- Advertisement -
- Advertisement -

ಮಂಗಳೂರು: ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR), ಇವಿಎಂ ದುರ್ಬಳಕೆ ಆರೋಪ ಹಾಗೂ ಕಾಂಗ್ರೆಸ್‌ನ ಚುನಾವಣಾ ಸೋಲುಗಳ ವಿಚಾರವಾಗಿ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿಗೆ ಐದು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.
ಮಂಗಳೂರಿನಲ್ಲಿ ನ.6ರಂದು ಬಿಜೆಪಿ ಆಯೋಜಿಸಿದ್ದ ‘ಪ್ರಜಾಪ್ರಭುತ್ವ ಉಳಿಸಿ-ಅರಾಜಕತೆ ಅಳಿಸಿ’ ಅಭಿಯಾನದ ಪಾದಯಾತ್ರೆ ಹಾಗೂ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿದ್ದ ತೇಜಸ್ವಿ ಸೂರ್ಯ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಎಸ್‌ಐಆರ್ ಮತ್ತು ಇವಿಎಂ ವಿಚಾರದಲ್ಲಿ ಕಾಂಗ್ರೆಸ್ ಮಾಡುತ್ತಿರುವ ಆರೋಪಗಳಿಗೆ ಉತ್ತರ ನೀಡುವಂತೆ ಸವಾಲು ಹಾಕಿದರು.
ತೇಜಸ್ವಿ ಸೂರ್ಯ ಕೇಳಿದ ಐದು ಪ್ರಶ್ನೆಗಳು:
- ಎಸ್‌ಐಆರ್‌ನಿಂದಲೇ ಪ್ರಧಾನಿ ನರೇಂದ್ರ ಮೋದಿ ಗೆಲುವು ಸಾಧಿಸುತ್ತಿದ್ದಾರೆ ಎನ್ನುವುದಾದರೆ, 2014, 2019 ಮತ್ತು 2024ರ ಲೋಕಸಭಾ ಚುನಾವಣೆಗಳಲ್ಲಿ ಎಸ್‌ಐಆರ್ ಇಲ್ಲದೆಯೇ ಅವರು ಹೇಗೆ ಗೆಲುವು ಸಾಧಿಸಿದರು?
- ಮುಖ್ಯ ಚುನಾವಣಾ ಆಯುಕ್ತರಾಗಿ ಜ್ಞಾನೇಶ್ ಕುಮಾರ್ ಅಧಿಕಾರ ವಹಿಸಿಕೊಳ್ಳುವ ಮೊದಲು, 2014ರಿಂದ ಫೆಬ್ರವರಿ 2025ರವರೆಗೆ ಕಾಂಗ್ರೆಸ್ ಎದುರಿಸಿದ 98 ಚುನಾವಣಾ ಸೋಲುಗಳಿಗೆ ಯಾರು ಹೊಣೆ?
- ಇವಿಎಂಗಳನ್ನು ಹ್ಯಾಕ್ ಮಾಡಲಾಗುತ್ತದೆ ಎನ್ನುವುದಾದರೆ, ಕರ್ನಾಟಕ, ಕೇರಳ ಮತ್ತು ತೆಲಂಗಾಣದಲ್ಲಿ ಕಾಂಗ್ರೆಸ್ ಗೆದ್ದಾಗ ಅದೇ ಇವಿಎಂ ಫಲಿತಾಂಶಗಳನ್ನು ಒಪ್ಪಿಕೊಂಡು, ಸೋತಾಗ ಮಾತ್ರ ಏಕೆ ಪ್ರಶ್ನಿಸುತ್ತದೆ?
- ಎಸ್‌ಐಆರ್ ಕಾನೂನುಬಾಹಿರ ಎನ್ನುವುದಾದರೆ, ಈ ಹಿಂದೆ ನಡೆದ 10 ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆಗಳೂ ಕಾನೂನುಬಾಹಿರವಾಗಿದ್ದವೇ?
- ಇವಿಎಂ, ಎಸ್‌ಐಆರ್ ಮತ್ತು ಚುನಾವಣಾ ಆಯೋಗದ ಮುಖ್ಯಸ್ಥರೇ ಕಾಂಗ್ರೆಸ್ ಸೋಲಿಗೆ ಕಾರಣ ಎನ್ನುವುದಾದರೆ, ತಮಿಳುನಾಡು, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಗುಜರಾತ್ ಮತ್ತು ಒಡಿಶಾದಲ್ಲಿ ಹಲವು ದಶಕಗಳಿಂದ ಕಾಂಗ್ರೆಸ್ ಸ್ವಂತ ಬಹುಮತ ಪಡೆಯಲು ವಿಫಲವಾಗಿರುವುದಕ್ಕೆ ಕಾರಣವೇನು?
ಈ ಐದು ಪ್ರಶ್ನೆಗಳಿಗೆ ರಾಹುಲ್ ಗಾಂಧಿ ನೇರ ಉತ್ತರ ನೀಡಬೇಕು ಎಂದು ತೇಜಸ್ವಿ ಸೂರ್ಯ ಸವಾಲು ಹಾಕಿದ್ದಾರೆ.ಇದಕ್ಕೆ ಪ್ರತಿಕ್ರಿಯಿಸಿರುವ ಕರ್ನಾಟಕ ಕಾಂಗ್ರೆಸ್, ತೇಜಸ್ವಿ ಸೂರ್ಯ ಅವರ ಪ್ರಶ್ನೆಗಳು ನೈಜ ಸಮಸ್ಯೆಗಳಿಂದ ಗಮನ ಬೇರೆಡೆ ಸೆಳೆಯುವ ಪ್ರಯತ್ನ ಎಂದು ಟೀಕಿಸಿದೆ.
- Advertisement -







