ಕಾಸರಗೋಡು: ಕೊರೊನ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಲಾಗಿದ್ದ ಕಾಸರಗೋಡು- ಮಂಗಳೂರು ಅಂತಾರಾಜ್ಯ ಬಸ್ ಸೇವೆ ಇಂದಿನಿಂದ ಆರಂಭವಾಗಿದೆ. ಎಂಟು ತಿಂಗಳ ಬಳಿಕ ಬಸ್ ಸಂಚಾರ ಆರಂಭವಾಗಿದೆ.

ಕಾಸರಗೋಡು ಮತ್ತು ಮಂಗಳೂರು ಮಧ್ಯೆ ಪ್ರತಿದಿನ ಮೂವತ್ತು ಸಾವಿರ ಮಂದಿ ಪ್ರಯಾಣಿಸುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ. ಕೇರಳ ಮತ್ತು ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ ಗಳು ನೂರಕ್ಕೂ ಹೆಚ್ಚು ಟ್ರಿಪ್ ನಡೆಸುತ್ತಿವೆ.

ಕಾಸರಗೋಡಿನ ಬಹುತೇಕ ಮಂದಿ ವೈದ್ಯಕೀಯ ಸೇವೆ ಮತ್ತು ಉನ್ನತ ಶಿಕ್ಷಣಕ್ಕಾಗಿ ಮಂಗಳೂರು ನಗರವನ್ನೇ ಆಶ್ರಯಿಸಿದ್ದಾರೆ. ಮಂಗಳೂರಿನ ಕೆ ಎಸ್ ಆರ್ ಟಿ ಸಿ ಡಿಪ್ಪೊಗೆ ಕಾಸರಗೋಡು ಮಂಗಳೂರು ಬಸ್ ಸಂಚಾರದಿಂದ ಪ್ರತಿದಿನ ಉತ್ತಮ ಆದಾಯ ಕೂಡ ದೊರೆಯುತ್ತಿದೆ.

ಇಂದು ಎರಡೂ ರಾಜ್ಯಗಳ 40 ಸರಕಾರಿ ಬಸ್‌ಗಳು ಪ್ರಯಾಣಿಕರ ಸೇವೆಯಲ್ಲಿ ತೊಡಗಿಸಿಕೊಂಡಿದ್ದು. ಮುಂದಿನ ದಿನಗಳಲ್ಲಿ ಮತ್ತಷ್ಟು ಬಸ್‌ಗಳನ್ನು ಸಂಚರಿಸಲು ಕ್ರಮ ಕೈಗೊಳ್ಳಲಾಗುವುದು. ಕೋವಿಡ್ 19 ನಿಯಮಗಳ ಪಾಲನೆಯೊಂದಿಗೆ ಬಸ್ ಸಂಚಾರ ಆರಂಭಿಸಲಾಗಿದೆ ಎಂದು ಮಂಗಳೂರು ಕೆಎಸ್ಸಾರ್ಟಿಸಿ ಅಧಿಕಾರಿ ತಿಳಿಸಿದ್ದಾರೆ.

ಲಾಕ್‌ಡೌನ್ ತೆರವಿನ ಬಳಿಕ ಹಂತ ಹಂತವಾಗಿ ಬಸ್ ಸಂಚಾರಕ್ಕೆ ಅನುಮತಿ ನೀಡಿದ ವೇಳೆ ಮಂಗಳೂರಿನಿಂದ ಹೊರಟ ಸರಕಾರಿ ಬಸ್‌ಗಳು ತಲಪಾಡಿವರೆಗೆ ಚಲಿಸುತ್ತಿತ್ತು. ಇದೀಗ ಮಂಗಳೂರಿನಿಂದ ಕಾಸರಗೋಡಿಗೆ ಮತ್ತು ಕಾಸರಗೋಡಿನಿಂದ ಮಂಗಳೂರಿಗೆ ಬಸ್‌ಗಳು ಸಂಚರಿಸುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಂತಾರಾಜ್ಯ ಬಸ್ ಸಂಚಾರದ ಬಗ್ಗೆ ಪ್ರತ್ಯೇಕ ಅನುಮತಿಯ ಅಗತ್ಯವಿಲ್ಲ ಎಂದು ಕೇರಳ ಸಾರಿಗೆ ಕಾರ್ಯದರ್ಶಿ ಸ್ಪಷ್ಟಪಡಿಸಿದ ಬಳಿಕ ಎಚ್ಚೆತ್ತುಕೊಂಡ ಕಾಸರಗೋಡು ಜಿಲ್ಲಾಡಳಿತವು ಬಸ್ ಸಂಚಾರಕ್ಕೆ ಒಲವು ತೋರಿದ ಮೇರೆಗೆ ಸಂಚಾರ ಆರಂಭಗೊಂಡಿವೆ










