ಚೆನ್ನೈ: ಆರು ವರ್ಷಗಳ ಹಿಂದೆ ದೇಶದಾದ್ಯಂತ ಆಕ್ರೋಶಕ್ಕೆ ಕಾರಣವಾಗಿದ್ದ ತೂತುಕ್ಕುಡಿ ಜಿಲ್ಲೆಯ ವ್ಯಾಪಾರಿ ಪಿ. ಜಯರಾಜ್ ಹಾಗೂ ಅವರ ಪುತ್ರ ಜೆ. ಬೆನಿಕ್ಸ್ ಅವರ ಸಾತಾನ್‌ಕುಲಂ ಪೊಲೀಸ್ ಕಸ್ಟಡಿ ಸಾವಿನ ಪ್ರಕರಣದಲ್ಲಿ ತಮಿಳುನಾಡಿನ ಮಧುರೈ ಜಿಲ್ಲೆಯ ಹೆಚ್ಚುವರಿ ಜಿಲ್ಲಾ ಹಾಗೂ ಸೆಶನ್ಸ್ ನ್ಯಾಯಾಲಯ ಸೋಮವಾರ 9 ಮಂದಿ ಪೊಲೀಸರಿಗೆ ಮರಣದಂಡನೆ ವಿಧಿಸಿದೆ.

ಇನ್ಸ್‌ಪೆಕ್ಟರ್ ಶ್ರೀಧರ್, ಸಬ್-ಇನ್ಸ್‌ಪೆಕ್ಟರ್‌ಗಳಾದ ಬಾಲಕೃಷ್ಣನ್, ರಘು ಗಣೇಶ್ ಹಾಗೂ ಪೊಲೀಸ್ ಸಿಬ್ಬಂದಿ ಮುರುಗನ್, ಸಮುದುರೈ, ಮುತ್ತುರಾಜಾ, ಚೆಲ್ಲದುರೈ, ಥಾಮಸ್ ಫ್ರಾನ್ಸಿಸ್ ಹಾಗೂ ವೈಲುಮುತ್ತು ಮರಣದಂಡನೆ ವಿಧಿಸಲ್ಪಟ್ಟ ಆರೋಪಿಗಳಾಗಿದ್ದಾರೆ.‘ಇದು ಅಧಿಕಾರ ದುರುಪಯೋಗದ ಪ್ರಕರಣ’’ ಎಂದು ಗಮನ ಸೆಳೆದ ನ್ಯಾಯಾಲಯ, ತಮಿಳುನಾಡಿನಲ್ಲಿ ಅನೇಕ ಪ್ರಾಮಾಣಿಕ ಪೊಲೀಸ್ ಅಧಿಕಾರಿಗಳಿದ್ದಾರೆ ಹಾಗೂ ಈ ತೀರ್ಪು ಪೊಲೀಸರಲ್ಲಿ ಭಯ ಉಂಟು ಮಾಡುವುದಿಲ್ಲ ‘‘ತಂದೆ ಮತ್ತು ಮಗನನ್ನು ವಿವಸ್ತ್ರಗೊಳಿಸಿ ನಿರ್ದಯವಾಗಿ ಹಲ್ಲೆ ನಡೆಸಲಾಗಿದೆ. ಅದನ್ನು ಓದಿದಾಗ ಹೃದಯ ಕಂಪಿಸುತ್ತದೆ’’ ಎಂದು ನ್ಯಾಯಾಧೀಶ ಜಿ. ಮುತ್ತುಕುಮಾರ್ ಅವರು ತೀರ್ಪಿನಲ್ಲಿ ತಿಳಿಸಿದ್ದಾರೆ. ಶಿಕ್ಷೆ ನೀಡಿಕೆಯಲ್ಲಿ ಆರೋಪಿಗಳನ್ನು ಭಿನ್ನವಾಗಿ ಪರಿಗಣಿಸಬೇಕೆಂಬ ಅವರ ವಕೀಲರ ವಾದವನ್ನು ತಳ್ಳಿಹಾಕಿದ ನ್ಯಾಯಾಲಯವು ಈ ಘೋರ ಕೃತ್ಯಕ್ಕೆ ಎಲ್ಲಾ ಆರೋಪಿಗಳು ಸಮಾನ ಹೊಣೆಗಾರರಾಗಿರುವುದರಿಂದ ಯಾರು ಹೆಚ್ಚು ಹಿಂಸಿಸಿದ್ದಾರೆಂಬುದನ್ನು ನಿರ್ಧರಿಸಲಾಗದು ಎಂದು ಹೇಳಿದೆ.
