ವಿಟ್ಲ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲು…

ಬಂಟ್ವಾಳ: ಇಡ್ಕಿದು ಗ್ರಾಮದಲ್ಲಿ ಮನೆಯೊಳಗೆ ನುಗ್ಗಿದ ಕಳ್ಳರು ವೃದ್ಧನ ಕುತ್ತಿಗೆಯಿಂದ ₹2.60 ಲಕ್ಷ ಮೌಲ್ಯದ ಚಿನ್ನದ ಸರ ಕಸಿದುಕೊಂಡು ಪರಾರಿಯಾಗಿರುವುದಲ್ಲದೆ, ಮತ್ತೊಂದು ಮನೆಯ ಅಂಗಳದಲ್ಲಿದ್ದ ದ್ವಿಚಕ್ರ ವಾಹನವನ್ನು ಕಳವು ಮಾಡಿರುವ ಘಟನೆ ಜು.25ರ ತಡರಾತ್ರಿ ನಡೆದಿದೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
ಇಡ್ಕಿದು ನಿವಾಸಿ ಕೆ. ಸೂರ್ಯನಾರಾಯಣ (79) ಅವರ ಮನೆಗೆ ತಡರಾತ್ರಿ ನುಗ್ಗಿದ ಅಪರಿಚಿತ ವ್ಯಕ್ತಿಗಳು, ಅವರ ಕುತ್ತಿಗೆಯಲ್ಲಿದ್ದ ಸುಮಾರು 20 ಗ್ರಾಂ ತೂಕದ ₹2.60 ಲಕ್ಷ ಮೌಲ್ಯದ ಚಿನ್ನದ ಸರವನ್ನು ಕಸಿದುಕೊಂಡು ಪರಾರಿಯಾದ ಘಟನೆ ಜು.25ರಂದು ನಡೆದಿದೆ.
ಸೂರ್ಯನಾರಾಯಣ ಅವರು ಮನೆ ಸದಸ್ಯರೊಂದಿಗೆ ಮನೆಯಲ್ಲಿ ಮಲಗಿದ್ದ ವೇಳೆ ತಡರಾತ್ರಿ ಇಬ್ಬರು ಅಪರಿಚಿತರು ಮನೆಯೊಳಗೆ ಪ್ರವೇಶಿಸಿರುವುದು ಗಮನಕ್ಕೆ ಬಂದಿದೆ. ಎದ್ದು ನೋಡಿದಾಗ ಆರೋಪಿಗಳು ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕಸಿದುಕೊಂಡು, ಮನೆಯ ಹಿಂಬಾಗಿಲಿನ ಮೂಲಕ ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಈ ಕುರಿತು ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ. 163/2026ರಂತೆ ಭಾರತೀಯ ನ್ಯಾಯ ಸಂಹಿತೆ(BNS) 2023ರ ಕಲಂ 329(4), 115(2), 309(4) ಜೊತೆಗೆ 3(5)ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮತ್ತೊಂದು ದೂರಿನಲ್ಲಿ ಇಡ್ಕಿದು ನಿವಾಸಿ ಆನಂದ ಸಪಲ್ಯ (53) ಅವರ ಮನೆಯ ಅಂಗಳದಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನ ಕಳವಾದ ಘಟನೆ ನಡೆದಿದ್ದು, ಜು.25ರಂದು ಸಂಜೆ ಮನೆಯ ಅಂಗಳದಲ್ಲಿ ನಿಲ್ಲಿಸಿದ್ದ KA-19-EY-6282 ನೋಂದಣಿ ಸಂಖ್ಯೆಯ, ಅಂದಾಜು ₹30,000 ಮೌಲ್ಯದ ದ್ವಿಚಕ್ರ ವಾಹನವು ಜು.26ರಂದು ಬೆಳಗ್ಗೆ ಕಾಣೆಯಾಗಿದೆ.
ಸುತ್ತಮುತ್ತಲಿನ ಪರಿಸರದಲ್ಲಿ ಹುಡುಕಾಟ ನಡೆಸಿದರೂ ವಾಹನ ಪತ್ತೆಯಾಗದ ಹಿನ್ನೆಲೆಯಲ್ಲಿ ಆನಂದ ಸಪಲ್ಯ ಅವರು ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ದೂರಿನ ಮೇರೆಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ. 162/2026ರಂತೆ BNS 2023ರ ಕಲಂ 303(2)ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.








