
ಪಡುಬಿದ್ರೆ: ಹೆಬ್ರಿ ತಾಲೂಕಿನ ಮುದ್ರಾಡಿ ಹಾಗೂ ಮುನಿಯಾಲು ಪ್ರದೇಶದಲ್ಲಿ ರಬ್ಬರ್ ಮರಗಳನ್ನು ಕಡಿದು, ನಿಗದಿತ ಹಣ ಪಾವತಿಸದೆ ಮರದ ತುಂಡುಗಳನ್ನು ಲಾರಿಯಲ್ಲಿ ಸಾಗಿಸಿ ಪರಾರಿಯಾಗಲು ಯತ್ನಿಸಿದ ಆರೋಪ ಕೇಳಿಬಂದಿದೆ.

ಈ ಹಿನ್ನೆಲೆಯಲ್ಲಿ ರಬ್ಬರ್ ಮರ ತುಂಬಿದ್ದ ಲಾರಿಯನ್ನು ಪಡುಬಿದ್ರೆ ಟೋಲ್‌ಗೇಟ್ ಬಳಿ ಪೊಲೀಸರು ತಡೆದು ನಿಲ್ಲಿಸಿದ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ.
ಮುದ್ರಾಡಿಯ ಸುಜಾತ ಶೆಟ್ಟಿ, ವಿಜೇಂದ್ರ ಶೆಟ್ಟಿ ಅವರ ಮನೆ, ಮುದ್ರಾಡಿಯ ಆಶಾ ಆಚಾರ್ ಅವರ ಮನೆ ಹಾಗೂ ಮುನಿಯಾಲಿನ ಸೀಜು ಎಂಬವರ ಜಾಗದಲ್ಲಿದ್ದ ರಬ್ಬರ್ ಮರಗಳನ್ನು ಶಕೀಮ್ ಮತ್ತು ರಮೇಶ್ ನೇತೃತ್ವದ ತಂಡ ಮುಂಗಡ ಹಣ ನೀಡಿ ಖರೀದಿಸಿತ್ತು ಎನ್ನಲಾಗಿದೆ. ಆದರೆ ಮರ ಕಟಾವು ಮಾಡಿದ ಬಳಿಕ ಬಾಕಿ ಹಣ ಪಾವತಿಸದೆ, ಮರದ ತುಂಡುಗಳನ್ನು ಸಾಗಿಸುವ ಸಂದರ್ಭದಲ್ಲಿ ಹಣ ನೀಡುವುದಾಗಿ ಹೇಳಲಾಗಿತ್ತು ಎಂದು ಆರೋಪಿಸಲಾಗಿದೆ.ಈ ಬಗ್ಗೆ ಮರ ನೀಡಿದವರು ಮೂರು ದಿನಗಳ ಹಿಂದೆಯೇ ಹೆಬ್ರಿ ಹಾಗೂ ಅಜೆಕಾರು ಪೊಲೀಸರಿಗೆ ದೂರು ನೀಡಿದ್ದರೂ ಸೂಕ್ತ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಆರೋಪಿಸಲಾಗಿದೆ.

