

ನೆಲ್ಯಾಡಿ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಪೇಟೆಯಲ್ಲಿ ನ.25 ರಂದು ಮಧ್ಯಾಹ್ನ ಕೆಎಸ್ಆರ್ಟಿಸಿ ಬಸ್ ಢಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಪಾದಚಾರಿಯೋರ್ವರು ಚಿಕಿತ್ಸೆಗೆ ಸ್ಪಂದಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ನಡೆದಿದೆ.
ಮೃತಪಟ್ಟ ವ್ಯಕ್ತಿ ಶಿರಾಡಿ ಗ್ರಾಮದ ಪದಂಬಳ ನಿವಾಸಿ ಕೃಷಿಕ ಕೆ.ಎಂ.ಮತ್ತಾಯಿ ಯಾನೆ ಮತ್ತಚ್ಚನ್ (70) ಎಂದು ಗುರುತಿಸಲಾಗಿದೆ.
ಇವರು ಮನೆಯಿಂದ ಶಿರಾಡಿ ಪೇಟೆಗೆ ಪಡಿತರ ಪಡೆಯಲು ಬಂದವರು ಶಿರಾಡಿಯಲ್ಲಿ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಧರ್ಮಸ್ಥಳದಿಂದ-ಬೆಂಗಳೂರು ಕಡೆಗೆ ಹೋಗುತ್ತಿದ್ದ ಕೆಎಸ್ಆರ್ಟಿಸಿ ಬಸ್ ಇವರಿಗೆ ಢಿಕ್ಕಿಯಾಗಿದೆ. ಗಂಭೀರ ಗಾಯಗೊಂಡ ಮತ್ತಾಯಿ ಅವರನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆತಂದು ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತಾದರೂ ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಸಂಜೆ ವೇಳೆಗೆ ಅವರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಮೃತ ಕೆ.ಎಂ.ಮತ್ತಾಯಿ ಅವರು ಕೃಷಿ, ಹೈನುಗಾರಿಕೆ ಮಾಡಿ ಜೀವನ ನಡೆಸುತ್ತಿದ್ದರು. ಮೃತರು ಪತ್ನಿ ಮರಿಯಕುಟ್ಟಿ, ಪುತ್ರರಾದ ರಜಿ, ರಾಜು ಅವರನ್ನು ಅಗಲಿದ್ದಾರೆ.