Monday, September 28, 2026
spot_imgspot_img
spot_imgspot_img

ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ನಡೆದ ಕೋಟಿ-ಚೆನ್ನಯ ಜೋಡು ಕರೆ ಕಂಬಳದ ಮುಹೂರ್ತ

- Advertisement -
- Advertisement -

ಪುತ್ತೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದದೇವರಮಾರು ಗದ್ದೆಯಲ್ಲಿ ಮಾರ್ಚ್1 ಮತ್ತು 2 ರಂದು ನಡೆಯಲಿರುವ 32ನೇ ವರ್ಷದ ಕೋಟಿ ಚೆನ್ನಯ ಜೋಡುಕರೆ ಕಂಬಳಕ್ಕೆ ಸೋಮವಾರ ಕರೆ ಮುಹೂರ್ತ ನೆರವೇರಿಸಲಾಯಿತು.ಬೆಳಗ್ಗೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕೋಟಿ ಚೆನ್ನಯ ಕಂಬಳ ಸಮಿತಿಯ ವತಿಯಿಂದ ವಿಶೇಷ ಪ್ರಾರ್ಥನೆ ಸಲ್ಲಿಸಿ ಸೇವೆ ಸಲ್ಲಿಸಲಾಯಿತು. ಬಳಿಕ ದೇವರಮಾರು ಗದ್ದೆಯಲ್ಲಿರುವ ಕ್ಷೇತ್ರದ ಮೂಲ ಸಾಗ ಸಾನಿಧ್ಯದಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು. ಇದಾದ ಬಳಿಕ ಕಂಬಳದ ಕರೆಯ ಮಂಜೊಟ್ಟಿಯಲ್ಲಿ ನಿಂತು ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.

ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ತೆಂಗಿನಕಾಯಿ ಒಡೆಯುವ ಮೂಲಕ ಮುಹೂರ್ತ ನೆರವೇರಿಸಿದರು. ಕಂಬಳ ಕರೆಗೆ ಹಾಲು ಮತ್ತು ಎಳನೀರು ಸುರಿದು ಸುಮುಹೂರ್ತ ನೆರವೇರಿಸಲಾಯಿತು.ಪುತ್ತೂರಿನ ಕಂಬಳ ಈ ಬಾರಿ 32ನೇ ವರ್ಷದಲ್ಲಿ ನಡೆಯಲಿದೆ. ವಿನಯ ಕುಮಾರ್ ಸೊರಕೆಯವರು ಶಾಸಕರಾಗಿದ್ದಾಗ ಅವರ ಮುಂದಾಳುತ್ವ ಮತ್ತು ಉದ್ಯಮಿ ದಿ.ಜಯಂತ ರೈ ಅವರ ನೇತೃತ್ವದಲ್ಲಿ ಕೋಟಿ ಚೆನ್ನಯ ಜೋಡುಕರೆ ಕಂಬಳ ಆರಂಭಗೊಂಡಿತ್ತು. ಪ್ರಸ್ತುತ ಕರಾವಳಿಯ ಪ್ರತಿಷ್ಠಿತ ಕಂಬಳಗಳಲ್ಲಿ ಒಂದಾಗಿ ಹೆಸರು ಪಡೆದಿದೆ. ಇನ್ನೂರಕ್ಕಿಂತಲೂ ಅಧಿಕ ಜೋಡಿ ಕೋಣಗಳು ಭಾಗವಹಿಸುವ ನಿರೀಕ್ಷೆ ಇದೆ. ಈ ಬಾರಿ ಕಂಬಳ ನಡೆಯುವ ಸಂದರ್ಭದಲ್ಲೇ ಅದೇ ಕರೆಯಲ್ಲಿ ರಾಜ್ಯಮಟ್ಟದ ಕೆಸರುಗದ್ದೆ ಓಟ ನಡೆಸುವ ಚಿಂತನೆ ಇದೆ. ಕೆಲವೇ ದಿನಗಳಲ್ಲಿ ಇದರ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಕಂಬಳ ಸಮಿತಿಯ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ಈ ಸಂದರ್ಭದಲ್ಲಿ ಹೇಳಿದರು.24 ಗಂಟೆಯಲ್ಲಿ ಕಂಬಳ ಮುಗಿಸಬೇಕೆಂಬ ನಿಯಮ ಜಾರಿಯಲ್ಲಿದೆ. ಆದರೆ ಇತ್ತೀಚಿನ ಸಂದರ್ಭಗಳಲ್ಲಿ ಇದನ್ನು ಪಾಲಿಸಲು ಕಷ್ಟವಾಗುತ್ತಿದೆ. ಎಲ್ಲ ಕಂಬಳ ಕೂಟಗಳಲ್ಲೂ ಇದು ಅಸಾಧ್ಯವಾಗುತ್ತಿದೆ. 200 ಕ್ಕಿಂತಲೂ ಅಧಿಕ ಜೋಡಿ ಕೋಣಗಳು ಭಾಗವಹಿಸುವ ಕಡೆ ಇದು ಕಷ್ಟ ಸಾಧ್ಯವೇ ಸರಿ. ಕಂಬಳದ ಅವಧಿ ವಿಸ್ತರಣೆಯಾದಷ್ಟು ಖರ್ಚು ವೆಚ್ಚಗಳು ಕೂಡ ಅಧಿಕವಾಗುತ್ತವೆ. 24 ಗಂಟೆಯಲ್ಲಿ ಮುಗಿಸಲು ನಾವು ಶಕ್ತಿಮೀರಿ ಪ್ರಯತ್ನಿಸುತ್ತಲೇ ಇದ್ದೇವೆ ಎಂದವರು ಹೇಳಿದರು.ಪ್ರತೀ ಕಂಬಗಳಿಗೆ ತಲಾ ಐದು ಲಕ್ಷ ರೂ. ನೀಡುವುದಾಗಿ ಸರಕಾರ ಭರವಸೆ ನೀಡಿದ್ದು, ಅದರಂತೆ ಪುತ್ತೂರು ಕಂಬಳಕ್ಕೂ 5 ಲಕ್ಷ ರೂ. ಸಿಗಲಿದೆ. ವರ್ಷದಿಂದ ವರ್ಷಕ್ಕೆ ಕಂಬಳ ಆಯೋಜನೆಯ ವೆಚ್ಚ ಅಧಿಕವಾಗುತ್ತಿದೆ ಎಂದು ಹೇಳಿದ ಚಂದ್ರಹಾಸ ಶೆಟ್ಟಿ, ಪುತ್ತೂರು ದೇವಳದ ಅಭಿವೃದ್ಧಿಗೆ ತಯಾರಿಸಲಾದ ಮಾಸ್ಟರ್‌ಬ್ಲ್ಯಾನ್‌ನಲ್ಲಿ ಹಾಲಿ ಕಂಬಳದ ಕರೆಯನ್ನು ಇನ್ನಷ್ಟು ಪಕ್ಕಕ್ಕೆ ಸರಿಸುವ ಯೋಜನೆ ಇದೆ. ಈ ಬಾರಿ ಇದೇ ಕರೆಯಲ್ಲಿ ಕಂಬಳ ನಡೆಯಲಿದೆ. ಮುಂದಿನ ವರ್ಷಕ್ಕೆ ಮೊದಲು ಮಾಸ್ಟರ್‌ಬ್ಲ್ಯಾನ್ ಜಾರಿಯಾದಲ್ಲಿ ಕರೆ ಬದಿಗೆ ಸರಿಯಲಿದೆ. ಇದಕ್ಕೆ ನಮ್ಮದೇನೂ ಅಭ್ಯಂತರವಿಲ್ಲ. ಶಾಸಕ ಅಶೋಕ್ ರೈ ಅವರು ಈ ವಿಷಯ ನಮಗೆ ತಿಳಿಸಿದ್ದಾರೆ ಎಂದರು.ಕಂಬಳ ಸಮಿತಿಯ ಪ್ರಧಾನ ಕಾರ್ಯದರ್ಶಿ ದಿನೇಶ್ ಕುಲಾಲ್ ಪಿ.ವಿ., ಪ್ರಮುಖರಾದ ಸುದರ್ಶನ್ ನಾಯಕ್‌ ಕಂಪ, ವಸಂತ ಕುಮಾರ್ ರೈ, ಶಿವರಾಮ ಆಳ್ವಾ, ಕೃಷ್ಣಪ್ರಸಾದ್‌ ಆಳ್ವಾ, ಜೋಕಿಂ ಡಿಸೋಜ, ವಿನಯ ಸುವರ್ಣ, ಶರತ್ ಕೇಪುಳು, ಮುರಳೀಧರ ರೈ ಮಠಂತಬೆಟ್ಟು, ಉಮಾಶಂಕರ್ ಪಾಂಗ್ಲಾಯಿ ಮತ್ತಿತರರು ಉಪಸ್ಥಿತರಿದ್ದರು.

- Advertisement -

Related news

error: Content is protected !!