ಭಾನುವಾರ ತಮಿಳುನಾಡು ನೋಂದಣಿಯ ಲಾರಿಯಲ್ಲಿ ರಬ್ಬರ್ ಮರಗಳನ್ನು ತುಂಬಿಸಿ ಸಾಗಾಟಕ್ಕೆ ಯತ್ನಿಸಿದ ವೇಳೆ ಮಾಹಿತಿ ಪಡೆದುಕೊಂಡ ಪೊಲೀಸರು ಪಡುಬಿದ್ರೆ ಟೋಲ್‌ಗೇಟ್ ಬಳಿ ಲಾರಿಯನ್ನು ತಡೆದಿದ್ದಾರೆ. ಮರ ಮಾರಾಟ ಮಾಡಿ ಹಣ ಬಾಕಿಯಾಗಿರುವ ಆಶಾ ಆಚಾರ್, ಸುಜಾತ ಶೆಟ್ಟಿ ಹಾಗೂ ಸೀಜು ಮುನಿಯಾಲು ಸೇರಿದಂತೆ ಕುಟುಂಬಸ್ಥರು ಟೋಲ್‌ಗೇಟ್ ಬಳಿ ಲಾರಿಯ ಸಮೀಪವೇ ಕಾದು ಕುಳಿತಿದ್ದಾರೆ.
ಸುಮಾರು ₹7 ಲಕ್ಷ ವಂಚನೆ ಯತ್ನದ ಆರೋಪ
ಮರ ಮಾರಾಟ ಮಾಡಿದ ಮೂವರು ಕುಟುಂಬಗಳು ಹಾಗೂ ಮರ ಕಟಾವು ಮಾಡಿದ ಕಾರ್ಮಿಕರ ತಂಡಕ್ಕೂ ಹಣ ಪಾವತಿಸದೆ ವಂಚಿಸಲು ಯತ್ನಿಸಲಾಗಿದೆ ಎಂದು ಆರೋಪಿಸಲಾಗಿದೆ. ಒಟ್ಟು ಸುಮಾರು ₹7 ಲಕ್ಷ ಮೊತ್ತದ ವಂಚನೆಗೆ ಯತ್ನಿಸಲಾಗಿದೆ ಎಂದು ತಿಳಿದುಬಂದಿದೆ.

ಘಟನೆ ಕುರಿತು ಮಾಹಿತಿ ಪಡೆದ ರಾಜ್ಯ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ ಸ್ಥಳಕ್ಕೆ ಧಾವಿಸಿ, ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್ ಅವರಿಗೂ ಮಾಹಿತಿ ನೀಡಿ ಲಾರಿಯನ್ನು ತಡೆದು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ತಿಳಿದುಬಂದಿದೆ. ಪಡುಬಿದ್ರೆಗೆ ಭೇಟಿ ನೀಡಿದ ಮಂಜುನಾಥ ಪೂಜಾರಿ, ವಂಚನೆಗೊಳಗಾದವರಿಗೆ ಧೈರ್ಯ ತುಂಬಿ ನ್ಯಾಯ ದೊರಕಿಸುವ ಭರವಸೆ ನೀಡಿದ್ದಾರೆ.
ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸಿ ಅನ್ಯಾಯಕ್ಕೊಳಗಾದವರಿಗೆ ನ್ಯಾಯ ಒದಗಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.ಇದೇ ವೇಳೆ, ರಬ್ಬರ್ ಮರ ಕಡಿದು ಹಣ ನೀಡದೆ ಸಾಗಾಟ ಮಾಡುವಂತಹ ದೊಡ್ಡ ಜಾಲ ಉಡುಪಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದೆಯೇ ಎಂಬ ಅನುಮಾನ ವ್ಯಕ್ತಪಡಿಸಿರುವ ಮಂಜುನಾಥ ಪೂಜಾರಿ, ಈ ಬಗ್ಗೆ ಪೊಲೀಸರ ಕಾರ್ಯವೈಖರಿಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹೆಬ್ರಿ ಠಾಣೆಯಲ್ಲಿ ಮೂವರು ಹಾಗೂ ಅಜೆಕಾರು ಠಾಣೆಯಲ್ಲಿ ಓರ್ವರು ದೂರು ನೀಡಿದ್ದು, ಲಾರಿ ತಡೆದು ಕ್ರಮ ಕೈಗೊಳ್ಳುವಂತೆ ಪಡುಬಿದ್ರೆ ಠಾಣೆಗೂ ಮಾಹಿತಿ ನೀಡಲಾಗಿದೆ. ಮರ ಖರೀದಿಸಿದ ವ್ಯಕ್ತಿ ಸ್ಥಳಕ್ಕೆ ಆಗಮಿಸಿ ಬಾಕಿ ಹಣ ಪಾವತಿಸಿದ ಬಳಿಕ ಪರಿಸ್ಥಿತಿ ತಿಳಿಗೊಳ್ಳುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.







