

ಭಾರತ-ಚೀನಾ ಗಡಿಯಲ್ಲಿ ದಿನದಿಂದ ದಿನಕ್ಕೆ ಬಿಗುವಿನ ವಾತಾವರಣ ನಿರ್ಮಾಣವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಗಡಿ ಭಾಗದಲ್ಲಿ ಚೀನಾದ ಮೇಲೆ ಹದ್ದಿನ ಕಣ್ಣಿಡಲು ಭಾರತ ಮುಂದಾಗಿದೆ. ಭಾರತ ವಾಸ್ತವ ನಿಯಂತ್ರಣ ರೇಖೆಯ ಬಳಿ ಅತ್ಯಾಧುನಿಕ ಡ್ರೋಣ್ ಗಳನ್ನು ಬಳಕೆ ಮಾಡಲು ಮುಂದಾಗಿದೆ.

ಚೀನಾ ಮೊದಲಿನಿಂದಲೂ ಕಂಡವರ ಭೂಮಿಯನ್ನ ಕಬಳಿಸುವ ಗುಳ್ಳೆನರಿ ಬುದ್ಧಿ ರೂಢಿಸಿಕೊಂಡು ಬಂದಿದೆ. ಆದ್ರಿಂದಲೇ ನೆರೆಯ ರಾಷ್ಟ್ರಗಳೊಂದಿಗೆ ಕ್ಯಾತೆ ತೆಗೆಯಲು ಹೊಂಚು ಹಾಕುತ್ತಲೇ ಇರುತ್ತೆ. ಹಾಗೆಯೇ ಸದ್ಯ ಭಾರತದ ಅರುಣಾಚಲ ಪ್ರದೇಶ ಗಡಿ ಬಳಿಯೂ ಭೂಮಿ ಅತಿಕ್ರಮಣಕ್ಕೆ ಚೀನಾ ಪ್ರಯತ್ನಿಸುತ್ತಿದೆ. ಇದಕ್ಕಾಗಿ ತರಹೇವಾರಿ ತಂತ್ರಗಳ ಪ್ರಯೋಗಕ್ಕೆ ಮುಂದಾಗಿದೆ. ಮಾನವ ರಹಿತ ವಿಮಾನಗಳನ್ನ ಗಸ್ತಿಗಾಗಿ ನೇಮಿಸಿ ಗಡಿಯಲ್ಲಿ ಕಿತಾಪತಿಗಿಳಿದಿದೆ.

ಭೂ-ಅತಿಕ್ರಮಣಕ್ಕೆ ಕ್ಯಾತೆಕೋರ ಚೀನಾ ಹೊಂಚು
ಗಡಿಯಲ್ಲಿ ಕಣ್ಗಾವಲು ಹೆಚ್ಚಿಸಿ ಭಾರತ ತಿರುಗೇಟು
ಪೂರ್ವ ಲಡಾಖ್ ಗಡಿಯ ಬಳಿಕ ಅರುಣಾಚಲ ಪ್ರದೇಶ ಗಡಿ ಬಳಿಯೂ ಭೂಮಿ ಅತಿಕ್ರಮಣಕ್ಕೆ ಚೀನಾ ಪ್ರಯತ್ನಿಸುತ್ತಿದೆ. ಇದಕ್ಕಾಗಿ ಮಾನವ ರಹಿತ ವಿಮಾನಗಳನ್ನ ಹಾರಿಬಿಟ್ಟು ನಿಗಾ ಇರಿಸಲಾರಂಭಿಸಿದೆ. ಈ ಹಿನ್ನಲೆ ಡ್ರ್ಯಾಗನ್ ರಾಷ್ಟ್ರಕ್ಕೆ ತಿರುಗೇಟು ನೀಡಲು ಭಾರತ ಗಡಿಯಲ್ಲಿ ಅತ್ಯಾಧುನಿಕ ಡ್ರೋನ್ ಕಣ್ಗಾವಲು ಹೆಚ್ಚಿಸಿದೆ. ಅರುಣಾಚಲ ಪ್ರದೇಶದ ಬಳಿ ಇರುವ ವಾಸ್ತವ ಗಡಿ ರೇಖೆಯ ಬಳಿ ಭಾರತ, ಇಸ್ರೇಲ್ ತಂತ್ರಜ್ಞಾನದ ಡ್ರೋನ್ಗಳು, ಶಸ್ತ್ರಸಜ್ಜಿತ ಧ್ರುವ ಹೆಲಿಕ್ಯಾಪ್ಟರ್ ಸೇರಿದಂತೆ ಗಡಿ ರಕ್ಷಣೆಗೆ ಬೇಕಾದ ಎಲ್ಲ ತಯಾರಿಗಳನ್ನು ಮಾಡಿಕೊಳ್ಳುತ್ತಿದೆ.

