Wednesday, November 4, 2026
spot_imgspot_img
spot_imgspot_img

ಕರಡು ಮತದಾರರ ಪಟ್ಟಿಯಲ್ಲಿ ಹೆಸರಿಲ್ಲವೇ? ಹಳೆಯ ಮತದಾರರಿಗೂ ಫಾರಂ 6 ಸಲ್ಲಿಕೆಗೆ ಅವಕಾಶ- ಆಯೋಗದಿಂದ ಸ್ಪಷ್ಟನೆ

- Advertisement -
- Advertisement -

ಹೊಸದಿಲ್ಲಿ: ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಡಿ ಪ್ರಕಟಿಸಿರುವ ಕರಡು ಮತದಾರರ ಪಟ್ಟಿಯಲ್ಲಿ ಹೆಸರು ಕಾಣೆಯಾಗಿದ್ದರೆ, ಈ ಹಿಂದೆ ಮತದಾರರಾಗಿ ನೋಂದಾಯಿಸಿಕೊಂಡಿದ್ದವರೂ ಅಂತಿಮ ಪಟ್ಟಿಯಲ್ಲಿ ಹೆಸರು

ಸೇರ್ಪಡೆಗೊಳಿಸಲು ‘ನಮೂನೆ 6’ (ಫಾರಂ 6) ಸಲ್ಲಿಸಬಹುದು ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.

ಅರ್ಜಿ ನಮೂನೆಯಲ್ಲಿ ನೀಡಬೇಕಾದ ಘೋಷಣೆ ಹಾಗೂ ‘ಜನತಾ ಪ್ರಾತಿನಿಧ್ಯ ಕಾಯಿದೆ, 1950’ರ ಸೆಕ್ಷನ್ 31ರ ಅಡಿಯಲ್ಲಿ ಕಾನೂನು ಕ್ರಮ ಜರುಗುವ ಸಾಧ್ಯತೆ ಕುರಿತು ಮತದಾರರಲ್ಲಿ ಉಂಟಾಗಿರುವ ಆತಂಕಕ್ಕೆ ಆಯೋಗ ಈ ಸ್ಪಷ್ಟನೆ ನೀಡಿದೆ.

ಎಲ್ಲ ರಾಜ್ಯಗಳ ಮುಖ್ಯ ಚುನಾವಣಾಧಿಕಾರಿಗಳಿಗೆ ಮಂಗಳವಾರ ಪತ್ರ ಬರೆದಿರುವ ಆಯೋಗ, ಈ ಹಿಂದೆ ಮತದಾರರಾಗಿ ನೋಂದಾಯಿಸಿಕೊಂಡಿದ್ದ ಕೆಲವು ವ್ಯಕ್ತಿಗಳು ‘ನಮೂನೆ 6’ ಸಲ್ಲಿಸಲು ಹಿಂಜರಿಯುತ್ತಿರುವುದು ತಮ್ಮ ಗಮನಕ್ಕೆ ಬಂದಿದೆ ಎಂದು ತಿಳಿಸಿದೆ.

‘ನಮೂನೆ 6’ ಅರ್ಜಿಯಲ್ಲಿ ತಮ್ಮ ಹೆಸರು ಮೊದಲ ಬಾರಿಗೆ ಮತದಾರರ ಪಟ್ಟಿಗೆ ಸೇರ್ಪಡೆಯಾಗುತ್ತಿದೆ ಎಂಬ ಘೋಷಣೆ ನೀಡಬೇಕಾಗುತ್ತದೆ. ಈಗಾಗಲೇ ಮತದಾರರಾಗಿ ನೋಂದಾಯಿಸಿಕೊಂಡಿರುವವರು ಇಂತಹ ಘೋಷಣೆ ನೀಡುವುದು ಸುಳ್ಳು ಹೇಳಿಕೆಯಾದೀತು ಎಂಬ ಆತಂಕ ಹೊಂದಿದ್ದಾರೆ ಎಂದು ಆಯೋಗ ವಿವರಿಸಿದೆ.

‘ಈಗಾಗಲೇ ಮತದಾರರಾಗಿ ನೋಂದಾಯಿಸಿಕೊಂಡಿರುವುದರಿಂದ ನಮೂನೆ 6 ಸಲ್ಲಿಸುವುದು ಸುಳ್ಳು ಘೋಷಣೆ ನೀಡಿದಂತಾಗುತ್ತದೆ. ಇದರಿಂದ ಜನತಾ ಪ್ರಾತಿನಿಧ್ಯ ಕಾಯಿದೆ, 1950ರ ಸೆಕ್ಷನ್ 31ರ ಅಡಿಯಲ್ಲಿ ಕಾನೂನು ಕ್ರಮಕ್ಕೆ (ಪ್ರಾಸಿಕ್ಯೂಷನ್ ಗೆ) ಒಳಗಾಗಬೇಕಾಗುತ್ತದೆ ಎಂದು ಮತದಾರರು ಭಾವಿಸಿದ್ದಾರೆ’ ಎಂದು ಆಯೋಗ ಪತ್ರದಲ್ಲಿ ತಿಳಿಸಿದೆ.

ಈ ಹಿನ್ನೆಲೆಯಲ್ಲಿ ಈ ಹಿಂದೆ ಮತದಾರರಾಗಿ ನೋಂದಾಯಿಸಿಕೊಂಡಿದ್ದರೂ ಪ್ರಸ್ತುತ ಪ್ರಕಟಿಸಿರುವ ಕರಡು ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದವರು ಅಂತಿಮ ಪಟ್ಟಿಯಲ್ಲಿ ತಮ್ಮ ಹೆಸರನ್ನು ಹೊಸದಾಗಿ ಸೇರ್ಪಡೆಗೊಳಿಸಿಕೊಳ್ಳಲು ‘ನಮೂನೆ 6’ ಸಲ್ಲಿಸಬಹುದು ಎಂದು ಆಯೋಗ ಸ್ಪಷ್ಟಪಡಿಸಿದೆ.

- Advertisement -

Related news

error: Content is protected !!