ಚೆನ್ನೈಜು.31: ಕಾವೇರಿ ನದಿ ನೀರಿನಲ್ಲಿ ತನಗೆ ಸಿಗಬೇಕಾದ ಪಾಲನ್ನು ಪಡೆಯಲು ತಮಿಳುನಾಡು ಸುಪ್ರೀಂಕೋರ್ಟ್ ಮೆಟ್ಟಲೇರಲಿದೆ ಎಂದು ಕಾನೂನು ಸಚಿವ ಸಿ.ಟಿ.ಆರ್. ನಿರ್ಮಲ ಕುಮಾರ್ ಶುಕ್ರವಾರ ತಿಳಿಸಿದ್ದಾರೆ. ದೀರ್ಘಕಾಲದಿಂದ ಉಭಯರಾಜ್ಯಗಳ ನಡುವೆ ನಡೆಯುತ್ತಿರುವ ಅಂತರ್‌ರಾಜ್ಯ ಕಾವೇರಿ ಜಲವಿವಾದದ ಕುರಿತು ಕರ್ನಾಟಕ ತಳೆದಿರುವ ನಿಲುವನ್ನು ಅವರು ತಿರಸ್ಕರಿಸಿದ್ದಾರೆ.

ಕಾನೂನು ಪ್ರಕಾರ, ಅಗತ್ಯವಿರುವ ನೀರನ್ನು ಸುಪ್ರೀಂಕೋರ್ಟ್ ಮೂಲಕ ನಾವು ಪಡೆಯಬೇಕಿದೆ ಎಂದು ಹೇಳಿದ ನಿರ್ಮಲ್ ಕುಮಾರ್ ಅವರು, ತಮಿಳುನಾಡಿನ ರೈತರ ಹಿತಾಸಕ್ತಿಗಳನ್ನು ರಕ್ಷಿಸಲು ರಾಜ್ಯ ಸರಕಾರವು ಎಲ್ಲಾ ರೀತಿಯ ಕಾನೂನಾತ್ಮಕ ಅವಕಾಶಗಳನ್ನು ಬಳಸಿಕೊಳ್ಳಲಿದೆಯೆಂದು ತಿಳಿಸಿದ್ದಾರೆ.
ಕಾವೇರಿ ಜಲನಿಯಂತ್ರಣ ಮಂಡಳಿಯ ನಿರ್ದೇಶನಗಳ ಹೊರತಾಗಿಯೂ ಕರ್ನಾಟಕವು ತಮಿಳುನಾಡಿಗೆ ಕಾವೇರಿ ನದಿ ನೀರನ್ನು ಬಿಡುಗಡೆಗೊಳಿಸಲು ವಿಫಲವಾಗಿದೆ. ನೆರೆಯ ರಾಜ್ಯ ಕರ್ನಾಟಕದ ರಾಜಕೀಯವು, ತಮಿಳುನಾಡಿಗೆ ಅದರ ಪಾಲಿನ ನೀರನ್ನು ನಿರಾಕರಿಸುವುದರಲ್ಲೇ ಕೇಂದ್ರೀಕೃತವಾಗಿದೆ ಎಂದರು.
“ಕರ್ನಾಟಕದ ರಾಜಕೀಯವು ಕಾವೇರಿ ವಿವಾದದ ಮೇಲೆಯೇ ನಿಂತುಕೊಂಡಿದೆ. ಸುಮಾರು 30, 40 ವರ್ಷಗಳಿಂದ ಅವರ ರಾಜಕೀಯವಿಡೀ, ತಮಿಳುನಾಡಿಗೆ ನೀರು ಬಿಟ್ಟುಕೊಡದೆ ಇರುವ ನಿಲುವಿಗಷ್ಟೇ ಸೀಮಿತವಾಗಿದೆ ಎಂದು ತಿಳಿಸಿದರು.ಆದರೆ ತಮಿಳುನಾಡು ಸರಕಾರವು, ಕಾವೇರಿ ಜಲ ವಿವಾವನ್ನು ರಾಜಕೀಯ ಸ್ಪರ್ಧೆ ಎಂದು ಪರಿಗಣಿಸುವುದಕ್ಕಿಂತ, ರೈತರ ಜೀವನೋಪಾಯದ ಮೇಲೆ ಪರಿಣಾಮ ಬೀರುವ ವಿಷಯವೆಂದು ಭಾವಿಸುತ್ತದೆ “ಎಂದು ಕುಮಾರ್ ತಿಳಿಸಿದ್ದಾರೆ.
ಕಾವೇರಿ ಜಲವಿವಾದಕ್ಕೆ ಸಂಬಂಧಿಸಿ ರಾಜ್ಯದ ಮುಂದಿನ ಕಾರ್ಯತಂತ್ರವನ್ನು ಅಂತಿಮಗೊಳಿಸುವ ಮುನ್ನ ಮುಖ್ಯಮಂತ್ರಿ ವಿಜಯ್ ಅವರು ಹಿರಿಯ ಅಧಿಕಾರಿಗಳು, ಕಾನೂನು ತಜ್ಞರು ಹಾಗೂ ಇತರ ಸಂಬಂಧಿತರೊಂದಿಗೆ ಸಮಾಲೋಚನೆ ನಡೆಸುತ್ತಿದೆಯೆಂದು ಸಚಿವರು ತಿಳಿಸಿದರು.
ಕಾವೇರಿ ಜಲವಿವಾದಕ್ಕೆ ದೀರ್ಘಕಾಲೀನ ಪರಿಹಾರವನ್ನು ಕಂಡುಕೊಳ್ಳಲು ತಮಿಳುನಾಡು ಸರಕಾರವು ಸುಪ್ರೀಂಕೋರ್ಟ್ ಮೆಟ್ಟಲೇರುವುದು, ನೂತನ ಜಲ ವಿವಾದ ನ್ಯಾಯಾಧೀಕರಣ ರಚನೆಯನ್ನು ಕೋರುವುದು, ಕರ್ನಾಟಕದ ಜೊತೆ ನೇರವಾಗಿ ಮಾತುಕತೆಗಳನ್ನು ನಡೆಸುವುದು ಅಥವಾ ಪ್ರಸಕ್ತ ಜಾರಿಯಲ್ಲಿರುವ ಆದೇಶಗಳ ಅನುಸರಣೆಯನ್ನು ಖಾತರಿಪಡಿಸುವಂತೆ ಕೇಂದ್ರದ ಮೇಲೆ ಒತ್ತಡ ಹೇರುವುದು ಹೀಗೆ ನಾಲ್ಕು ಆಯ್ಕೆಗಳನ್ನು ಪರಿಶೀಲಿಸುತ್ತಿದೆ ಎಂದು ನಿರ್ಮಲ ಕುಮಾರ್ ತಿಳಿಸಿದ್ದಾರೆ.








