

ಬೆಂಗಳೂರು: 2025ರ ಜೂನ್ 4ರಂದು ಆರ್‌ಸಿಬಿ ಐಪಿಎಲ್ ವಿಜಯೋತ್ಸವದ ವೇಳೆ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂದಿನ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಸೇರಿದಂತೆ ಮೂವರು ಐಪಿಎಸ್ ಅಧಿಕಾರಿಗಳನ್ನು ರಾಜ್ಯ ಸರ್ಕಾರ ಆರೋಪ ಮುಕ್ತಗೊಳಿಸಿದೆ.ಪ್ರಕರಣಕ್ಕೆ ಸಂಬಂಧಿಸಿ ಬಿ. ದಯಾನಂದ್, ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ಹಾಗೂ ಕೇಂದ್ರ ವಿಭಾಗದ ಡಿಸಿಪಿ ಶೇಖರ್ ಎಚ್. ತಕ್ಕಣ್ಣವರ್ ವಿರುದ್ಧ ಇಲಾಖೆ ವಿಚಾರಣೆಗೆ ಆದೇಶಿಸಲಾಗಿತ್ತು.


ಆದರೆ, ಇಲಾಖೆ ವಿಚಾರಣೆ ಬಳಿಕ ಮೂವರು ಅಧಿಕಾರಿಗಳ ವಿರುದ್ಧದ ಆರೋಪಗಳು ಸಾಬೀತಾಗದ ಹಿನ್ನೆಲೆಯಲ್ಲಿ ಎಲ್ಲ ಆರೋಪಗಳಿಂದ ಮುಕ್ತಗೊಳಿಸಿ, ಅವರ ವಿರುದ್ಧ ನಡೆಯುತ್ತಿದ್ದ ಇಲಾಖಾ ವಿಚಾರಣೆಯನ್ನು ಸರ್ಕಾರ ಅಧಿಕೃತವಾಗಿ ಮುಕ್ತಾಯಗೊಳಿಸಿದೆ.

ಗಮನಾರ್ಹವಾಗಿ, 2025ರ ಜೂನ್ 4ರಂದು ಆರ್‌ಸಿಬಿ ಐಪಿಎಲ್ ಪ್ರಶಸ್ತಿ ಗೆದ್ದ ಸಂಭ್ರಮಾಚರಣೆಯ ವೇಳೆ ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ 11 ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದರು. ಈ ಘಟನೆ ರಾಜ್ಯಾದ್ಯಂತ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು.








