
ಹೊಸದಿಲ್ಲಿ: ಸಾಮಾನ್ಯವಾಗಿ ವಿದ್ಯುತ್ ಬಳಕೆಯಾದ ಎರಡು ವರ್ಷಗಳೊಳಗೆ ವಿದ್ಯುತ್ ಬಿಲ್ ನೀಡಬೇಕು. ಎರಡು ವರ್ಷಗಳ ನಂತರ ಆ ಮೊತ್ತವನ್ನು ವಸೂಲಿ ಮಾಡಬೇಕಿದ್ದರೆ ಅದನ್ನು ನಿರಂತರವಾಗಿ ವಸೂಲಿ ಮಾಡಬಹುದಾದ ಬಾಕಿ ಮೊತ್ತವೆಂದು ಪರಿಗಣಿಸಿರಬೇಕು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.ನ್ಯಾಯಮೂರ್ತಿಗಳಾದ ಎಸ್.ವಿ.ಎನ್.ಭಟ್ಟಿ ಮತ್ತು ಎನ್.ವಿ. ಅಂಜಾರಿಯಾ ಅವರ ನೇತೃತ್ವದ ಸುಪ್ರೀಂ ಕೋರ್ಟ್ ಪೀಠ, ಉತ್ತರ ಪ್ರದೇಶ ಮೂಲದ ವಿದ್ಯುತ್ ವಿತರಣಾ ಪರವಾನಗಿ ಸಂಸ್ಥೆ ದಕ್ಷಿಣಾಂಚಲ್ ವಿದ್ಯುತ್ ವಿತರಣ್ ನಿಗಮ್ ಲಿಮಿಟೆಡ್ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿದೆ.
ಈ ಪ್ರಕರಣದಲ್ಲಿ ಅಲಹಾಬಾದ್ ಹೈಕೋರ್ಟ್ ನೀಡಿದ್ದ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ. ಗ್ರಾಹಕರಿಗೆ ಒದಗಿಸುವುದಾಗಿ ತಿಳಿಸಲಾಗಿದ್ದ ಹೆಚ್ಚುವರಿ 2,000 ಕೆವಿಎ ವಿದ್ಯುತ್ ಲೋಡ್ ಸೌಲಭ್ಯವನ್ನು ಗ್ರಾಹಕರು ಬಳಸಿರಲಿಲ್ಲ ಎಂದು ಹೈಕೋರ್ಟ್ ಗಮನಿಸಿತ್ತು. ಅಲ್ಲದೆ, 1998ರಿಂದ ಈ ಮೊತ್ತವನ್ನು ಗ್ರಾಹಕರಿಂದ ವಸೂಲಿ ಮಾಡಬಹುದಾದ ಬಾಕಿ ಎಂದು ನಿರಂತರವಾಗಿ ಪರಿಗಣಿಸಿರಲಿಲ್ಲ ಎಂದು ನ್ಯಾಯಾಲಯ ತಿಳಿಸಿತ್ತು.ಮೇಲ್ಮನವಿದಾರರಾದ ಡಿವಿವಿಎನ್‌ಎಲ್(DVVNL) ವಿದ್ಯುತ್ ವಿತರಣಾ ಪರವಾನಗಿ ಹೊಂದಿರುವ ಸಂಸ್ಥೆಯಾಗಿದೆ. ಪ್ರತಿವಾದಿ ಸಂಖ್ಯೆ 3 ಅದರ ಗ್ರಾಹಕರಾಗಿದ್ದಾರೆ.
ಪ್ರತಿವಾದಿ ಸಂಖ್ಯೆ 3 ಅವರು 4,000 ಕೆವಿಎ ವಿದ್ಯುತ್ ಲೋಡ್ ಸಾಮರ್ಥ್ಯದ ವಿದ್ಯುತ್ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಸಂಸ್ಥೆಯು ಮಿತಿಗಳ ಕಾರಣದಿಂದ 2,000 ಕೆವಿಎ ವಿದ್ಯುತ್ ಲೋಡ್ ಒದಗಿಸಲು ಒಪ್ಪಿಕೊಂಡಿತ್ತು.ಇದರ ಪರಿಣಾಮವಾಗಿ 24.02.1997ರಂದು ಒಪ್ಪಂದ ಮಾಡಿಕೊಳ್ಳಲಾಗಿತ್ತು. 1998ರ ಜನವರಿ 31ರಂದು ವಿದ್ಯುತ್ ಲೋಡ್ ಅನ್ನು 2,000 ಕೆವಿಎಯಿಂದ ಹೆಚ್ಚುವರಿಯಾಗಿ 2,000 ಕೆವಿಎಗೆ ಹೆಚ್ಚಿಸುವುದಾಗಿ ಪ್ರಸ್ತಾಪಿಸಿತ್ತು.
ಆದರೆ, ಪ್ರತಿವಾದಿ ಸಂಖ್ಯೆ 3 ಹೆಚ್ಚುವರಿ ವಿದ್ಯುತ್ ಲೋಡ್ ಪಡೆಯಲು ಆಸಕ್ತಿ ಇಲ್ಲ ಎಂದು ತಿಳಿಸಿತ್ತು.2007ರ ಫೆಬ್ರವರಿ 13ರಂದು, ಅಂದರೆ ಸುಮಾರು 9 ವರ್ಷಗಳ ಬಳಿಕ, ಮೇಲ್ಮನವಿದಾರ ಸಂಸ್ಥೆಯು 1998ರ ಫೆಬ್ರವರಿಯಿಂದ ಸೆಪ್ಟೆಂಬರ್‌ವರೆಗಿನ ಅವಧಿಗೆ ಕನಿಷ್ಠ ಬಳಕೆ ಖಾತರಿ ಶುಲ್ಕ (MCGC) ರೂಪದಲ್ಲಿ 57,74,164 ಪಾವತಿಸುವಂತೆ ಬೇಡಿಕೆ ಸಲ್ಲಿಸಿತು. ಆ ಅವಧಿಯ ಒಪ್ಪಂದದ ವಿದ್ಯುತ್ ಸಾಮರ್ಥ್ಯ 4,000 ಕೆವಿಎ ಇತ್ತು ಎಂದು ಸಂಸ್ಥೆ ವಾದಿಸಿತ್ತು.







