@ಮೈತ್ರಿ ಭಟ್, ವಿಟ್ಲ

ನೆನಪಿರಲಿ : ಕತ್ತಲೆಯಾಚೆ ಬೆಳಕಿದೆ
ಕೆಲವೊಮ್ಮೆ ನಮ್ಮ ಆತ್ಮೀಯ ವ್ಯಕ್ತಿಯೊಬ್ಬರು ಎಂದಿನಂತೆ ನಗುತ್ತಲೇ ಎಲ್ಲರೊಂದಿಗೂ ಮಾತನಾಡುತ್ತಾ ತಮ್ಮ ಕೆಲಸವನ್ನು ಮಾಡುತ್ತಿರುವಂತೆ ಕಾಣಬಹುದು. ಹೊರಗಿನಿಂದ ನೋಡಿದರೆ ಅವರ ಬದುಕಿನಲ್ಲಿ ಯಾವುದೇ ಸಮಸ್ಯೆಯೇ ಇಲ್ಲವೆಂದು ನಮಗೆ ಅನಿಸಬಹುದು. ಹಾಗೆಂದು ಪ್ರತಿಯೊಂದು ನಗುವಿನ ಹಿಂದೆಯೂ ನೆಮ್ಮದಿಯೇ ಇರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಕೆಲವೊಮ್ಮೆ ಮನುಷ್ಯನ ಮನಸ್ಸಿನೊಳಗೆ ನಡೆಯುತ್ತಿರುವ ಮೌನ ಹೋರಾಟವನ್ನು ಹೊರಗಿನ ಜಗತ್ತು ಗಮನಿಸುವುದೇ ಇಲ್ಲ.
ಆತ್ಮಹತ್ಯೆ ಎಂಬುದು ಕೇವಲ ಒಬ್ಬ ವ್ಯಕ್ತಿಯ ಬದುಕಿಗೆ ಸಂಬಂಧಿಸಿದ ವಿಷಯವಲ್ಲ. ಅದು ಒಂದು ಕುಟುಂಬದ ನೋವು, ಸಮಾಜದ ನಿರ್ಲಕ್ಷ್ಯ, ಮಾನಸಿಕ ಸಂಕಟ, ಒಂಟಿತನ ಮತ್ತು ಕೆಲವೊಮ್ಮೆ ಸಹಾಯ ಕೇಳಲಾಗದ ಸ್ಥಿತಿಯೊಂದಿಗೆ ಸಂಬಂಧ ಹೊಂದಿರುವ ಗಂಭೀರ ಸಾರ್ವಜನಿಕ ಆರೋಗ್ಯ ಹಾಗೂ ಸಾಮಾಜಿಕ ಸಮಸ್ಯೆಯಾಗಿದೆ. ಆದ್ದರಿಂದ ಆತ್ಮಹತ್ಯೆ ಕುರಿತು ಮಾತನಾಡುವುದು ಎಂದರೆ ಭಯ ಹುಟ್ಟಿಸುವುದಲ್ಲ; ಬದುಕಿನ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸುವುದು. ಮೌನವಾಗಿ ಉಳಿಯುವ ಬದಲು ಸಂಕಟದಲ್ಲಿರುವ ವ್ಯಕ್ತಿಗೆ “ನೀನು ಒಂಟಿಯಲ್ಲ, ನಿನ್ನ ಜೊತೆಗೆ ನಾನಿದ್ದೇನೆ” ಎಂಬ ಭರವಸೆಯನ್ನು ಮೂಡಿಸುವುದು.
