
ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ (ಎಸ್‌ಐಟಿ) ಸಲ್ಲಿಸಿರುವ ಅಂತಿಮ ವರದಿ ಕುರಿತು ಬೆಳ್ತಂಗಡಿ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಹಾಗೂ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಶನಿವಾರ ವಾದ ಮಂಡಿಸಲಾಯಿತು.
ನ್ಯಾಯಾಧೀಶ ಶಶಾಂಕ್ ನಾಗೇಂದ್ರ ಭಟ್ ಅವರ ಮುಂದೆ ಎಸ್‌ಐಟಿ ಪರ ಸಹಾಯಕ ಸರ್ಕಾರಿ ಅಭಿಯೋಜಕ ದಿವ್ಯರಾಜ್ ಹೆಗ್ಡೆ, ಪುತ್ತೂರು ಅವರು ಸುಮಾರು ಒಂದೂವರೆ ಗಂಟೆಗಳ ಕಾಲ ಸುದೀರ್ಘ ವಾದ ಮಂಡಿಸಿದರು.ಮಂಡ್ಯ ಮೂಲದ ಚಿನ್ನಯ್ಯ ನೀಡಿದ್ದ ದೂರಿನ ಆಧಾರದ ಮೇಲೆ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡವನ್ನು ರಚಿಸಿತ್ತು. ಧರ್ಮಸ್ಥಳ ಗ್ರಾಮ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಕಾನೂನುಬಾಹಿರವಾಗಿ ಮೃತದೇಹಗಳನ್ನು ಹೂತು ಹಾಕಲಾಗಿದೆ ಎಂಬ ಆರೋಪದ ಕುರಿತು ತನಿಖೆ ನಡೆಸಿದ ಎಸ್‌ಐಟಿ, 7,000ಕ್ಕೂ ಅಧಿಕ ಪುಟಗಳ ಅಂತಿಮ ವರದಿಯನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಸಲ್ಲಿಸಿತ್ತು.ಎಸ್‌ಐಟಿ ಪರ ವಾದ ಮಂಡಿಸಿದ ದಿವ್ಯರಾಜ್ ಹೆಗ್ಡೆ ಅವರು, ಚಿನ್ನಯ್ಯ ಎಸ್‌ಪಿ ಕಚೇರಿಗೆ ನೀಡಿದ್ದ ದೂರು ಹಾಗೂ ಬಳಿಕ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅ.ಕ್ರ.39/2025ರಂತೆ ದಾಖಲಾದ ಪ್ರಕರಣಕ್ಕೆ ಯಾವುದೇ ಸಾಕ್ಷ್ಯಾಧಾರಗಳು ಲಭ್ಯವಾಗಿಲ್ಲ ಎಂದು ನ್ಯಾಯಾಲಯಕ್ಕೆ ಮನವರಿಕೆ ಮಾಡಿದರು.
ಹೀಗಾಗಿ ಪ್ರಕರಣವನ್ನು ಮುಕ್ತಾಯಗೊಳಿಸುವಂತೆ ಮನವಿ ಮಾಡಿದ ಅವರು, ಸುಳ್ಳು ದೂರು ನೀಡಿದ ಆರೋಪದ ಹಿನ್ನೆಲೆಯಲ್ಲಿ ಚಿನ್ನಯ್ಯ, ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್, ಜಯಂತ್ ಟಿ., ವಿಠಲ ಗೌಡ ಹಾಗೂ ಸುಜಾತ ಭಟ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ನ್ಯಾಯಾಲಯವನ್ನು ಕೋರಿದರು.
ತನಿಖಾಧಿಕಾರಿ ಜಿತೇಂದ್ರ ಕುಮಾರ್ ದಯಾಮ ಅವರು ಬಿಎನ್‌ಎಸ್ ಸೆಕ್ಷನ್ 215ರ ಅಡಿಯಲ್ಲಿ ಸಲ್ಲಿಸಿರುವ ವರದಿಯನ್ನು ದೂರಾಗಿ ಪರಿಗಣಿಸಿ, ಸಂಬಂಧಪಟ್ಟವರ ವಿರುದ್ಧ ವಿಚಾರಣೆ ನಡೆಸಬೇಕು. ಪ್ರಕರಣ ದಾಖಲಿಸಿ ಸೆಷನ್ಸ್ ನ್ಯಾಯಾಲಯಕ್ಕೆ ವರ್ಗಾಯಿಸಬೇಕು ಎಂದು ವಾದಿಸಿದರು.ಅದೇ ರೀತಿ, ಸಾಕ್ಷಿ-ದೂರುದಾರನಾಗಿ ನ್ಯಾಯಾಲಯದ ಮುಂದೆ ಚಿನ್ನಯ್ಯ ಬಿಎನ್‌ಎಸ್‌ಎಸ್ ಸೆಕ್ಷನ್ 183ರ ಅಡಿಯಲ್ಲಿ ನೀಡಿರುವ ಹೇಳಿಕೆ ಸುಳ್ಳಾಗಿದೆ ಎಂದು ಆರೋಪಿಸಿದ ಅವರು, ಈ ವಿಚಾರದಲ್ಲೂ ನ್ಯಾಯಾಲಯ ಸೂಕ್ತ ಕ್ರಮ ಕೈಗೊಳ್ಳಬೇಕು. ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲು ತನಿಖಾಧಿಕಾರಿಗೆ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದರು.
ಎಸ್‌ಐಟಿ ಪರ ವಾದವನ್ನು ಆಲಿಸಿದ ನ್ಯಾಯಾಧೀಶ ಶಶಾಂಕ್ ನಾಗೇಂದ್ರ ಭಟ್ ಅವರು ಪ್ರಕರಣದ ಮುಂದಿನ ವಿಚಾರಣೆಯನ್ನು ಅಕ್ಟೋಬರ್ 3ಕ್ಕೆ ಮುಂದೂಡಿದರು.ಈ ವೇಳೆ ಎಸ್‌ಐಟಿ ಎಸ್ಪಿ ಸಿ.ಎ. ಸೈಮನ್, ತನಿಖಾ ತಂಡದ ಸಿಬ್ಬಂದಿ ಹಾಗೂ ಚಿನ್ನಯ್ಯ ನ್ಯಾಯಾಲಯದಲ್ಲಿ ಹಾಜರಿದ್ದರು








