Friday, November 13, 2026
spot_imgspot_img
spot_imgspot_img

ಉಡುಪಿ: ಕೊಂಕಣ ರೈಲ್ವೆ ವಿಲೀನಕ್ಕೆ ನಾಲ್ಕು ರಾಜ್ಯಗಳ ಅನುಮತಿ ಅಗತ್ಯ: ಸಚಿವ ಅಶ್ವಿನಿ ವೈಷ್ಣವ್‌

- Advertisement -
- Advertisement -

ಉಡುಪಿ: ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆಯಲ್ಲಿ ವಿಲೀನಗೊಳಿಸುವ ಪ್ರಕ್ರಿಯೆಗೆ ಸಂಬಂಧಿಸಿದಂತೆ ಕರ್ನಾಟಕ, ಕೇರಳ, ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳ ಅನುಮತಿ ಬೇಕಾಗಿದೆ ಎಂದು ಕೇಂದ್ರ ರೈಲ್ವೆ ಹಾಗೂ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ. ಉಡುಪಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಅವರು, ಕರಾವಳಿ ಭಾಗದ ರೈಲ್ವೆ ಅಭಿವೃದ್ಧಿ ಮತ್ತು ನೂತನ ಎಫ್‌ಎಂ ಪ್ರಸರಣ ಕೇಂದ್ರದ ಕುರಿತು ಮಹತ್ವದ ಮಾಹಿತಿಗಳನ್ನು ಹಂಚಿಕೊಂಡರು.

ಉಡುಪಿ ಕರಾವಳಿ ಭಾಗದ ಪ್ರಮುಖ ರೈಲ್ವೆ ನಿಲ್ದಾಣವಾಗಿದ್ದು, ಇದನ್ನು ಮೇಲ್ದರ್ಜೆಗೆ ಏರಿಸಲು ಎಲ್ಲ ಪ್ರಯತ್ನ ಮಾಡಲಾಗುವುದು. ಉಡುಪಿ ಪ್ರಮುಖ ಧಾರ್ಮಿಕ ಹಾಗೂ ಶಿಕ್ಷಣ ಕೇಂದ್ರವಾಗಿರುವುದರಿಂದ, ಸ್ಥಳೀಯ ಪಾರಂಪರಿಕ ಶೈಲಿಯನ್ನು ಅಳವಡಿಸಿ ನಿಲ್ದಾಣವನ್ನು ನಿರ್ಮಿಸಲು ಚಿಂತನೆ ನಡೆಸಲಾಗಿದೆ. ಬೈಂದೂರು ರೈಲ್ವೆ ನಿಲ್ದಾಣವನ್ನೂ ಅಭಿವೃದ್ಧಿಗೊಳಿಸುವ ಕುರಿತು ಚಿಂತನೆ ನಡೆದಿದೆ. ಬೆಂಗಳೂರು-ಮಂಗಳೂರು-ಮಡಗಾಂವ್ ನಡುವೆ ವಂದೇ ಭಾರತ್ ರೈಲು ಸಂಚರಿಸುವುದರಿಂದ ಕರಾವಳಿಯ ಜನರ ಸಂಪರ್ಕಕ್ಕೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಸಚಿವರು ಅಭಿಪ್ರಾಯಪಟ್ಟರು.

ಇದೇ ವೇಳೆ ಮಂಗಳೂರು ಆಕಾಶವಾಣಿಯ ಉಡುಪಿಯ ನೂತನ ಎಫ್‌ಎಂ ಟ್ರಾನ್ಸ್‌ಮಿಷನ್ ಕೇಂದ್ರವನ್ನು ಕೇಂದ್ರ ಸಚಿವರು ಲೋಕಾರ್ಪಣೆಗೊಳಿಸಿದರು. ಸುಮಾರು 2.85 ಕೋಟಿ ರೂ. ವೆಚ್ಚದಲ್ಲಿ ಈ ನೂತನ ಪ್ರಸರಣ ಕೇಂದ್ರವನ್ನು ನಿರ್ಮಿಸಲಾಗಿದೆ.

1 ಕಿಲೋವ್ಯಾಟ್ ಸಾಮರ್ಥ್ಯದ 101.9 ಮೆಗಾಹರ್ಟ್ಸ್ ತರಂಗಾಂತರದ ಈ ಎಫ್‌ಎಂ ಕೇಂದ್ರವು ಸುಮಾರು 30 ಕಿ.ಮೀ. ವ್ಯಾಪ್ತಿಯಲ್ಲಿ ಪ್ರಸಾರ ಸೇವೆಯನ್ನು ಒದಗಿಸಲಿದೆ. ಇದರಿಂದ ಉಡುಪಿ ಜಿಲ್ಲೆಯ ಜನರಿಗೆ ಆಕಾಶವಾಣಿಯ ಕಾರ್ಯಕ್ರಮಗಳು ಇನ್ನಷ್ಟು ಸುಲಭವಾಗಿ ಹಾಗೂ ಸ್ಪಷ್ಟವಾಗಿ ಲಭ್ಯವಾಗಲಿವೆ.

ಇದಕ್ಕೂ ಮುನ್ನ ಉಡುಪಿ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು, ಬಳಿಕ ಉಡುಪಿ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು ಹಾಗೂ ಪರ್ಯಾಯ ಶ್ರೀಗಳಿಂದ ಫಲಮಂತ್ರಾಕ್ಷತೆ ಸ್ವೀಕರಿಸಿದರು.

