Friday, November 20, 2026
spot_imgspot_img
spot_imgspot_img

ಆಧಾರ್ ಕಾರ್ಡ್ ಜನ್ಮ ದಿನಾಂಕದ ಪುರಾವೆಯಲ್ಲ: ದಿಲ್ಲಿ ಹೈಕೋರ್ಟ್ ಸ್ಪಷ್ಟನೆ

- Advertisement -
- Advertisement -

ಹೊಸದಿಲ್ಲಿ: ಆಧಾರ್ ಕಾರ್ಡ್ ವ್ಯಕ್ತಿಯ ಗುರುತಿನ ಪುರಾವೆಯಾಗಬಹುದೇ ಹೊರತು, ಜನ್ಮ ದಿನಾಂಕವನ್ನು ಸಾಬೀತುಪಡಿಸುವ ಅಧಿಕೃತ ದಾಖಲೆಯಾಗಿ ಪರಿಗಣಿಸಲಾಗದು ಎಂದು ದಿಲ್ಲಿ ಹೈಕೋರ್ಟ್ ಸ್ಪಷ್ಟಪಡಿಸಿದೆ. ನಿವೃತ್ತಿ ವಯಸ್ಸು ತಲುಪಿದ್ದಾರೆ ಎಂಬ ಕಾರಣ ನೀಡಿ ಮಹಿಳಾ ಉದ್ಯೋಗಿಯೊಬ್ಬರನ್ನು ಸೇವೆಯಿಂದ ವಜಾಗೊಳಿಸಿದ್ದ ಪ್ರಕರಣದಲ್ಲಿ ಕಾರ್ಮಿಕ ನ್ಯಾಯಾಲಯ ನೀಡಿದ್ದ ಬಾಕಿ ವೇತನ ಪಾವತಿ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದೆ.ನ್ಯಾಯಮೂರ್ತಿ ಮನೋಜ್ ಕುಮಾರ್ ಓನ್ರಿ ಅವರಿದ್ದ ಪೀಠವು, ಆಧಾರ್ ಮುಖ್ಯವಾಗಿ ವ್ಯಕ್ತಿಯ ಗುರುತನ್ನು ದೃಢಪಡಿಸುವ ದಾಖಲೆಯಾಗಿದ್ದು, ಜನ್ಮ ದಿನಾಂಕಕ್ಕೆ ಸಂಬಂಧಿಸಿದಂತೆ ಬೇರೆ ದಾಖಲೆಗಳು ಲಭ್ಯವಿದ್ದರೆ ಅವುಗಳ ಸಾಕ್ಷ್ಯಾಧಾರ ಮೌಲ್ಯವನ್ನು ಪರಿಶೀಲಿಸಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟಿದೆ.

UIDAI 2018ರ ಡಿಸೆಂಬರ್ 20ರಂದು ಹೊರಡಿಸಿದ್ದ ಕಚೇರಿ ಜ್ಞಾಪಕ ಪತ್ರವನ್ನು ಉಲ್ಲೇಖಿಸಿದ ನ್ಯಾಯಾಲಯ, ಆಧಾರ್ ಕಾರ್ಡ್‌ನಲ್ಲಿ ನಮೂದಿಸಿರುವ ಜನ್ಮ ದಿನಾಂಕವು ಕಾರ್ಡ್‌ದಾರರು ಸಲ್ಲಿಸಿದ ದಾಖಲೆ ಅಥವಾ ಸ್ವಯಂ ಘೋಷಣೆಯ ಆಧಾರದ ಮೇಲೆ ದಾಖಲಿಸಲಾಗುತ್ತದೆ. ಹೀಗಾಗಿ, ಆಧಾರ್ ಅನ್ನು ಗುರುತಿನ ಪುರಾವೆಯಾಗಿ ಪರಿಗಣಿಸಬಹುದೇ ಹೊರತು, ಜನ್ಮ ದಿನಾಂಕದ ಸ್ವತಂತ್ರ ಪುರಾವೆಯಾಗಿ ಪರಿಗಣಿಸಲಾಗದು ಎಂದು ತಿಳಿಸಿದೆ.ಈ ಸಂಬಂಧ ‘ಸರೋಜ್ ವರ್ಸಸ್ ಇಫ್ಕೋ-ಟೋಕಿಯೋ ಜನರಲ್ ಇನ್ಸೂರೆನ್ಸ್ ಕಂಪನಿ’ ಪ್ರಕರಣದ ತೀರ್ಪನ್ನೂ ನ್ಯಾಯಾಲಯ ಉಲ್ಲೇಖಿಸಿದೆ. ಆಧಾರ್ ಕಾರ್ಡ್ ವ್ಯಕ್ತಿಯ ಗುರುತನ್ನು ದೃಢಪಡಿಸಬಹುದಾದರೂ, ಜನ್ಮ ದಿನಾಂಕವನ್ನು ಸಾಬೀತುಪಡಿಸಲು ಅದೊಂದೇ ಸಾಕಾಗುವುದಿಲ್ಲ ಎಂಬ ಅಂಶವನ್ನು ಪುನರುಚ್ಚರಿಸಿದೆ.ಮಾಜಿ ಉದ್ಯೋಗಿ ರೋಸಮ್ಮ ಜಾಯ್ ಅವರ ಪರವಾಗಿ ಕಾರ್ಮಿಕ ನ್ಯಾಯಾಲಯ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಎಂ/ಎಸ್ ಜೆ.ಜೆ. ಎಲೆಕ್ಟ್ರಾನಿಕ್ಸ್ ಸಂಸ್ಥೆ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸುವ ಸಂದರ್ಭದಲ್ಲಿ ಹೈಕೋರ್ಟ್ ಈ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.ರೋಸಮ್ಮ ಜಾಯ್ ಅವರು 1981ರ ಡಿಸೆಂಬರ್‌ನಿಂದ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, ತಿಂಗಳಿಗೆ 10,500 ರೂ. ವೇತನ ಪಡೆಯುತ್ತಿದ್ದರು. ಪರಿಷ್ಕೃತ ಕನಿಷ್ಠ ವೇತನ ನೀಡುವಂತೆ ಒತ್ತಾಯಿಸಿದ ಹಿನ್ನೆಲೆಯಲ್ಲಿ 2017ರ ಮೇ 20ರಂದು ತಮ್ಮ ಸೇವೆಯನ್ನು ಕೊನೆಗೊಳಿಸಲಾಯಿತು ಎಂದು ಅವರು ಆರೋಪಿಸಿದ್ದರು.