ನಮ್ಮ ದೇಹಕ್ಕೆ ಪುಟ್ಟ ಗಾಯವಾದರೂ ಅದು ಕಣ್ಣಿಗೆ ಕಾಣಿಸುತ್ತದೆ. ಆದರೆ ಮನಸ್ಸಿಗೆ ನೋವಾದಾಗ ಅದು ಮೇಲ್ನೋಟಕ್ಕೆ ಕಾಣಿಸುವುದಿಲ್ಲ. ಅದನ್ನು ಗುರುತಿಸುವ ಮನಸ್ಸಿದ್ದರೆ ಮಾತ್ರ ಅದು ಕಾಣಿಸುವುದು. ಸಾಮಾನ್ಯವಾಗಿ, ಮಾನಸಿಕ ನೋವನ್ನು ಅನೇಕರು ತಮ್ಮೊಳಗೇ ಮುಚ್ಚಿಟ್ಟುಕೊಳ್ಳುತ್ತಾರೆ. “ನನ್ನ ಸಮಸ್ಯೆಯನ್ನು ಯಾರು ಅರ್ಥಮಾಡಿಕೊಳ್ಳುತ್ತಾರೆ?”, “ನಾನು ಹೇಳಿದರೆ ಜನ ಏನು ಅಂದುಕೊಳ್ಳುತ್ತಾರೆ?”, “ನನ್ನನ್ನು ದುರ್ಬಲನೆಂದು ಭಾವಿಸುತ್ತಾರೆಯೇ?” ಎಂಬ ಪ್ರಶ್ನೆಗಳು ಅವರನ್ನು ಇನ್ನಷ್ಟು ಮೌನಿಗಳನ್ನಾಗಿಸುತ್ತದೆ. ಪರೀಕ್ಷೆಯಲ್ಲಿ ನಿರೀಕ್ಷಿತ ಫಲಿತಾಂಶ ಬರದಿರುವುದು, ಉದ್ಯೋಗದ ಸಮಸ್ಯೆ, ಆರ್ಥಿಕ ಸಂಕಷ್ಟ, ಕುಟುಂಬ ಕಲಹ, ಸಂಬಂಧಗಳಲ್ಲಿ ಉಂಟಾಗುವ ಬಿರುಕು, ಒಂಟಿತನ, ನಿರಂತರ ಒತ್ತಡ, ಅವಮಾನ ಅಥವಾ ಜೀವನದ ಅನಿರೀಕ್ಷಿತ ಬದಲಾವಣೆಗಳು ಕೆಲವರಿಗೆ ತೀವ್ರವಾದ ಮಾನಸಿಕ ಸಂಕಟವನ್ನು ಉಂಟುಮಾಡಬಹುದು.
ಆದರೆ ಒಂದು ಸಮಸ್ಯೆ ಎಲ್ಲರ ಮೇಲೂ ಒಂದೇ ರೀತಿಯ ಪರಿಣಾಮ ಬೀರುವುದಿಲ್ಲ. ಒಬ್ಬರಿಗೆ ಸಾಮಾನ್ಯವೆನಿಸುವ ಘಟನೆ ಮತ್ತೊಬ್ಬರಿಗೆ ಅತಿಯಾದ ನೋವನ್ನುಂಟು ಮಾಡಬಹುದು.ಆದ್ದರಿಂದ, “ಇಷ್ಟಕ್ಕೇ ಇಷ್ಟು ಯಾಕೆ ಯೋಚಿಸುತ್ತೀಯ?”, “ಇದು ಸಣ್ಣ ವಿಷಯ”, “ಧೈರ್ಯವಾಗಿರು” ಎಂಬ ಮಾತುಗಳಿಗಿಂತ ಮೊದಲು ಅವರ ನೋವನ್ನು ಅರ್ಥಮಾಡಿಕೊಳ್ಳುವ ಪ್ರಯತ್ನ ಮಾಡಬೇಕು. ಪ್ರತಿಯೊಬ್ಬರ ನೋವಿಗೂ ಅದರದೇ ಆದ ತೂಕವಿರುತ್ತದೆ.ಸಂಕಟದಲ್ಲಿರುವ ವ್ಯಕ್ತಿಗೆ ನಾವು ಯಾವಾಗಲೂ ದೊಡ್ಡ ದೊಡ್ಡ ಉಪದೇಶಗಳನ್ನು ನೀಡಬೇಕೆಂದಿಲ್ಲ. ಕೆಲವೊಮ್ಮೆ ಅವರಿಗೆ ಬೇಕಾಗಿರುವುದು ಒಬ್ಬರು ತಾಳ್ಮೆಯಿಂದ ಕೇಳುವುದಷ್ಟೇ.ನಾವು ಯಾರಾದರೂ ದುಃಖದಲ್ಲಿರುವಾಗ ಅವರನ್ನು ತಕ್ಷಣವೇ ಅವರನ್ನು ಆ ದುಃಖದಿಂದ ಹೊರತರಲು ಪ್ರಯತ್ನಿಸುತ್ತೇವೆ.
