Saturday, June 28, 2025
spot_imgspot_img
spot_imgspot_img

ರಷ್ಯಾಗೆ ನುಗ್ಗಿ 40ಕ್ಕೂ ಹೆಚ್ಚು ಯುದ್ಧ ವಿಮಾನಗಳನ್ನು ನಾಶಪಡಿಸಿದ ಉಕ್ರೇನ್

- Advertisement -
- Advertisement -

ಮಾಸ್ಕೋ: ರಷ್ಯಾದ ವಾಯುನೆಲೆಗಳ ಮೇಲೆ ಪ್ರಮುಖ ಡ್ರೋನ್ ದಾಳಿ ನಡೆಸಿ, 40 ಕ್ಕೂ ಹೆಚ್ಚು ರಷ್ಯಾದ ಯುದ್ಧ ವಿಮಾನಗಳನ್ನು ಉಕ್ರೇನ್ ಭಾನುವಾರ ನಾಶಪಡಿಸಿದೆ.

ರಷ್ಯಾ ಮತ್ತು ಉಕ್ರೇನ್ ನಡುವೆ ಶಾಂತಿ ಮಾತುಕತೆ ಆರಂಭವಾಗುವ ಮೊದಲೇ ಎರಡೂ ದೇಶಗಳ ನಡುವಿನ ಹೋರಾಟ ತೀವ್ರ ಸ್ವೂರೂಪ ಪಡೆದುಕೊಂಡಿದೆ. ಈ ದಾಳಿಯು ಉಕ್ರೇನಿಯನ್ ಗುಪ್ತಚರ ಸಂಸ್ಥೆಗಳು ದೀರ್ಘಕಾಲದಿಂದ ಯೋಜಿಸಲಾದ ರಹಸ್ಯ ಕಾರ್ಯಾಚರಣೆಯಾಗಿದೆ ಎಂದು ಹೇಳಲಾಗಿದೆ.

ಈ ಕಾರ್ಯಾಚರಣೆಯನ್ನು ಸುಮಾರು ಒಂದೂವರೆ ವರ್ಷಗಳ ಕಾಲ ರಹಸ್ಯವಾಗಿ ಸಿದ್ಧಪಡಿಸಲಾಗಿತ್ತು ಮತ್ತು ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರೇ ಇದನ್ನು ಮೇಲ್ವಿಚಾರಣೆ ಮಾಡಿದ್ದರು. ಡ್ರೋನ್ ಅನ್ನು ಟ್ರಕ್‌ಗಳ ಮೂಲಕ ರಷ್ಯಾದೊಳಗೆ ಸಾಗಿಸಲಾಯಿತು ಮತ್ತು ಅಲ್ಲಿಂದ ಉಡಾಯಿಸಲಾಯಿತು ಎಂದು ಉಕ್ರೇನಿಯನ್ ಭದ್ರತಾ ಸಂಸ್ಥೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಉಕ್ರೇನ್‌ನಿಂದ 4,000 ಕಿಲೋಮೀಟರ್ ದೂರದಲ್ಲಿರುವ ರಷ್ಯಾದ ಇರ್ಕುಟ್ಸ್ಕ್ ಪ್ರದೇಶದ ಬೆಲಾಯಾ ವಾಯುನೆಲೆಯನ್ನು ಗುರಿಯಾಗಿಸಿಕೊಂಡು ಈ ಡ್ರೋನ್ ದಾಳಿ ನಡೆಸಲಾಗಿದೆ. ಇದು ರಷ್ಯಾದ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಒಂದಾಗಿದೆ, ಇಲ್ಲಿಂದ ಯುದ್ಧ ವಿಮಾನಗಳು ಹಾರುತ್ತವೆ. ಇನ್ನು ಉಕ್ರೇನ್‌ನ ಈ ದಾಳಿಯು ಇದುವರೆಗಿನ ಅತ್ಯಂತ ದೊಡ್ಡ ದಾಳಿ ಎನ್ನಲಾಗಿದೆ.

ಆಪರೇಷನ್ ಸ್ಪೈಡರ್ ವೆಬ್ ಅಡಿಯಲ್ಲಿ, ರಷ್ಯಾದ 4 ವಿಭಿನ್ನ ವಾಯುನೆಲೆಗಳಲ್ಲಿ ನಿಲ್ಲಿಸಲಾಗಿದ್ದ, 40 ಮಿಲಿಟರಿ ವಿಮಾನಗಳನ್ನು ನಾಶಪಡಿಸಲಾಗಿದೆ. ಈ ದಾಳಿಯನ್ನು ಉಕ್ರೇನ್‌ನ ಭದ್ರತಾ ಸೇವಾ ಸಂಸ್ಥೆ ನಡೆಸಿದೆ ಎಂದು ಆರೋಪಿಸಲಾಗಿದೆ. ಇವುಗಳನ್ನು ಎಫ್‌ಪಿವಿ ಡ್ರೋನ್‌ಗಳ ಮೂಲಕ ನಡೆಸಲಾಯಿತು. ಈ ದಾಳಿಯಿಂದಾಗಿ ಮಾಸ್ಕೋಗೆ ಶತಕೋಟಿ ಡಾಲರ್ ನಷ್ಟವಾಗಿದೆ. ಈ ದಾಳಿಯಿಂದ ಚೇತರಿಸಿಕೊಳ್ಳಲು ಬಹಳ ಸಮಯ ತೆಗೆದುಕೊಳ್ಳುತ್ತದೆ ಎಂದು ಹೇಳಲಾಗಿದೆ.

ಉಕ್ರೇನ್‌ನ ಡ್ರೋನ್ ದಾಳಿಯ ಕೆಲವೇ ಗಂಟೆಗಳಲ್ಲಿ, ರಷ್ಯಾ ಕ್ಷಿಪಣಿಗಳು ಮತ್ತು ಡ್ರೋನ್‌ಗಳ ಮೂಲಕ ಉಕ್ರೇನ್ ಮೇಲೆ ದಾಳಿ ಮಾಡುವ ಮೂಲಕ ಪ್ರತೀಕಾರ ತೀರಿಸಿಕೊಂಡಿದೆ. ರಷ್ಯಾ ಇದುವರೆಗೆ 472 ಡ್ರೋನ್‌ಗಳು ಮತ್ತು 7 ಕ್ಷಿಪಣಿಗಳನ್ನು ಉಕ್ರೇನ್ ಮೇಲೆ ಹಾರಿಸಿದೆ. ತರಬೇತಿ ಕೇಂದ್ರದ ಮೇಲೆ ನಡೆದ ಕ್ಷಿಪಣಿ ದಾಳಿಯಲ್ಲಿ ಕನಿಷ್ಠ 12 ಸೈನಿಕರು ಸಾವನ್ನಪ್ಪಿದ್ದು, 60 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಉಕ್ರೇನಿಯನ್ ಸೇನೆ ಹೇಳಿದೆ.

- Advertisement -

Related news

error: Content is protected !!