
ಮಂಗಳೂರು, ನ.25: ಕೆಪಿಎಸ್ಸಿ ಹಗರಣದಲ್ಲಿ ಭಾಗಿಯಾದ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ. ಜಾರಿ ನಿರ್ದೇಶನಾಲಯ (ಇಡಿ) ಸಲ್ಲಿಸಿರುವ ಚಾರ್ಜ್ಶೀಟ್ನಲ್ಲಿ ಯಾವುದೇ ಡಿಐಜಿ ಹೆಸರಿಲ್ಲ. ಒಂದು ವೇಳೆ ಹೆಸರು ಉಲ್ಲೇಖವಾಗಿದ್ದರೆ ಖಂಡಿತ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟಪಡಿಸಿದ್ದಾರೆ.
ಮಂಗಳೂರಿನ ತಣ್ಣೀರುಬಾವಿಯಲ್ಲಿ ಡೇಟಾ ಸೆಂಟರ್ ಸ್ಥಾಪನೆಗೆ ಸಂಬಂಧಿಸಿದ ಸ್ಥಳ ಪರಿಶೀಲನೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಪಿಎಸ್ಸಿ ಹಗರಣದ ಕುರಿತು ಬಿಜೆಪಿ ನಾಯಕರ ಆರೋಪಗಳಿಗೆ ಪ್ರತಿಕ್ರಿಯಿಸಿದರು.ನಾಲ್ಕು ತಿಂಗಳ ಹಿಂದೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಆರ್. ಅಶೋಕ್, ಛಲವಾದಿ ನಾರಾಯಣಸ್ವಾಮಿ ಹಾಗೂ ಎಚ್.ಡಿ. ಕುಮಾರಸ್ವಾಮಿ ಅವರು ತಮ್ಮ ಸಚಿವ ಸ್ಥಾನ ಹೋಗಲಿದೆ ಎಂದು ಹೇಳಿದ್ದರು. ಆದರೆ ತಾನು ಈಗಲೂ ಸಚಿವನಾಗಿಯೇ ಮುಂದುವರಿದಿದ್ದೇನೆ ಎಂದು ವ್ಯಂಗ್ಯವಾಡಿದರು.
ಸ್ಟಿಂಗ್ ಆಪರೇಷನ್ಗೆ ಸಂಬಂಧಿಸಿದ ಎಲ್ಲ ವಿಚಾರಗಳು ಬಹಿರಂಗವಾದ ಬಳಿಕ ಬಿಜೆಪಿ ನಾಯಕರು ಮೌನವಾಗಿರುವುದೇಕೆ ಎಂದು ಪ್ರಶ್ನಿಸಿದ ಅವರು, ಯಾವುದೇ ವಿಚಾರದ ಸತ್ಯಾಸತ್ಯತೆ ಪರಿಶೀಲಿಸದೆ ಬಿಜೆಪಿ ನಾಯಕರು ಹೇಳಿಕೆ ನೀಡುತ್ತಿದ್ದಾರೆ ಎಂದು ಟೀಕಿಸಿದರು.ಇನ್ನು ಹತ್ತು ವರ್ಷಗಳಲ್ಲಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಲಿದೆ ಎಂಬ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದ ಖರ್ಗೆ, ಕರ್ನಾಟಕ ಏಕೀಕರಣಕ್ಕಾಗಿ ಹಿರಿಯರು ಸಾಕಷ್ಟು ಹೋರಾಟ ನಡೆಸಿದ್ದಾರೆ. ರಾಜಕೀಯ ಸ್ವಾರ್ಥಕ್ಕಾಗಿ ಕನ್ನಡಿಗರನ್ನು ವಿಭಜಿಸುವ ರೀತಿಯ ಹೇಳಿಕೆ ನೀಡುವುದು ಸರಿಯಲ್ಲ ಎಂದರು.
ಕಲ್ಯಾಣ ಕರ್ನಾಟಕದ ಅಭಿವೃದ್ಧಿಗಾಗಿ ಕಲಂ 371(ಜೆ) ಜಾರಿಗೆ ತಂದಂತೆ ಉತ್ತರ ಕರ್ನಾಟಕದ ಅಭಿವೃದ್ಧಿಗೂ ವಿಶೇಷ ಅನುದಾನ ಅಥವಾ ಕೇಂದ್ರದಿಂದ ವಿಶೇಷ ನೆರವು ಪಡೆಯಲು ಅವಕಾಶವಿದೆ. ಅಗತ್ಯವಿದ್ದರೆ ಕಲಂ 371(ಕೆ) ಜಾರಿಗೆ ತರಲಿ. ಅದಕ್ಕೆ ಯಾರ ವಿರೋಧವೂ ಇಲ್ಲ. ಆದರೆ ಪ್ರತ್ಯೇಕ ರಾಜ್ಯದ ಹೆಸರಿನಲ್ಲಿ ಕರ್ನಾಟಕವನ್ನು ಒಡೆಯುವ ಮಾತು ಸರಿಯಲ್ಲ ಎಂದು ಅವರು ಹೇಳಿದರು.








