
ಮಂಜನಾಡಿ: ಅಸ್ಸಯ್ಯದ್ ಇಸ್ಮಾಯಿಲ್ ವಲಿಯುಲ್ಲಾಹಿ ಬುಖಾರಿ ದರ್ಗಾ ಸಮಿತಿ, ಬುಸ್ತಾನುಲ್ ಉಲೂಮ್ ದರ್ಸ್ ಹಾಗೂ ಮಂಜನಾಡಿ ಕೇಂದ್ರ ಜುಮಾ ಮಸೀದಿಯ ನೂತನ ಸಮಿತಿಯನ್ನು ರಚಿಸಲಾಗಿದ್ದು, ಗೌರವಾಧ್ಯಕ್ಷರಾಗಿ ಅಸ್ಸಯ್ಯದ್ ಅಟಕೋಯ ಕುಂಬೋಳ್ ತಂಙಳ್ ಹಾಗೂ ಆರನೇ ಬಾರಿಗೆ ಅಧ್ಯಕ್ಷರಾಗಿ ಅಬ್ದುಲ್ ಅಝೀಝ್ ಮೈಸೂರು ಬಾವ ಆಯ್ಕೆಯಾಗಿದ್ದಾರೆ.

ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ಅಝೀಝ್ ಪಾರ್ತಿಪ್ಪಾಡಿ, ಉಪಾಧ್ಯಕ್ಷರುಗಳಾಗಿ ಅಲಿ ಕುಂಞ ಹಾಜಿ ಪಾರೆ, ಡಾ. ಮುನೀರ್ ಬಾವಾ ಹಾಜಿ ಹಾಗೂ ಮೊದ್ದೀನ್ ಕುಟ್ಟಿ ಪಾರ್ತಿಪ್ಪಾಡಿ, ಕೋಶಾಧಿಕಾರಿಯಾಗಿ ಉಮರ್ ಕುಂಞ ಮೊರ್ಲ ಆಯ್ಕೆಯಾಗಿದ್ದಾರೆ. ಜೊತೆ ಕಾರ್ಯದರ್ಶಿಗಳಾಗಿ ಬಾಪು ಕುಂಞ (ಅಹ್ಮದ್ ಕುಂಞ), ಹಮೀದ್ ಅರಂಗಡಿ ಹಾಗೂ ಕುಂಞ ಬಾವ ಕಟ್ಟೆಮಾರ್ ಅವರನ್ನು ಆಯ್ಕೆ ಮಾಡಲಾಗಿದೆ.


ಕಳೆದ 12 ವರ್ಷಗಳಲ್ಲಿ ಅಬ್ದುಲ್ ಅಝೀಝ್ ಮೈಸೂರು ಬಾವ, ಅಸ್ಸಯ್ಯದ್ ಅಟಕೋಯ ಕುಂಬೋಳ್ ತಂಙಳ್ ಹಾಗೂ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಝೀಝ್ ಪಾರ್ತಿಪ್ಪಾಡಿ ಅವರ ನೇತೃತ್ವದಲ್ಲಿ ಮಂಜನಾಡಿ ಕೇಂದ್ರ ಜುಮಾ ಮಸೀದಿಯ ಅಭಿವೃದ್ಧಿ ಮತ್ತು ಮಸೀದಿಯ ನಿರ್ವಹಣೆಗೆ ಶಾಶ್ವತ ಆದಾಯದ ಮೂಲಗಳನ್ನು ಸೃಷ್ಟಿಸುವ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ಕೈಗೊಳ್ಳಲಾಗಿದೆ. ಇದರ ಭಾಗವಾಗಿ ಮಂಜನಾಡಿ ಮಸ್ಜಿದ್ ಕಾಂಪ್ಲೆಕ್ಸ್ ಎಂಬ ವಸತಿ ಹಾಗೂ ವಾಣಿಜ್ಯ ಸಂಕೀರ್ಣ ಮತ್ತು ನುಸ್ರತುಲ್ ಇಸ್ಲಾಂ ವಸತಿ ಸಮುಚ್ಚಯವನ್ನು ನಿರ್ಮಿಸಲಾಗಿದೆ. ಅಲ್ಲದೆ, ಮಸೀದಿ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.
ನೂತನ ಸಮಿತಿಯ ನೇತೃತ್ವದಲ್ಲಿ ಟರ್ಕಿ ಮಾದರಿಯ ವಿನ್ಯಾಸದೊಂದಿಗೆ ಆಧುನಿಕ ಸೌಲಭ್ಯಗಳನ್ನು ಒಳಗೊಂಡ ಸುಮಾರು 24,000 ಚದರ ಅಡಿ ವಿಸ್ತೀರ್ಣದ ಸುಂದರ ಮಸೀದಿ ನಿರ್ಮಾಣಕ್ಕೆ ಸಿದ್ಧತೆಗಳು ನಡೆಯುತ್ತಿವೆ. ನುಸ್ರತುಲ್ ಇಸ್ಲಾಂ ವಸತಿ ಸಮುಚ್ಚಯದ ಮೊದಲ ಮಹಡಿ ನಿರ್ಮಾಣ ಹಾಗೂ ಬಸರ ಪಕ್ಕದಲ್ಲಿರುವ ಮಸೀದಿ ಜಾಗದಲ್ಲಿ ಸುಸಜ್ಜಿತ ವಾಣಿಜ್ಯ ಸಂಕೀರ್ಣ ನಿರ್ಮಿಸುವ ಯೋಜನೆಗೂ ಸಭೆಯಲ್ಲಿ ಅನುಮೋದನೆ ದೊರೆತಿದೆ.
ಮಸೀದಿಗೆ ವಿವಿಧ ಮೂಲಗಳಿಂದ ನಿರಂತರ ಆದಾಯ ಬರುವಂತಹ ಯೋಜನೆಗಳನ್ನು ರೂಪಿಸಲಾಗಿದ್ದು, ಮಸೀದಿಯ ಎಲ್ಲಾ ವ್ಯವಹಾರಗಳಲ್ಲಿ ಪಾರದರ್ಶಕತೆ ಕಾಪಾಡುವ ಉದ್ದೇಶದಿಂದ ಆಡಳಿತ ವ್ಯವಸ್ಥೆಯನ್ನು ಸಂಪೂರ್ಣ ಡಿಜಿಟಲೀಕರಣಗೊಳಿಸಲು ನಿರ್ಧರಿಸಲಾಗಿದೆ. ಮದುವೆ ಪ್ರಮಾಣಪತ್ರ ವಿತರಣೆ, ಲೆಕ್ಕಪತ್ರ ನಿರ್ವಹಣೆ ಸೇರಿದಂತೆ ವಿವಿಧ ಆಡಳಿತಾತ್ಮಕ ಕಾರ್ಯಗಳನ್ನು ಡಿಜಿಟಲ್ ವ್ಯವಸ್ಥೆಗೆ ಒಳಪಡಿಸುವ ಯೋಜನೆ ರೂಪಿಸಲಾಗಿದೆ.