ಆದರೆ ಪ್ರತಿಯೊಂದು ನೋವಿಗೂ ತಕ್ಷಣದ ಪರಿಹಾರ ಇರುವುದಿಲ್ಲ. ಮೊದಲು ನೋವನ್ನು ಒಪ್ಪಿಕೊಳ್ಳಬೇಕು. “ನಿನಗೆ ಹೀಗೆ ಅನಿಸುವುದು ತಪ್ಪಲ್ಲ. ಆದರೆ ಈ ಸಂಕಟವನ್ನು ನೀನು ಒಬ್ಬನೇ ಹೊರುವ ಅಗತ್ಯವಿಲ್ಲ” ಎಂಬ ಅರಿವನ್ನು ಅವರಿಗೆ ಮೂಡಿಸಬೇಕು.ಕೇಳುವುದು ಎಂದರೆ ಕೇವಲ ಮಾತುಗಳನ್ನು ಕೇಳುವುದಲ್ಲ; ತೀರ್ಪು ನೀಡದೆ ಕೇಳುವುದು. ಹೋಲಿಕೆ ಮಾಡದೆ ಕೇಳುವುದು. “ನನ್ನ ಕಾಲದಲ್ಲಿ ಇದಕ್ಕಿಂತ ದೊಡ್ಡ ಸಮಸ್ಯೆಗಳನ್ನು ಎದುರಿಸಿದ್ದೆವು” ಎಂದು ಹೇಳದೆ ಕೇಳುವುದು. ಎಂದಿಗೂ ಒಬ್ಬ ವ್ಯಕ್ತಿಯ ಅನುಭವವನ್ನು ಮತ್ತೊಬ್ಬರ ಬದುಕಿನ ಮಾಪಕದಿಂದ ಅಳೆಯಬಾರದು.ಒಬ್ಬ ವ್ಯಕ್ತಿಯ ವರ್ತನೆಯಲ್ಲಿ ಅಕಸ್ಮಾತ್ ಬದಲಾವಣೆ ಕಂಡುಬಂದರೆ ಕುಟುಂಬದವರು ಮತ್ತು ಸ್ನೇಹಿತರು ಗಮನ ಹರಿಸಬೇಕು. ನಿರಂತರ ದುಃಖ, ತೀವ್ರ ಒಂಟಿತನ, ತಮ್ಮ ಬಗ್ಗೆ ನಿರಾಶೆಯಿಂದ ಮಾತನಾಡುವುದು, ಎಲ್ಲರಿಂದ ದೂರವಾಗುವುದು, ದಿನನಿತ್ಯದ ಚಟುವಟಿಕೆಗಳ ಮೇಲಿನ ಆಸಕ್ತಿ ಕಡಿಮೆಯಾಗುವುದು, ಅಥವಾ “ನನ್ನಿಂದ ಯಾರಿಗೂ ಪ್ರಯೋಜನವಿಲ್ಲ” ಎಂಬಂತಹ ನಿರಾಶೆಯ ಮಾತುಗಳು ಕೇಳಿಬಂದರೆ ಅವುಗಳನ್ನು ಅಸಡ್ಡೆ ಮಾಡಬಾರದು.ಪ್ರತಿಯೊಂದು ವರ್ತನೆಯೂ ಒಂದೇ ಅರ್ಥವನ್ನು ಹೊಂದಿರಬೇಕೆಂದಿಲ್ಲ. ಆದರೆ ವ್ಯಕ್ತಿಯ ಮಾನಸಿಕ ಸ್ಥಿತಿಯಲ್ಲಿ ಬದಲಾವಣೆಗಳು ಕಂಡುಬಂದಾಗ, ಪ್ರೀತಿಯಿಂದ ಮಾತನಾಡುವುದು ಮತ್ತು ಅಗತ್ಯವಿದ್ದರೆ ವಿಶ್ವಾಸಾರ್ಹ ಹಿರಿಯರು ಅಥವಾ ಮಾನಸಿಕ ಆರೋಗ್ಯ ತಜ್ಞರ ನೆರವು ಪಡೆಯುವುದು ಬಹಳ ಮುಖ್ಯ. ಕಾಳಜಿ ಮತ್ತು ಕುತೂಹಲದ ನಡುವೆ ಇರುವ ವ್ಯತ್ಯಾಸವನ್ನು ಅರಿತು, ಗೌರವದಿಂದ ಅರಿತುಕೊಳ್ಳುವುದು ಅಗತ್ಯ.ನಮ್ಮ ಸಮಾಜದಲ್ಲಿ ದೈಹಿಕ ಆರೋಗ್ಯದ ಬಗ್ಗೆ ಮಾತನಾಡುವುದು ಸುಲಭ. ಜ್ವರ ಬಂದರೆ ವೈದ್ಯರನ್ನು ಭೇಟಿ ಮಾಡುತ್ತೇವೆ. ಆದರೆ ಮನಸ್ಸು ತೀವ್ರವಾಗಿ ಆತಂಕಕ್ಕೆ ಒಳಗಾದಾಗ ಸಹಾಯ ಕೇಳಲು ಹಿಂಜರಿಯುತ್ತೇವೆ.