ಕೊಂಕಣ ರೈಲ್ವೇ ರಾಜ್ಯವಾರು ಮಾರ್ಗದ ವಿವರಗಳು:
ಸುಮಾರು 738.94 ಕಿ.ಮೀ ಉದ್ದದ ಕೊಂಕಣ ರೈಲ್ವೆ ಮಾರ್ಗವು ಮಹಾರಾಷ್ಟ್ರ, ಗೋವಾ ಮತ್ತು ಕರ್ನಾಟಕ ರಾಜ್ಯಗಳ ಮೂಲಕ ಹಾದುಹೋಗುತ್ತಿದೆ. ಇದರಲ್ಲಿ ಮಹಾರಾಷ್ಟ್ರ ರಾಜ್ಯವು ಅರ್ಧಕ್ಕಿಂತ ಹೆಚ್ಚು ಪಾಲನ್ನು ಹೊಂದಿದೆ.

ಮಹಾರಾಷ್ಟ್ರ: ಕೊಂಕಣ ರೈಲ್ವೆ ಮಾರ್ಗವು ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಅಂದರೆ 381.81 ಕಿಲೋಮೀಟರ್ ಉದ್ದವಿದ್ದು, ಒಟ್ಟು ಮಾರ್ಗದ ಸುಮಾರು ಶೇಕಡಾ 51.6 ರಷ್ಟು ಪಾಲನ್ನು ಹೊಂದಿದೆ ಮತ್ತು ಇಲ್ಲಿ ಒಟ್ಟು 37 ನಿಲ್ದಾಣಗಳಿವೆ.

ಕರ್ನಾಟಕ: ಕರ್ನಾಟಕ ರಾಜ್ಯದಲ್ಲಿ ಈ ರೈಲು ಮಾರ್ಗವು 251.76 ಕಿಲೋಮೀಟರ್ ಉದ್ದವಿದ್ದು, ಒಟ್ಟು ಮಾರ್ಗದ ಶೇ. 34 ರಷ್ಟು ಪಾಲನ್ನು ಹೊಂದಿದೆ ಮತ್ತು ಇಲ್ಲಿ 25 ನಿಲ್ದಾಣಗಳಿವೆ.

ಗೋವಾ: ಗೋವಾ ರಾಜ್ಯದಲ್ಲಿ ಈ ಮಾರ್ಗವು 106 ಕಿಲೋಮೀಟರ್ ಉದ್ದವಿದ್ದು, ಒಟ್ಟು ಮಾರ್ಗದ ಶೇಕಡಾ 14.3 ರಷ್ಟು ಪಾಲನ್ನು ಹೊಂದಿದೆ ಮತ್ತು ಇಲ್ಲಿ 10 ನಿಲ್ದಾಣಗಳಿವೆ.

ಈ ಮಾರ್ಗವು ಮಹಾರಾಷ್ಟ್ರದ ರೋಹಾದಿಂದ ಪ್ರಾರಂಭವಾಗಿ ಕರ್ನಾಟಕದ ಮಂಗಳೂರಿನ ಸಮೀಪವಿರುವ ತೋಕೂರಿನಲ್ಲಿ ಕೊನೆಗೊಳ್ಳುತ್ತದೆ. ಕೇರಳ ರಾಜ್ಯದಲ್ಲಿ ಈ ರೈಲು ಮಾರ್ಗವು ಹಾದುಹೋಗದಿದ್ದರೂ, ಅದು ಕೂಡ ಈ ಯೋಜನೆಯ ಪಾಲುದಾರ ರಾಜ್ಯಗಳಲ್ಲಿ ಒಂದಾಗಿದೆ.

ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ ನಲ್ಲಿ ಕೇಂದ್ರ ಸರ್ಕಾರ ಶೇ. 51ರಷ್ಟು ಷೇರುಗಳನ್ನು ಹೊಂದಿದ್ದರೆ, ಮಹಾರಾಷ್ಟ್ರ (ಶೇ. 22), ಕರ್ನಾಟಕ (ಶೇ. 15), ಗೋವಾ (ಶೇ. 6) ಮತ್ತು ಕೇರಳ (ಶೇ. 6) ಉಳಿದ ಷೇರುಗಳನ್ನು ಹೊಂದಿವೆ. ಭಾರತೀಯ ರೈಲ್ವೆಯೊಂದಿಗೆ ವಿಲೀನವಾಗಬೇಕಾದರೆ ಈ ನಿಗಮವು ಶೇ. 100ರಷ್ಟು ಕೇಂದ್ರ ಸರ್ಕಾರದ ಮಾಲೀಕತ್ವಕ್ಕೆ ಬರಬೇಕು. ಅದಕ್ಕಾಗಿ ಈ ನಾಲ್ಕೂ ರಾಜ್ಯಗಳು ತಮ್ಮ ಷೇರುಗಳನ್ನು ಬಿಟ್ಟುಕೊಡಲು ಅಧಿಕೃತ ಒಪ್ಪಿಗೆ ನೀಡುವುದು ಕಡ್ಡಾಯವಾಗಿರುವುದಾಗಿ ಮೂಲಗಳಿಂದ ತಿಳಿದುಬಂದಿದೆ.

- Advertisement -

Related news

error: Content is protected !!