
ನವದೆಹಲಿ: ‘ನೀವು ಆ ಕುರ್ಚಿಯಲ್ಲಿ ಕುಳಿತುಕೊಳ್ಳಲು ಅರ್ಹರಲ್ಲ. ಆ ಹುದ್ದೆಗೆ ಬೇಕಾದ ಪ್ರಾಮಾಣಿಕತೆ ನಿಮ್ಮಲ್ಲಿಲ್ಲ’ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯಕಾಂತ್ ವಿರುದ್ದ ವಕೀಲರೊಬ್ಬರು ಸುಪ್ರೀಂ ಕೋರ್ಟ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಸೋಮವಾರ ನಡೆದ ಕಲಾಪದ ವೇಳೆ ಘಟನೆ ನಡೆದಿದೆ. ವಕೀಲರನ್ನು ಭದ್ರತಾ ಸಿಬ್ಬಂದಿ ನ್ಯಾಯಾಲಯದ ಕೊಠಡಿಯಿಂದ ಹೊರಗೆ ಕರೆದೊಯ್ದರು ಎಂದು ‘ಲೈವ್ ಲಾ’ ವರದಿ ಮಾಡಿದೆ.

ತಮ್ಮ ಪ್ರಕರಣದ ತುರ್ತು ವಿಚಾರಣೆ ನಡೆಸುವಂತೆ ಕೋರಿ ವಕೀಲರು ಸಿಜೆಐ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜಾಯ್ಕಲ್ಯ ಬಾಗ್ನಿ ಮತ್ತು ವಿ. ಮೋಹನಾ ಅವರಿದ್ದ ನ್ಯಾಯಪೀಠದ ಮುಂದೆ ಹಾಜರಾಗಿದ್ದರು.
ನವೆಂಬರ್ 2ರಂದು ಸಿಜೆಐ ಅವರ ಕಚೇರಿಗೆ ಪ್ರಕರಣದ ಕಡತ ಸಲ್ಲಿಸಿದ್ದರೂ, 15 ದಿನ ಕಳೆದರೂ ಉತ್ತರ ಬಂದಿಲ್ಲ. ಹೀಗಾಗಿ ನ್ಯಾಯಾಲಯದ ಮುಂದೆ ಬರಬೇಕಾಯಿತು ಎಂದು ಹೇಳಿದರು.
ನಿಗದಿತ ಪ್ರಕ್ರಿಯೆ ಅನುಸರಿಸದೆ ಮಧ್ಯಾಹ್ನ 2 ಗಂಟೆಗೆ ವಿಚಾರಣೆಗೆ ಮನವಿ ಮಾಡಿದ್ದಕ್ಕೆ ಕ್ಷಮೆ ಕೋರಿದ ಅವರು, ದಾಖಲೆಗಳನ್ನು ಪರಿಶೀಲಿಸುವಂತೆ ನ್ಯಾಯಪೀಠವನ್ನು ಒತ್ತಾಯಿಸಿದರು. ಈ ರೀತಿ ವಿಚಾರಣೆಗೆ ಮನವಿ ಸಲ್ಲಿಸಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಮೋಹನಾ ಹೇಳಿದರು. ಬಳಿಕ ಸಿಜೆಐ, ‘ನೀವು ಕಾಯಿರಿ, ನಾವು ಪರಿಶೀಲಿಸುತ್ತೇವೆ’ ಎಂದರು.
ಆದರೆ, ಕಾಯಲು ನಿರಾಕರಿಸಿದ ವಕೀಲರು ಸಿಜೆಐ ವಿರುದ್ಧ ವೈಯಕ್ತಿಕ ಟೀಕೆ ಮಾಡಿದರು. ‘ನಾನು ಕಾಯುವುದಿಲ್ಲ. ನೀವು ಆ ಕುರ್ಚಿಯಲ್ಲಿ ಕುಳಿತುಕೊಳ್ಳಲು ಅರ್ಹರಲ್ಲ. ಆ ಹುದ್ದೆಗೆ ಬೇಕಾದ ಪ್ರಾಮಾಣಿಕತೆ ನಿಮ್ಮಲ್ಲಿಲ್ಲ’ ಎಂದು ಹೇಳಿದರು.
ಇದಾದ ಬಳಿಕ ಕಲಾಪದ ಆಡಿಯೊ ಮತ್ತು ವಿಡಿಯೊ ಪ್ರಸಾರ ಸ್ಥಗಿತಗೊಳಿಸಲಾಯಿತು. ಭದ್ರತಾ ಸಿಬ್ಬಂದಿ ಅವರನ್ನು ಹೊರಗೆ ಕರೆದೊಯ್ದರು ಎಂದು ನ್ಯಾಯಾಲಯದಲ್ಲಿದ್ದ ವಕೀಲರು ತಿಳಿಸಿದ್ದಾರೆ.
ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ದೇಶದಾದ್ಯಂತ ನಡೆದ ಪ್ರತಿಭಟನೆಗಳ ಸಂದರ್ಭದಲ್ಲಿ ಇದೇ ವಕೀಲ ಸಿಜೆಐ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಲಾಗಿತ್ತು ಎಂದು ಸಿಜೆಐ ನೆನಪಿಸಿದರು ಎನ್ನಲಾಗಿದೆ.
ನ್ಯಾಯಪೀಠದಲ್ಲಿದ್ದ ನ್ಯಾಯಮೂರ್ತಿಗಳಾದ ಬಾಗ್ನಿ ಮತ್ತು ಮೋಹನಾ ಅವರ ಬಗ್ಗೆ ಗೌರವವಿದೆ. ಆದರೆ, ಸಿಜೆಐ ಸೂರ್ಯಕಾಂತ್ ಈ ಹುದ್ದೆಯಲ್ಲಿ ಮುಂದುವರಿಯಬಾರದು ಎಂದು ವಕೀಲ ಹೇಳಿದ್ದಾಗಿ ವರದಿಯಾಗಿದೆ. ವಕೀಲರ ವರ್ತನೆಗೆ ಕಠಿಣ ಕ್ರಮ ಕೈಗೊಳ್ಳುವಂತೆ ನ್ಯಾಯಾಲಯದಲ್ಲಿದ್ದ ಇತರ ವಕೀಲರು ಸಿಜೆಐ ಅವರನ್ನು ಒತ್ತಾಯಿಸಿದರು ಎನ್ನಲಾಗಿದೆ.








