಳದ ಕಂದಕಕ್ಕೆ ಆತ ಜಾರಿ ಬಿದ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಘಟನೆಯ ಬೆನ್ನಿಗೇ, ಪೊಲೀಸರು ಹಾಗೂ ಶಿವದುರ್ಗ್ ಮಿತ್ರ ತುರ್ತು ರಕ್ಷಣಾ ತಂಡದ ಸದಸ್ಯರು ಸವಾಲಿನ ರಕ್ಷಣಾ ಕಾರ್ಯಾಚರಣೆಗಿಳಿದಿದ್ದಾರೆ. ಸುಮಾರು ಮೂರು ಗಂಟೆಗಳ ಕಾಲ ಕಠಿಣ ಕಾರ್ಯಾಚರಣೆ ನಡೆಸಿದ ತಂಡವು, ಕಡಿದಾದ ಕಣಿವೆಯಿಂದ ಯುವಕನ ಮೃತದೇಹವನ್ನು ಮೇಲಕ್ಕೆ ತಂದಿದೆ.ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದ್ದು, ಈ ಸಂಬಂಧ ಪೊಲೀಸರು ಆಕಸ್ಮಿಕ ಸಾವು ವರದಿಯನ್ನು ದಾಖಲಿಸಿಕೊಂಡಿದ್ದಾರೆ. ಘಟನೆಯ ಕುರಿತು ತನಿಖೆ ಮುಂದುವರಿದಿದೆ.

- Advertisement -

Related news

error: Content is protected !!