
ಬೆಂಗಳೂರು : ಬೆಂಗಳೂರು ನಗರದ ಪೊಲೀಸರುವಿಶೇಷ ಕಾರ್ಯಾಚರಣೆ ನಡೆಸಿ 6,076 ಸ್ಥಳಗಳ ಪರಿಶೀಲನೆ ನಡೆಸಿದ್ದು ಒಟ್ಟು 529 ಬಾಲ ಕಾರ್ಮಿಕರನ್ನು ರಕ್ಷಣೆ ಮಾಡಿ, ಮಾಲಕರ ವಿರುದ್ಧ 105 ಪ್ರಕರಣಗಳನ್ನು ದಾಖಲು ಮಾಡಿದ್ದಾರೆ.ಪೊಲೀಸ್ ಅಧಿಕಾರಿಗಳು/ಸಿಬ್ಬಂದಿಗಳನ್ನೊಳಗೊಂಡ ವಿಶೇಷ ತಂಡಗಳನ್ನು ರಚನೆ ಮಾಡಿಕೊಂಡು, ಬೆಂಗಳೂರು ನಗರದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ವಾಣಿಜ್ಯ ಸಂಕೀರ್ಣಗಳು, ಕೈಗಾರಿಕಾ ಪ್ರದೇಶಗಳು ಹಾಗೂ ಇನ್ನಿತರೆ ಪ್ರದೇಶಗಳು ಸೇರಿದಂತೆ 6076 ಸ್ಥಳಗಳಲ್ಲಿ ಅನಿರೀಕ್ಷಿತ ಕಾರ್ಯಾಚರಣೆ ನಡೆಸಲಾಗಿದೆ.ಇಲ್ಲಿಯವರೆವಿಗೂ ತಂಡಗಳು ನಡೆಸಿದ ಕಾರ್ಯಾಚರಣೆಯಲ್ಲಿ ಬೆಂಗಳೂರು ನಗರದ ಎಲ್ಲ ವಿಭಾಗಗಳಲ್ಲಿ ಈ ಸಂಬಂಧ ಬಾಲ ಕಾರ್ಮಿಕರನ್ನು ಕೆಲಸಕ್ಕೆ ಇಟ್ಟುಕೊಂಡಿದ್ದ ಅಂಗಡಿ ಮಾಲಕರ ವಿರುದ್ಧ ಬಾಲ ಕಾರ್ಮಿಕರ ನಿಷೇಧ ಕಾಯ್ದೆ ಮತ್ತು ಬಾಲ ನ್ಯಾಯ ಕಾಯ್ದೆ ಅಡಿಯಲ್ಲಿ ಒಟ್ಟು 105 ಪ್ರಕರಣಗಳನ್ನು ದಾಖಲಿಸಲಾಗಿರುತ್ತದೆ ಎಂದು ಪೊಲೀಸರು ಹೇಳಿದ್ದಾರೆ.
ಬೆಂಗಳೂರು ಕೇಂದ್ರ ವಿಭಾಗದಲ್ಲಿ 63 ಬಾಲ ಕಾರ್ಮಿಕರನ್ನು ರಕ್ಷಣೆ ಮಾಡಲಾಗಿದೆ. ದಕ್ಷಿಣ ವಿಭಾಗದಲ್ಲಿ 52 ಬಾಲ ಕಾರ್ಮಿಕರನ್ನು ರಕ್ಷಣೆ ಮಾಡಿ, 4 ಪ್ರಕರಣಗಳನ್ನು ದಾಖಲಿಸಲಾಗಿದೆ. ಪಶ್ಚಿಮದಲ್ಲಿ 103 ಮಕ್ಕಳನ್ನು ರಕ್ಷಣೆ ಮಾಡಿ, 15 ಪ್ರಕರಣಗಳನ್ನು ದಾಖಲಿಸಲಾಗಿದೆ. ಉತ್ತರದಲ್ಲಿ 66 ಮಕ್ಕಳನ್ನು ರಕ್ಷಿಸಿ, 3 ಪ್ರಕರಣಗಳನ್ನು ದಾಖಲಿಸಲಾಗಿದೆ.ನೈರುತ್ಯ ವಿಭಾಗದಲ್ಲಿ 17 ಮಕ್ಕಳನ್ನು ರಕ್ಷಿಸಿ, 5 ಪ್ರಕರಣಗಳನ್ನು ದಾಖಲಿಸಲಾಗಿದೆ. ವಾಯುವ್ಯದಲ್ಲಿ 27 ಮಕ್ಕಳನ್ನು ರಕ್ಷಿಸಿ, 9 ಪ್ರಕರಣಗಳನ್ನು ದಾಖಲಿಸಲಾಗಿದೆ. ಪೂರ್ವ ವಿಭಾಗದಲ್ಲಿ 74 ಮಕ್ಕಳನ್ನು ರಕ್ಷಿಸಿ, 18 ಪ್ರಕರಣಗಳನ್ನು ದಾಖಲಿಸಲಾಗಿದೆ.
ಈಶಾನ್ಯದಲ್ಲಿ 47 ಮಕ್ಕಳನ್ನು ರಕ್ಷಿಸಿ, 17 ಪ್ರಕರಣಗಳನ್ನು ದಾಖಲಿಸಲಾಗಿದೆ.ಆಗ್ನೆಯ ವಿಭಾಗದಲ್ಲಿ 24 ಮಕ್ಕಳನ್ನು ರಕ್ಷಿಸಲಾಗಿದೆ. ಎಲೆಕ್ಟ್ರಾನಿಕ್ ಸಿಟಿ ವಿಭಾಗದಲ್ಲಿ 3 ಬಾಲ ಕಾರ್ಮಿಕರನ್ನು ರಕ್ಷಣೆ ಮಾಡಲಾಗಿದೆ. ವೈಟ್‌ಫೀಲ್ಡ್ ವಿಭಾಗದಲ್ಲಿ 8 ಬಾಲ ಕಾರ್ಮಿಕರನ್ನು ರಕ್ಷಣೆ ಮಾಡಿ, 8 ಪ್ರಕರಣಗಳನ್ನು ದಾಖಲಿಸಲಾಗಿದೆ. ಸಿಸಿಬಿ ಪೊಲೀಸರು 45 ಬಾಲ ಕಾರ್ಮಿಕರನ್ನು ರಕ್ಷಣೆ ಮಾಡಿ, 26 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.