ಪ್ರಕರಣದ ಆರೋಪಿಗಳಿಗೆ ಪ್ರತ್ಯೇಕವಾಗಿ 84 ಲಕ್ಷ ರೂ.ಗಳಿಂದ ಹಿಡಿದು 2.25 ಲಕ್ಷ ರೂ.ವರೆಗೆ ದಂಡ ಕೂಡಾ ವಿಧಿಸಲಾಗಿದೆ.ವ್ಯಾಪಾರಿಗಳಿಗೆ ಬರ್ಬರ ಕಸ್ಟಡಿ ಚಿತ್ರಹಿಂಸೆ ಹಾಗೂ ಬಳಿಕ ಅವರ ಹತ್ಯೆಯನ್ನು ಅತ್ಯಂತ ಅಪರೂಪದ ಪ್ರಕರಣ ಎಂದು ಬಣ್ಣಿಸಿದ ಸಿಬಿಐ, ಪರೋಲ್‌ಗೆ ಅವಕಾಶ ನೀಡದೆ, ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆಯ ಗರಿಷ್ಠ ದಂಡನೆ ವಿಧಿಸಬೇಕು ಎಂದು ಕೋರಿತ್ತು. ಇದೊಂದು ಹೇಯ ಕೃತ್ಯವಾಗಿದ್ದು, ವ್ಯಾಪಾರಿಗಳು ಸತ್ತಾನ್‌ಕುಲಂ ಪೊಲೀಸ್ ಠಾಣೆಯಲ್ಲಿ ರಾತ್ರಿಯಿಡೀ ಚಿತ್ರಹಿಂಸೆಗೊಳಗಾಗಿದ್ದರು ಎಂದು ಸಿಬಿಐ ಪರ ವಕೀಲರು ಗಮನಸೆಳೆದಿದ್ದರು.2023ರ ಮಾರ್ಚ್ 23ರಂದು ಪ್ರಕರಣದ ತೀರ್ಪು ನೀಡಿದ ನ್ಯಾಯಾಧೀಶ ಮುತ್ತುಕುಮಾರನ್ ಅವರು ಎಲ್ಲಾ 9 ಆರೋಪಿ ಪೊಲೀಸರನ್ನು ದೋಷಿಗಳೆಂದು ಪರಿಗಣಿಸಿದ್ದು, ತೀರ್ಪನ್ನು ಕಾಯ್ದಿರಿಸಿದ್ದರು.
ಪ್ರಕರಣದ ಹಿನ್ನೆಲೆತೂತುಕುಡಿ ಜಿಲ್ಲೆಯ ಸಾತಾನ್‌ಕುಲಂನಲ್ಲಿ ತಮ್ಮ ಅಂಗಡಿಯನ್ನು ನಿಗದಿತ ಅವಧಿಯನ್ನು ಮೀರಿ ತೆರೆದಿಡುವ ಮೂಲಕ ಕೋವಿಡ್ ಲಾಕ್‌ಡೌನ್ ನಿಯಮಗಳನ್ನು ಉಲ್ಲಂಘಿಸಿದ ಆರೋಪದಲ್ಲಿ ಪಿ.ಜಯರಾಜ್ ಹಾಗೂ ಅವರ ಪುತ್ರ ಬೆನಿಕ್ಸ್ ಅವರನ್ನು 2020 ಜೂನ್ 19ರಂದು ಪೊಲೀಸರು ಬಂಧಿಸಿದ್ದರು.
ತಂದೆ ಹಾಗೂ ಮಗನನ್ನು ಪೊಲೀಸರು ಲಾಕ್‌ಅಪ್‌ನಲ್ಲಿ ಹಿಗ್ಗಾಮಗ್ಗಾ ಥಳಿಸಿದ್ದರು. ಗಂಭೀರ ಗಾಯಗೊಂಡಿದ್ದ ಇಬ್ಬರೂ ಜೂ.22ರಂದು ಆಸ್ಪತ್ರೆಗೆ ದಾಖಲಾದ ಕೆಲವೇ ತಾಸುಗಳಲ್ಲಿ ಕೊನೆಯುಸಿರೆಳೆದಿದ್ದರು.ತಂದೆಮಗನ ಲಾಕಪ್‌ಡೆತ್ ಘಟನೆಯು ತಮಿಳುನಾಡು ಮಾತ್ರವಲ್ಲದೆ ದೇಶಾದ್ಯಂತ ಆಕ್ರೋಶದ ಅಲೆಯನ್ನು ಸೃಷ್ಟಿಸಿತ್ತು. ರಾಜ್ಯಾದ್ಯಂತ ವಾಪಾರಿಗಳು ತಮ್ಮ ಅಂಗಡಿಗಳನ್ನು ಮುಚ್ಚಿ ಪ್ರತಿಭಟಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಪೊಲೀಸರನ್ನು ಬಂಧಿಸಲಾಗಿತ್ತು.
‘ಭಾರತದ ಜಾರ್ಜ್ ಫ್ಲಾಯ್ಡ್ ಪ್ರಕರಣ’ಜಯರಾಜ್-ಬೆನ್ನಿನ್ ಕಸ್ಟಡಿ ಸಾವಿನ ಪ್ರಕರಣವು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ‘ಜಸ್ಟೀಸ್ ಫಾರ್ ಜಯರಾಜ್ ಆ್ಯಂಡ್ ಬೆನಿಕ್ಸ್’ ಎಂಬ ಕರೆ ಮೂಲಕ ವೈರಲ್ ಆಗಿ ಹರಿದಾಡುತ್ತಿವೆ.
ಈ ಪ್ರಕರಣವನ್ನು ಅಮೆರಿಕದಲ್ಲಿ ಪೊಲೀಸರಿಂದ ದೌರ್ಜನ್ಯಕ್ಕೊಳಗಾಗಿ ಮೃತಪಟ್ಟ ಆಫ್ರಿಕ ಮೂಲದ ಆಮೆರಿಕ ಪ್ರಜೆ ಜಾರ್ಜ್ ಫ್ಲಾಯ್ಡ್ ಪ್ರಕರಣದೊಂದಿಗೆ ಹೋಲಿಸಲಾಗಿತ್ತು. ಜಾರ್ಜ್ ಫ್ಲಾಯ್ಡ್ ರನ್ನು ಪೊಲೀಸರು ಉಸಿರುಗಟ್ಟಿಸಿ ಹತ್ಯೆಗೈದ ಘಟನೆಯ ವಿರುದ್ಧ ಅಮೆರಿಕದಲ್ಲಿ ವ್ಯಾಪಕ ಪ್ರತಿಭಟನೆಗಳು ನಡೆದಿದ್ದವು.