ಇದಕ್ಕೆ ಮಾನಸಿಕ ಆರೋಗ್ಯದ ಬಗ್ಗೆ ಇರುವ ತಪ್ಪು ಕಲ್ಪನೆಗಳೇ ಕಾರಣ.ಸಹಾಯ ಕೇಳುವುದು ಎಂದರೆ ಸೋಲನ್ನು ಒಪ್ಪಿಕೊಳ್ಳುವುದಲ್ಲ. ಅದು ಸಂಕಟವನ್ನು ನಿಭಾಯಿಸಲು ತೆಗೆದುಕೊಳ್ಳುವ ಧೈರ್ಯದ ಹೆಜ್ಜೆ. ತೀವ್ರ ಮಾನಸಿಕ ಸಂಕಷ್ಟದಲ್ಲಿರುವವರು ವಿಶ್ವಾಸಾರ್ಹ ಕುಟುಂಬ ಸದಸ್ಯರು, ಸ್ನೇಹಿತರು, ಶಿಕ್ಷಕರು, ಸಲಹೆಗಾರರು ಅಥವಾ ಅರ್ಹ ಮಾನಸಿಕ ಆರೋಗ್ಯ ತಜ್ಞರೊಂದಿಗೆ ಮಾತನಾಡುವುದು ಮುಖ್ಯ. ಮಕ್ಕಳು, ಯುವಕರು ಅಥವಾ ಹಿರಿಯರು ಯಾರೇ ಆಗಲಿ ತಮ್ಮ ಮನಸ್ಸನ್ನು ತೆರೆದಿಡಲು ಸೂಕ್ತ ವಾತಾವರಣ ಮನೆಯಲ್ಲಿರಬೇಕು.
ತಪ್ಪು ಮಾಡಿದಾಗ ಕೇವಲ ಬೈಯುವುದಕ್ಕಿಂತ, ಅದರ ಹಿಂದಿರುವ ಕಾರಣವನ್ನು ಕೇಳುವ ಸಂಸ್ಕೃತಿ ಬೆಳೆಯಬೇಕು. ಸೋತಾಗ ಅವಮಾನಿಸುವ ಬದಲು, ಎದುರಿಸುವ ಧೈರ್ಯ ತುಂಬಬೇಕು. ಮನುಷ್ಯನಿಗೆ ಬದುಕಿನಲ್ಲಿ ಎಲ್ಲವೂ ಸಿಗಬೇಕೆಂದಿಲ್ಲ. ಅದರಲ್ಲೂ ಅಂಕಗಳು ಜೀವನದ ಒಂದು ಭಾಗ ಮಾತ್ರ; ಅವು ಇಡೀ ಬದುಕಲ್ಲ. ಪರೀಕ್ಷೆಯ ಫಲಿತಾಂಶ ವ್ಯಕ್ತಿಯ ಸಾಮರ್ಥ್ಯ, ವ್ಯಕ್ತಿತ್ವ ಅಥವಾ ಭವಿಷ್ಯವನ್ನು ಸಂಪೂರ್ಣವಾಗಿ ನಿರ್ಧರಿಸುವುದಿಲ್ಲ ಎಂಬ ಅರಿವು ವಿದ್ಯಾರ್ಥಿಗಳಿಗೆ ಅಗತ್ಯ.ಶಿಕ್ಷಣ ಸಂಸ್ಥೆಗಳು ಕೇವಲ ಪಾಠ ಮತ್ತು ಪರೀಕ್ಷೆಗಳ ಕೇಂದ್ರಗಳಾಗದೆ, ವಿದ್ಯಾರ್ಥಿಗಳ ಭಾವನೆಗಳನ್ನು ಅರಿಯುವ ಸ್ಥಳಗಳಾಗಬೇಕು.
ಶಿಕ್ಷಕರು, ಪೋಷಕರು ಮತ್ತು ಸ್ನೇಹಿತರು ವಿದ್ಯಾರ್ಥಿಯ ಸಾಧನೆಯ ಜೊತೆಗೆ ಅವರ ಮನಃಸ್ಥಿತಿಯನ್ನೂ ಗಮನಿಸಬೇಕು.ಆತ್ಮಹತ್ಯೆಯನ್ನು ವೈಭವೀಕರಿಸುವುದು, ಸಂವೇದನಾಶೀಲ ಘಟನೆಗಳನ್ನು ಕುತೂಹಲದ ವಿಷಯವನ್ನಾಗಿಸುವುದು ಅಥವಾ ಅದನ್ನು ರೋಮ್ಯಾಂಟಿಕ್ ರೀತಿಯಲ್ಲಿ ಚಿತ್ರಿಸುವುದು ಅಪಾಯಕಾರಿ. ವಿಶೇಷವಾಗಿ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳು ಹೆಚ್ಚಿನ ಹೊಣೆಗಾರಿಕೆಯಿಂದ ವರ್ತಿಸಬೇಕು. ಪ್ರತೀ ಸುದ್ದಿಯ ಹಿಂದೆ ಒಂದು ಕುಟುಂಬವಿದೆ.
