


ಎನ್ಡಿಎ ಸಂಸದರು ಇಂದು ದೆಹಲಿಯಲ್ಲಿ ಸಭೆ ಸೇರಿ ಮೋದಿ ಅವರನ್ನು ತಮ್ಮ ನಾಯಕನನ್ನಾಗಿ ಔಪಚಾರಿಕವಾಗಿ ಆಯ್ಕೆ ಮಾಡಲಿದ್ದು, ವಾರಾಂತ್ಯದಲ್ಲಿ ಜೂನ್ 8ರಂದು ಹೊಸ ಸರ್ಕಾರ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ. ಆದರೆ, ಅಂತಿಮ ದಿನಾಂಕವನ್ನು ಇನ್ನೂ ಬಹಿರಂಗಪಡಿಸಿಲ್ಲ. ಈಗಾಗಲೇ ರಾಷ್ಟ್ರಪತಿ ಭವನದಲ್ಲಿ ನೂತನ ಪ್ರಧಾನಮಂತ್ರಿಯ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ತಯಾರಿಗಳು ಶುರುವಾಗಿವೆ.
ಎನ್ಡಿಎ ಸಂಸದರ ನಾಯಕರಾಗಿ ಮೋದಿ ಆಯ್ಕೆಯಾದ ನಂತರ, ಮೈತ್ರಿಕೂಟದ ಹಿರಿಯ ಸದಸ್ಯರಾದ ಟಿಡಿಪಿಯ ಎನ್ ಚಂದ್ರಬಾಬು ನಾಯ್ಡು ಮತ್ತು ಜೆಡಿಯುನ ನಿತೀಶ್ ಕುಮಾರ್ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಲಿದ್ದಾರೆ. ಬಳಿಕ ನರೇಂದ್ರ ಮೋದಿಯವರು ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲು ಯಾವೆಲ್ಲ ಸಂಸದರು ಬೆಂಬಲ ನೀಡುತ್ತಾರೆಂಬ ಪಟ್ಟಿಯನ್ನು ಅವರಿಗೆ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಮ್ಮಿಶ್ರ ಸರ್ಕಾರದ ಮುಖ್ಯಸ್ಥರಾಗಿ ಸತತ ಮೂರನೇ ಅವಧಿಗೆ ಪ್ರಮಾಣವಚನ ಸ್ವೀಕರಿಸಲು ಸಿದ್ಧತೆ ನಡೆಸುತ್ತಿರುವ ಪಿಎಂ ಮೋದಿ ಬುಧವಾರ ಆಡಳಿತಾರೂಢ ಮೈತ್ರಿಕೂಟದ ಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಅವರು ಮೋದಿಯನ್ನು ಅದರ ನಾಯಕರಾಗಿ ಅವಿರೋಧವಾಗಿ ಆಯ್ಕೆ ಮಾಡಿದರು.
ಬಿಜೆಪಿಗೆ ಬಹುಮತದ ಕೊರತೆ ಎದುರಾದರೂ, ಅದು ತನ್ನ ಮಿತ್ರಪಕ್ಷಗಳ ಬೆಂಬಲದ ಆಧಾರದ ಮೇಲೆ ಸರ್ಕಾರ ರಚಿಸಬಹುದು. ಆಂಧ್ರಪ್ರದೇಶ ಮತ್ತು ಬಿಹಾರದಲ್ಲಿ ಕ್ರಮವಾಗಿ 16 ಮತ್ತು 12 ಸ್ಥಾನಗಳನ್ನು ಗೆದ್ದಿರುವ ಚಂದ್ರಬಾಬು ನಾಯ್ಡು ಅವರ ಟಿಡಿಪಿ ಮತ್ತು ನಿತೀಶ್ ಕುಮಾರ್ ಅವರ ಜೆಡಿಯು ಹಾಗೂ ಇತರ ಮೈತ್ರಿ ಪಾಲುದಾರರ ಬೆಂಬಲದೊಂದಿಗೆ ಎನ್ಡಿಎ ಬಹುಮತವನ್ನು ಪಡೆದಿದೆ.