


ವಿಟ್ಲ: ಭಾರತೀಯ ಜನತಾ ಪಾರ್ಟಿಯ ಬಿಜೆಪಿ ಮಹಾಶಕ್ತಿಕೇಂದ್ರದ ವತಿಯಿಂದ ನ.20ರಂದು ಶುಕ್ರವಾರ ಖಾಸಗಿ ಬಸ್ ನಿಲ್ದಾಣದ ಬಳಿ ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ದ ‘ನಮ್ಮ ಹಕ್ಕಿಗಾಗಿ ನಮ್ಮ ಹೆಜ್ಜೆ’ ಬೃಹತ್ ಹಕ್ಕೊತ್ತಾಯ ಸಭೆ ನಡೆಯಿತು.
ಸಭಾ ಕಾರ್ಯಕ್ರಮದ ಮೊದಲು ನಿರೀಕ್ಷಣಾ ಮಂದಿರದ ಬಳಿಯಿಂದ ಜೈನ ಬಸದಿ ತನಕ ರಾಜ್ಯ ಸರ್ಕಾರದ ವೈಫಲ್ಯಗಳ ವಿರುದ್ಧ ಘೋಷಣೆ ಕೂಗುತ್ತಾ ಪಾದಯಾತ್ರೆ ನಡೆಯಿತು.
ಅಭಿವೃದ್ಧಿ ವಿಚಾರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ , ರೀಲ್ಸ್ ಹರಿಯ ಬಿಟ್ಟು ಅಪಪ್ರಚಾರ ಮಾಡುವುದು ಬಿಟ್ಟು ಒಂದೇ ವೇದಿಕೆಯಲ್ಲಿ ಮಾಧ್ಯಮಗಳ ಮುಂದೆ ಅಂಕಿ ಅಂಶಗಳನ್ನು ಮುಂದಿಟ್ಟು ಚರ್ಚೆ ಮಾಡೋಣ. ನಾನು ಯಾವುದೇ ವೇದಿಕೆಯಲ್ಲಿ ಬಂದು ಮಾತನಾಡಲು ಸಿದ್ಧಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ಸಭೆಯಲ್ಲಿ ಪುತ್ತೂರು ಶಾಸಕ ಅಶೋಕ ಕುಮಾರ್ ರೈಯವರಿಗೆ ಸವಾಲು ಹಾಕಿದರು.