ಆದರೆ, ಉದ್ಯೋಗಿಯ ವಯಸ್ಸು 58 ವರ್ಷವಾಗಿದ್ದು, ನಿವೃತ್ತಿ ವಯಸ್ಸು ತಲುಪಿದ್ದರಿಂದ ಸೇವೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಆಡಳಿತ ಮಂಡಳಿ ವಾದಿಸಿತ್ತು. ಅವರ ಆಧಾರ್ ಕಾರ್ಡ್‌ನಲ್ಲಿ ಜನ್ಮ ದಿನಾಂಕ 1959ರ ಮೇ 20 ಎಂದು ನಮೂದಾಗಿರುವುದನ್ನು ಇದಕ್ಕೆ ಆಧಾರವಾಗಿ ನೀಡಿತ್ತು. ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಯ ಬಳಿಕ ಅವರು ಸ್ವಯಂಪ್ರೇರಿತವಾಗಿ ನಿವೃತ್ತಿ ಹೊಂದಿದ್ದರು ಎಂದೂ ಸಂಸ್ಥೆ ಹೇಳಿಕೊಂಡಿತ್ತು.ಆದರೆ, ಈ ವಾದವನ್ನು ಕಾರ್ಮಿಕ ನ್ಯಾಯಾಲಯ ತಳ್ಳಿಹಾಕಿತ್ತು. 2010ರಲ್ಲಿ ನೌಕರರ ರಾಜ್ಯ ವಿಮಾ ನಿಗಮಕ್ಕೆ (ESIC) ಉದ್ಯೋಗದಾತ ಸಂಸ್ಥೆಯೇ ಸಲ್ಲಿಸಿದ್ದ ದಾಖಲೆಯಲ್ಲಿ ರೋಸಮ್ಮ ಅವರ ಜನ್ಮ ದಿನಾಂಕವನ್ನು 1960ರ ಮೇ 20 ಎಂದು ನಮೂದಿಸಿತ್ತು. ಈ ದಾಖಲೆಯನ್ನು ಪರಿಗಣಿಸಿದ ಕಾರ್ಮಿಕ ನ್ಯಾಯಾಲಯ, ಅವರ ಸೇವೆಯನ್ನು ಕಾನೂನುಬಾಹಿರವಾಗಿ ಕೊನೆಗೊಳಿಸಲಾಗಿದೆ ಎಂದು ತೀರ್ಪು ನೀಡಿತ್ತು.ಅಲ್ಲದೆ, 2017ರ ಮೇ 20ರಿಂದ ಅವರು ನಿಜವಾಗಿಯೂ ನಿವೃತ್ತಿ ವಯಸ್ಸನ್ನು ತಲುಪಬೇಕಿದ್ದ 2018ರ ಮೇ 20ರವರೆಗಿನ ಸಂಪೂರ್ಣ ಬಾಕಿ ವೇತನವನ್ನು ಪಾವತಿಸುವಂತೆ ಸಂಸ್ಥೆಗೆ ಆದೇಶಿಸಿತ್ತು.ಹೈಕೋರ್ಟ್‌ನಲ್ಲಿ ಸಂಸ್ಥೆಯು, ಉದ್ಯೋಗಿಯೇ ಆಧಾರ್ ಕಾರ್ಡ್ ಉಲ್ಲೇಖಿಸಿದ್ದರೂ ಕಾರ್ಮಿಕ ನ್ಯಾಯಾಲಯ ಅದನ್ನು ಪರಿಗಣಿಸಿಲ್ಲ ಎಂದು ಆಕ್ಷೇಪಿಸಿತ್ತು. ಆದರೆ, ಉದ್ಯೋಗಿ ನಿವೃತ್ತಿ ವಯಸ್ಸನ್ನು ತಲುಪಿದ್ದಾರೆ ಎಂಬುದನ್ನು ಸಾಬೀತುಪಡಿಸುವ ಜವಾಬ್ದಾರಿ ಉದ್ಯೋಗದಾತ ಸಂಸ್ಥೆಯದ್ದೇ ಆಗಿದೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.ಜನ್ಮ ದಿನಾಂಕವನ್ನು ದೃಢಪಡಿಸುವ ಇತರ ದಾಖಲೆಗಳನ್ನು ಸಲ್ಲಿಸದೆ ಸಂಸ್ಥೆಯು ಕೇವಲ ಆಧಾರ್ ಕಾರ್ಡ್ ಆಧರಿಸಿತ್ತು.