ಹೆರಾನ್ ಡ್ರೋಣ್ ವಿಶೇಷತೆ ಏನು?
ಭಾರತ ಗಡಿಯಲ್ಲಿ ಇಸ್ರೇಲ್ ನಿರ್ಮಿತ ಶಕ್ತಿಶಾಲಿ ಹೆರಾನ್ ಡ್ರೋನ್ ನಿಯೋಜನೆ ಮಾಡಿದೆ. ಈ ಹೆರಾನ್ ಡ್ರೋನ್ ಮಧ್ಯಮ-ಎತ್ತರದ ದೀರ್ಘ-ಸಹಿಷ್ಣುತೆಯನ್ನು ಹೊಂದಿದ್ದು, ಸುಮಾರು 30,000 ಅಡಿ ಎತ್ತರದವರೆಗೂ ಕಾರ್ಯ ನಿರ್ವಹಣೆ ಮಾಡಬಲ್ಲದು. ಸೂಕ್ಷ್ಮ, ಅತಿ ಸೂಕ್ಷ್ಮ ಪ್ರದೇಶಗಳ ದೃಶ್ಯಗಳನ್ನು ಸೇನೆಗೆ ನೀಡುವಲ್ಲಿ ಸಹಕಾರಿಯಾಗಿದೆ. ಕಠಿಣಾತೀತ ಕಠಿಣ ಹವಾಮಾನದಲ್ಲೂ ಸಮರ್ಪಕ ಕಾರ್ಯಾಚರಣೆ ಮಾಡಬಲ್ಲದು. ಅಲ್ಲದೆ 24-30 ಗಂಟೆಗಳ ಕಾಲ ನಿರಂತರ ಕಾರ್ಯ ನಿರ್ವಹಿಸುವ ಸಾಮರ್ಥ್ಯ ಹೊಂದಿದೆ. ಇನ್ನು ಸಿಂಥೆಟಿಕ್ ಆರ್ಪಚರ್ ರೆಡರ್ ವಿಶೇಷ ವ್ಯವಸ್ಥೆ ಹೊಂದಿದ ಈ ಡ್ರೋನ್ ಸೆನ್ಸರ್ ಟೂ ಶೂಟರ್ ಪರಿಕಲ್ಪನೆಯಲ್ಲಿ ಕಣ್ಗಾವಲು ಹಚ್ಚಿಸಲು ನೆರವು ನೀಡುತ್ತದೆ.

ಒಂದೆಡೆ ಚೀನಾ ಅರುಣಾಚಲ ಪ್ರದೇಶದ ಗಡಿಗಳಲ್ಲಿ ಮೂಲ ಸೌಕರ್ಯಗಳನ್ನು ಹೆಚ್ಚಿಸುತ್ತಿದೆ. ರಸ್ತೆ, ಸೇತುವೆಗಳನ್ನೂ ನಿರ್ಮಿಸುತ್ತಿದೆ. ಕಪಟ ಬುದ್ಧಿಯ ಚೀನಾ ಯಾವುದೇ ಕ್ಷಣದಲ್ಲಾದ್ರು ಭಾರತದ ಮೇಲೆ ದಾಳಿ ನಡೆಸುವ ಸಾಧ್ಯತೆ ಇದೆ. ಈ ಸಮಯದಲ್ಲಿ ಚೀನಾದ ಈ ಎಲ್ಲ ಬೆಳವಣಿಗೆಗಳ ಮೇಲೆ ಕಣ್ಣಿಡುವುದು ಅತ್ಯವಶ್ಯಕವಾಗಿದೆ. ಇದಕ್ಕೆ ಈ ಡ್ರೋನ್ ಸಹಾಯ ಮಾಡಲಿದೆ.












