ನವದೆಹಲ: ನಿಯಮಾವಳಿಗಳ ನಿರಂತರ ಉಲ್ಲಂಘನೆಯ ಹಿನ್ನೆಲೆಯಲ್ಲಿ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ನ ಪರವಾನಿಗೆಯನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ರದ್ದುಗೊಳಿಸಿದ ಕೆಲ ತಿಂಗಳುಗಳ ಬಳಿಕ, ಬ್ಯಾಂಕನ್ನು ಮುಚ್ಚುವಂತೆ ದಿಲ್ಲಿ ಹೈಕೋರ್ಟ್ ಆದೇಶ ನೀಡಿದೆ.ಆರ್‌ಬಿಐ 2026ರ ಏಪ್ರಿಲ್‌ನಲ್ಲಿ ಬ್ಯಾಂಕ್‌ನ ಪರವಾನಿಗೆಯನ್ನು ರದ್ದುಗೊಳಿಸಿತ್ತು. ಬ್ಯಾಂಕ್‌ನ ವ್ಯವಹಾರಗಳು ಠೇವಣಿದಾರರ ಹಿತಾಸಕ್ತಿಗೆ ಧಕ್ಕೆಯಾಗುವ ರೀತಿಯಲ್ಲಿ ನಡೆಯುತ್ತಿವೆ ಎಂದು ಆರ್‌ಬಿಐ ತನ್ನ ಕ್ರಮಕ್ಕೆ ಕಾರಣ ನೀಡಿತ್ತು. ಅಲ್ಲದೆ, ಬ್ಯಾಂಕನ್ನು ಮುಚ್ಚುವಂತೆ ದಿಲ್ಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸುವುದಾಗಿ ತಿಳಿಸಿತ್ತು.

ಈ ಕುರಿತು ಮಂಗಳವಾರ ಪ್ರಕಟಣೆ ಹೊರಡಿಸಿರುವ ಆರ್‌ಬಿಐ, “1949ರ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಯ ವಿಧಿಗಳ ಅನ್ವಯ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್ ಅನ್ನು ಮುಚ್ಚುವಂತೆ ದಿಲ್ಲಿ ಹೈಕೋರ್ಟ್ ಜುಲೈ 22ರಂದು ತೀರ್ಪು ನೀಡಿದೆ” ಎಂದು ತಿಳಿಸಿದೆ.ಈ ಆದೇಶದೊಂದಿಗೆ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ವಿರುದ್ಧ ಆರ್‌ಬಿಐ ಕೈಗೊಂಡ ನಿಯಂತ್ರಣ ಕ್ರಮಕ್ಕೆ ನ್ಯಾಯಾಂಗದ ಮುದ್ರೆ ಬಿದ್ದಂತಾಗಿದೆ.