ಮತ್ತೊಂದೆಡೆ, ವಿವಾದ ಆರಂಭವಾಗುವುದಕ್ಕಿಂತ ಹಲವು ವರ್ಷಗಳ ಹಿಂದೆಯೇ ಸಿದ್ಧಪಡಿಸಲಾಗಿದ್ದ ESIC ದಾಖಲೆಯಲ್ಲಿ ಜನ್ಮ ದಿನಾಂಕ 1960ರ ಮೇ 20 ಎಂದು ನಮೂದಾಗಿತ್ತು. ಈ ದಾಖಲೆಯನ್ನು ಸಿದ್ಧಪಡಿಸಿದ ಅಧಿಕಾರಿಯನ್ನು ಸಂಸ್ಥೆ ಅಡ್ಡಪರೀಕ್ಷೆಗೂ ಒಳಪಡಿಸಿರಲಿಲ್ಲ. ಅಲ್ಲದೆ, ಆರಂಭದಲ್ಲಿ ಜನ್ಮ ದಿನಾಂಕ ದಾಖಲಿಸಲು ಬಳಸಿದ್ದ ಮೂಲ ದಾಖಲೆಗಳನ್ನೂ ನ್ಯಾಯಾಲಯಕ್ಕೆ ಸಲ್ಲಿಸಿರಲಿಲ್ಲ ಎಂದು ಹೈಕೋರ್ಟ್ ಗಮನಿಸಿದೆ.ಒಮ್ಮೆ ಉದ್ಯೋಗಿಯ ಜನ್ಮ ದಿನಾಂಕವನ್ನು 1960ರ ಮೇ 20 ಎಂದು ದಾಖಲಿಸಿಕೊಂಡಿದ್ದ ಸಂಸ್ಥೆ, ನಂತರ ಆಧಾರ್ ಕಾರ್ಡ್‌ನಲ್ಲಿರುವ ಬೇರೆ ದಿನಾಂಕವನ್ನು ಆಧರಿಸಿ ಒಂದು ವರ್ಷ ಮೊದಲೇ ಸೇವೆಯನ್ನು ಕೊನೆಗೊಳಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಕೈಗಾರಿಕಾ ವಿವಾದಗಳ ಕಾಯಿದೆಯು ಕಾರ್ಮಿಕರ ಹಿತಾಸಕ್ತಿಯನ್ನು ರಕ್ಷಿಸುವ ಕಲ್ಯಾಣಕಾರಿ ಶಾಸನವಾಗಿದೆ ಎಂದೂ ಪೀಠ ಹೇಳಿದೆ.ಹೀಗಾಗಿ, ಆಧಾರ್ ಕಾರ್ಡ್‌ಗಿಂತ ಹಿಂದಿನ ESIC ದಾಖಲೆಯನ್ನು ಆಧರಿಸಿ ಕಾರ್ಮಿಕ ನ್ಯಾಯಾಲಯ ನೀಡಿದ್ದ ತೀರ್ಪು ಸಾಕ್ಷ್ಯಾಧಾರಗಳಿಂದ ಕೂಡಿದೆ.

ಅದರಲ್ಲಿ ರಿಟ್ ನ್ಯಾಯವ್ಯಾಪ್ತಿಯಡಿ ಹಸ್ತಕ್ಷೇಪ ಮಾಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದ ಹೈಕೋರ್ಟ್, ಕಾರ್ಮಿಕ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದು ಜೆ.ಜೆ. ಎಲೆಕ್ಟ್ರಾನಿಕ್ಸ್ ಸಂಸ್ಥೆಯ ಅರ್ಜಿಯನ್ನು ವಜಾಗೊಳಿಸಿದೆ.

- Advertisement -

Related news

error: Content is protected !!