Saturday, June 13, 2026
spot_imgspot_img
spot_imgspot_img

ನೀಟ್ ಮರುಪರೀಕ್ಷೆ: ಪ್ರಶ್ನೆಪತ್ರಿಕೆ ತಜ್ಞರಿಗೆ ಜೂನ್ 21ರವರೆಗೆ ಕಟ್ಟುನಿಟ್ಟಿನ ಐಸೊಲೇಶನ್!-ಮೊಬೈಲ್ ಇಂಟರ್ನೆಟ್ ಬ್ಯಾನ್

- Advertisement -
- Advertisement -


ಹೊಸದಿಲ್ಲಿ : ನೀಟ್ ಯುಜಿ-26 ಮರುಪರೀಕ್ಷೆಗೆ ಕಟ್ಟುನಿಟ್ಟಿನ ಭದ್ರತಾ ಕ್ರಮ ಕೈಗೊಳ್ಳಲು ಪರೀಕ್ಷಾ ಪ್ರಾಧಿಕಾರ ಮುಂದಾಗಿದ್ದು, ಪ್ರಶ್ನೆಪತ್ರಿಕೆ ಸಿದ್ಧಪಡಿಸುವ ವಿಷಯ ತಜ್ಞರು ಮತ್ತು ಭಾಷಾಂತರಕಾರರು ಸೇರಿದಂತೆ ಈ ಪ್ರಕ್ರಿಯೆಯಲ್ಲಿ ಒಳಗೊಳ್ಳುವ ಎಲ್ಲರನ್ನೂ ಸುರಕ್ಷಿತ, ಅಜ್ಞಾತ ಸ್ಥಳದಲ್ಲಿ ಇರಿಸಿದೆ. ಜತೆಗೆ ಕಟ್ಟುನಿಟ್ಟಿನ ಐಸೊಲೇಶನ್‌ ಶಿಷ್ಟಾಚಾರಗಳಡಿ ಅವರನ್ನು ಲಾಕ್‌ಡೌನ್‌ಗೆ ಒಳಪಡಿಸಲಾಗಿದೆ. ಪ್ರಶ್ನೆಪತ್ರಿಕೆ ಸಿದ್ಧಪಡಿಸುವ ಅಂತಿಮ ಹಂತದಲ್ಲಿ ಒಳಗೊಂಡ ಎಲ್ಲರಿಗೂ ಬಾಹ್ಯ ಸಂಪರ್ಕ ಕಡಿತಗೊಳಿಸಲಾಗಿದ್ದು, ಜೂನ್ 21ರಂದು ಪರೀಕ್ಷೆ ಮುಗಿಯುವವರೆಗೂ ಲಾಕ್‌ಡೌನ್ ಮುಂದುವರಿಯಲಿದೆ.

ಯುಜಿ-ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಮರುಪರೀಕ್ಷೆ ವಿವಾದದಲ್ಲಿ ಸಿಲುಕಿಕೊಂಡಿರುವ ಹಿನ್ನೆಲೆಯಲ್ಲಿ ಮರು ಪರೀಕ್ಷೆಯನ್ನು ಅಭೂತಪೂರ್ವ ಭದ್ರತಾ ವ್ಯವಸ್ಥೆಯಡಿ ನಿರ್ವಹಿಸಲು ಮುಂದಾಗಿದೆ. ಪ್ರಶ್ನೆಪತ್ರಿಕೆ ಸೋರಿಕೆಯಿಂದಾಗಿ 22 ಲಕ್ಷ ಅಭ್ಯರ್ಥಿಗಳು ಇದೀಗ ಮರು ಪರೀಕ್ಷೆ ಬರೆಯಬೇಕಾಗಿದ್ದು, ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಆತಂಕ ಮೂಡಿದೆ.

ಹಲವು ಹಂತಗಳ ಭದ್ರತಾ ಚೌಕಟ್ಟಿನಲ್ಲಿ ಪ್ರಶ್ನೆಪತ್ರಿಕೆ ಸಿದ್ಧಪಡಿಸುವವರು, ಮಾರ್ಗದರ್ಶಕರು, ಭಾಷಾಂತರಕಾರರು ಮತ್ತು ಪ್ರಶ್ನೆಪತ್ರಿಕೆ ಅಭಿವೃದ್ಧಿಪಡಿಸುವ ಗೌಪ್ಯ ಹಂತಗಳಲ್ಲಿ ಜತೆಗೆ ಇರುವ ಸಿಬ್ಬಂದಿ ಸುರಕ್ಷಿತ ಸ್ಥಳದಲ್ಲಿ ಕಣ್ಣಾವಲು ವ್ಯವಸ್ಥೆಯಡಿ ಇರುತ್ತಾರೆ ಎಂದು ಉನ್ನತ ಅಧಿಕಾರಿಯೊಬ್ಬರು ಬಹಿರಂಗ ಪಡಿಸಿದ್ದಾರೆ.

ಈ ಸ್ಥಳದಲ್ಲಿ ಮೊಬೈಲ್ ಫೋನ್, ಲ್ಯಾಪ್‌ಟಾಪ್‌ ಮತ್ತು ವೈಯಕ್ತಿಕ ಸಂವಹನ ಸಾಧನಗಳನ್ನು ನಿರ್ಬಂಧಿಸಲಾಗಿದೆ. ಇಂಟರ್ ನೆಟ್ ಮತ್ತು ಬಾಹ್ಯ ಸಂಪರ್ಕಗಳನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಲಾಗಿದೆ. ಆಗಮನ ಮತ್ತು ನಿರ್ಗಮನ ಸ್ಥಳಗಳ ಮೇಲೆ ಕಣ್ಣಾವಲು ಇರಿಸಿ ದಾಖಲಿಸಿಕೊಳ್ಳಲಾಗುತ್ತಿದೆ. ಅಧಿಕೃತ ಸಿಬ್ಬಂದಿ ಮಾತ್ರ ಇಲ್ಲಿಗೆ ತೆರಳಬಹುದಾಗಿದೆ. ಸ್ಮಾರ್ಟ್‌ವಾಚ್ ಸೇರಿದಂತೆ ಎಲ್ಲ ಡಿಜಿಟಲ್ ಸಾಧನಗಳನ್ನು ಹೊರಗೆ ಇಡುವುದು ಕಡ್ಡಾಯ ಎಂದು ಸ್ಪಷ್ಟಪಡಿಸಿದ್ದಾರೆ.

ಶಿಕ್ಷಣ ಸಚಿವಾಲಯ ಮತ್ತು ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರ ಸಿದ್ಧಪಡಿಸಿರುವ ಹಲವು ಹಂತಗಳ ಭದ್ರತಾ ಚೌಕಟ್ಟಿನಲ್ಲಿ ಪ್ರಶ್ನೆಪತ್ರಿಕೆ ಸಿದ್ಧಪಡಿಸುವ ವ್ಯವಸ್ಥೆಯ ಲಾಕ್‌ಡೌನ್ ಒಂದು ಹಂತವಾಗಿರುತ್ತದೆ. ಜೂನ್ 21ರಂದು ಮಧ್ಯಾಹ್ನ 2 ಗಂಟೆಯಿಂದ ಸಂಜೆ 5.15ರವರೆಗೆ ದೇಶದ 551 ಹಾಗೂ ವಿದೇಶಗಳ 14 ನಗರಗಳಲ್ಲಿ ಮರುಪರೀಕ್ಷೆ ನಡೆಯಲಿದೆ ಎಂದು ಮೂಲಗಳು ಹೇಳಿವೆ.

- Advertisement -

Related news

error: Content is protected !!