ಪ್ರತೀ ಸಂಕಟದ ಹಿಂದೆ ಒಂದು ಮನಸ್ಸಿದೆ. ಆದ್ದರಿಂದ, ಸಂವೇದನೆಯೇ ಈ ವಿಷಯದಲ್ಲಿ ನಮ್ಮ ಮೊದಲ ಆದ್ಯತೆಯಾಗಬೇಕು.ಬದುಕು ಎಂದರೆ ಸಮಸ್ಯೆಗಳಿಲ್ಲದಿರುವುದಲ್ಲ. ಬದುಕಿನಲ್ಲಿ ಕಷ್ಟಗಳು ಬರುತ್ತವೆ. ಕೆಲವೊಮ್ಮೆ ಅವು ನಮ್ಮ ಸಾಮರ್ಥ್ಯಕ್ಕಿಂತ ದೊಡ್ಡದಾಗಿ ಕಾಣಬಹುದು. ಆದರೆ ಒಂದಂತೂ ನೆನಪಿರಲಿ. ಈ ಸ್ಥಿತಿ ಶಾಶ್ವತವಲ್ಲ. ಪರಿಸ್ಥಿತಿಗಳು ಬದಲಾಗಬಹುದು. ಮನಃಸ್ಥಿತಿಗಳು ಬದಲಾಗಬಹುದು. ನೆರವು ದೊರೆಯಬಹುದು. ಹೊಸ ದಾರಿಗಳು ಕಾಣಬಹುದು.ಸಂಕಟದಲ್ಲಿರುವಾಗ ಮನುಷ್ಯನಿಗೆ ಇಡೀ ಜೀವನವೇ ಕತ್ತಲೆಯಂತೆ ಕಾಣಬಹುದು.
ಆದರೆ ಕತ್ತಲೆ ಎಂದರೆ ಬೆಳಕು ಇಲ್ಲ ಎಂಬುದಲ್ಲ; ಕೆಲವೊಮ್ಮೆ ಬೆಳಕಿನ ದಾರಿ ಇನ್ನೂ ಕಾಣಿಸುತ್ತಿಲ್ಲ ಅಷ್ಟೇ.ಬದುಕು ಯಾವಾಗಲೂ ನಮ್ಮ ಇಚ್ಛೆಯಂತೆ ಸಾಗುವುದಿಲ್ಲ. ಆದರೆ ದಾರಿಯಲ್ಲಿ ಕೈ ಹಿಡಿಯುವ ಜನರಿದ್ದರೆ ಎಂತಹ ಕಷ್ಟವನ್ನೂ ಎದುರಿಸಬಹುದು. ಆದ್ದರಿಂದ, ಬದುಕಿನ ಬಗ್ಗೆ ಮಾತನಾಡೋಣ. ನೋವಿನ ಬಗ್ಗೆ ಕೇಳೋಣ. ಒಂಟಿತನದಲ್ಲಿರುವವರನ್ನು ಗಮನಿಸೋಣ. ಸಂಕಟವನ್ನು ಮುಚ್ಚಿಡುವ ಬದಲು ಸಹಾಯ ಕೇಳುವ ಸಂಸ್ಕೃತಿಯನ್ನು ಬೆಳೆಸೋಣ. ಒಬ್ಬ ವ್ಯಕ್ತಿಯನ್ನು ಉಳಿಸಲು ಯಾವಾಗಲೂ ದೊಡ್ಡ ಕಾರ್ಯಗಳ ಅಗತ್ಯವಿಲ್ಲ. ಕೆಲವೊಮ್ಮೆ ಒಂದು ಕರೆ, ಒಂದು ಸಂದೇಶ, ಒಂದು ಆತ್ಮೀಯ ಪ್ರಶ್ನೆ, ತೀರ್ಪಿಲ್ಲದ ಒಂದು ಮಾತುಕತೆ ಸಾಕಾಗಬಹುದು. “ನೀನು ಒಂಟಿಯಲ್ಲ” ಎಂಬ ಮಾತು ಕೆಲವೊಮ್ಮೆ ಔಷಧಕ್ಕಿಂತಲೂ ದೊಡ್ಡ ಭರವಸೆಯಾಗಬಹುದು.