ಶಾಸಕರ ಸುಳ್ಳುಗಳನ್ನು ಇಂದು ವಿಟ್ಲ ಬಸ್ ನಿಲ್ದಾಣದಲ್ಲಿ ಹರಾಜಿಗೆ ಹಾಕಲಾಗಿದೆ. ಮಾಜಿ ಶಾಸಕರ ಅನುದಾನಗಳನ್ನು ಅಭಿವೃದ್ಧಿ ಕಾರ್ಯಗಳನ್ನು ತನ್ನದು ಎನ್ನುತ್ತಿದ್ದಾರೆ. ಗ್ಯಾರಂಟಿ ಹೆಸರಿನಲ್ಲಿ ಬಾಕಿ ಇರುವ ಹಣವನ್ನು ಮಹಿಳೆಯರಿಗೆ ಪಾವತಿಸಲಿ,ವೃದ್ಧಾಪ್ಯ ವೇತನ, ವಿಧವಾ ವೇತನ, ಅಂಗನವಾಡಿ ಕಾರ್ಯಕರ್ತೆಯರ ವೇತನ ನೀಡುವ ವ್ಯವಸ್ಥೆ ಮಾಡಲಿ ಎಂದರು. ಬೆಲೆ ಏರಿಕೆ ಅಷ್ಟೇ ಕಾಂಗ್ರೆಸ್ ಸರಕಾರದ ಸಾಧನೆ, ಪೆಟ್ರೋಲ್ ಡೀಸೆಲ್ ಮೇಲಿನ ತೆರಿಗೆ ಇಳಿಸಲು ರಾಜ್ಯ ಸರಕಾರ ಮುಂದಾಗಲಿ ಎಂದ ಹರೀಶ್ ಪೂಂಜ ಅವರು ತಹಶೀಲ್ದಾರರ ಸಹಿತ ಸರಕಾರಿ ಅಧಿಕಾರಿಗಳು ಶಾಸಕರ ಕೈಗೊಂಬೆಯಾಗಿ ಕೆಲಸ ಮಾಡಿದರೆ ಅವರ ವಿರುದ್ಧ ಮುಂದೆ ಕಾನೂನಾತ್ಮಕ ಕ್ರಮ ತೆಗೆದುಕೊಳ್ಳಲಾಗುವುದು ಎಂದರು
ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಸಭೆಯಲ್ಲಿ ಮಾತನಾಡಿ ಅಮೃತ್ ಯೋಜನೆ ಸಹಿತ ಕೇಂದ್ರ ಸರಕಾರದ ಯೋಜನೆಗಳನ್ನು ಕೂಡ ರಾಜ್ಯ ಸರಕಾರದ ಯೋಜನೆ ಅನ್ನುತ್ತಾ ಪ್ರಚಾರ ಮಾಡಿ ಮೈಲೇಜ್ ತೆಗೆದುಕೊಳ್ಳುವ ಪ್ರಯತ್ನವನ್ನು ಟೀಕಿಸಿದರು. ಕೇಂದ್ರದ ಯೋಜನೆ ಅನುಷ್ಠಾನ ಸಂದರ್ಭದಲ್ಲಿ ಜನಪ್ರತಿನಿಧಿಗಳ ನಿರ್ಲಕ್ಷ್ಯ ಮಾಡುವ ಶಾಸಕರ ಮತ್ತು ಸಂಬಂಧಿಸಿದ ಸರಕಾರಿ ಅಧಿಕಾರಿಗಳ ಕ್ರಮಗಳನ್ನು ಖಂಡಿಸಿದರು . ಮುಂದೆ ರಾಜ್ಯದ ಭ್ರಷ್ಟ ಕಾಂಗ್ರೆಸ್ ಸರಕಾರ ತೊಲಗಿ ಬಿಜೆಪಿ ಸರಕಾರ ಬರಲಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಹಾಗೂ ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ ಕುಂಪಲ ಸಭೆಯನ್ನು ಉದ್ದೇಶಿಸಿ ಮಾತನಾಡಿದರು
ಗ್ರಾಮಾಂತರ ಮಂಡಲ ಬಿಜೆಪಿ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಸಂಜೀವ ಮಠಂದೂರು, ರಾಜ್ಯ ಬಿಜೆಪಿ ಹಿಂದುಳಿದ ವರ್ಗಗಳ ವಿಭಾಗದ ಕಾರ್ಯದರ್ಶಿ ಆರ್. ಸಿ. ನಾರಾಯಣ,ಪಟ್ಟಣ ಪಂಚಾಯಿತಿ ಅಧ್ಯಕ್ಷ ಕರುಣಾಕರ ನಾಯ್ತೊಟ್ಟು, ಉಪಾಧ್ಯಕ್ಷೆ ಸಂಗೀತಾ ಪಾಣೆಮಜಲು, ಸ್ಥಾಯಿ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ಪುತ್ತೂರು ನಗರ ಮಂಡಲ ಅಧ್ಯಕ್ಷ ಶಿವಕುಮಾರ್, ಗ್ರಾಮಾಂತರ ಮಂಡಲ ಉಪಾಧ್ಯಕ್ಷ ಹರಿಪ್ರಸಾದ ಯಾದವ್, ಜಿಲ್ಲಾ ಬಿಜೆಪಿ ನಾಯಕರಾದ ಪ್ರಸನ್ನ ಮಾರ್ತ, ಪ್ರೇಮಾನಂದ ಶೆಟ್ಟಿ, ಬೂಡಿಯಾರು ರಾಧಾಕೃಷ್ಣ ರೈ, ವಿಟ್ಲ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಅರುಣ್ ವಿಟ್ಲ, ಬಿಜೆಪಿ ಪ್ರಮುಖರಾದ ಪುನೀತ್ ಮಾಡ್ತಾರು, ಶ್ರೀಕೃಷ್ಣ ವಿಟ್ಲ, ರವಿಪ್ರಕಾಶ್, ಮಂಜುನಾಥ ಕಲ್ಲಕಟ್ಟ ಮತ್ತಿತರರು ಉಪಸ್ಥಿತರಿದ್ದರು.



ಸಭೆಯಲ್ಲಿ ಸಾಜ ರಾಧಾಕೃಷ್ಣ ಆಳ್ವ, ರಾಜೇಶ ಬನ್ನೂರು, ಚಂದ್ರಶೇಖರ ಬಪ್ಪಳಿಗೆ,ಅಪ್ಪಯ್ಯ ಮಣಿಯಾಣಿ, ಪಟ್ಟಣ ಪಂಚಾಯಿತಿ ಬಿಜೆಪಿ ಸದಸ್ಯರು ಪಕ್ಷದ ಜಿಲ್ಲೆಯ ಮತ್ತು ಸ್ಥಳೀಯ ಮುಖಂಡರು ಭಾಗವಹಿಸಿದ್ದರು.
ತುಳಸಿದಾಸ ಶೆಣೈ ವಂದೇ ಮಾತರಂ ಹಾಡಿದರು. ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಉದಯ ಕುಮಾರ್ ಆಲಂಗಾರು ಸ್ವಾಗತಿಸಿದರು. ಪದಾಧಿಕಾರಿ ನರ್ಸಪ್ಪ ಪೂಜಾರಿ ನಿಡ್ಯ ಪ್ರಸ್ತಾವನೆಗೈದರು. ಪ್ರಧಾನ ಕಾರ್ಯದರ್ಶಿ ಹರೀಶ್ ಸಿ. ಎಚ್. ವಂದಿಸಿದರು ಮೋಹನದಾಸ ಉಕ್ಕುಡ ಕಾರ್ಯಕ್ರಮ ನಿರೂಪಿಸಿದರು








