


ವಿಟ್ಲ ವಲಯ ಬಂಟರ ಸಂಘದ ನೂತನ ಪದಾಧಿಕಾರಿಗಳ ಪದಪ್ರದಾನ ಹಾಗೂ “ಕೆಸರ್‌ದ ಕಂಡೊಡು ಬಂಟೆರೆನ ಪಂತೊಲು” ಕಾರ್ಯಕ್ರಮವು ಪೆರುವಾಯಿ ಗೋಪಾಲಕೃಷ್ಣ ದೇವಸ್ಥಾನದ ಎದುರಿನ ಯೋಗೀಶ್ ಆಳ್ವರವರ ಕೆಸರಿನ ಗದ್ದೆಯಲ್ಲಿ ದಿನಾಂಕ13.07.2025ನೇ ರವಿವಾರದಂದು ಸಂಪನ್ನಗೊಂಡಿತು.
ಬೆಳಿಗ್ಗೆ 9:30ಕ್ಕೆ ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕರವರ ಅಧ್ಯಕ್ಷತೆಯಲ್ಲಿ ಸಮಾರಂಭವು ಉದ್ಘಾಟನೆಗೊಂಡಿತು. ರಾಮಯ್ಯ ಶೆಟ್ಟಿ ದಂಪತಿಗಳು ದೀಪ ಬೆಳಗುವುದರೊಂದಿಗೆ ಮತ್ತು ಅತಿಥಿಗಳು ತೆಂಗಿನ ಹೂವು ಅರಳಿಸುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ನಾರಾಯಣ ರೈ ಅಡ್ವಾಯಿ, ಪಾತನಿಗೆ ರಘುರಾಮ ರೈ, ರಾಜೇಂದ್ರ ರೈ ಪೆರುವಾಯಿಗುತ್ತು ಅತಿಥಿಗಳಾಗಿ ಉಪಸ್ಥಿತರಿದ್ದರು.
ಅತಿಥಿಗಳ ಸಮಕ್ಷಮದಲ್ಲಿ ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ದಾಖಲೆ ಪತ್ರಗಳ ಹಾಗು ಜವಾಬ್ದಾರಿಗಳ ಹಸ್ತಾಂತರದೊಂದಿಗೆ ಪದಪ್ರದಾನ ಮಾಡಲಾಯಿತು. ಬಳಿಕ ಪೆರುವಾಯಿ ಗ್ರಾಮ ಸಮಿತಿಯವರು ಏರ್ಪಡಿಸಿದ್ದ ವಿವಿಧ ತಿಂಡಿ ತಿನಿಸುಗಳನ್ನು ಸವಿದು ಕೆಸರುಗದ್ದೆಯಲ್ಲಿ ವಿವಿಧ ಆಟೋಟ ಸ್ಪರ್ಧೆಗಳನ್ನು ನಡೆಸಲಾಯಿತು.
ಮಧ್ಯಾಹ್ನ 1:30 ಕ್ಕೆ ಶ್ರೀ ಗುರುದೇವಾನಂದ ಸ್ವಾಮೀಜಿ ಗುರುದೇವ ದತ್ತ ಸಂಸ್ಥಾನಂ ಒಡಿಯೂರು ಇವರ ದಿವ್ಯ ಉಪಸ್ಥಿತಿಯೊಂದಿಗೆ ಸಮಾರೋಪ ಸಮಾರಂಭ ನಡೆಯಿತು. ವಿಟ್ಲ ವಲಯ ಬಂಟರ ಸಂಘದ ನೂತನ ಅಧ್ಯಕ್ಷ ರಾಜೀವ ಭಂಡಾರಿ ಕುಂಡಕೋಳಿ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಬಂಟ್ವಾಳ ತಾಲೂಕು ಬಂಟರ ಸಂಘದ ಕಾರ್ಯದರ್ಶಿಗಳಾದ ಜಗನ್ನಾಥ ಚೌಟ ಮಾಣಿ-ಬದಿಗುಡ್ಡೆ, ವಕೀಲ ರತ್ನಾಕರ ಶೆಟ್ಟಿ ಪೆರುವಾಯಿ – ಕುಂಬಳಕೋಡಿ, ಮಾರಪ್ಪ ಶೆಟ್ಟಿ ಬೈಲುಗುತ್ತು, ಪ್ರಭಾಕರ ಶೆಟ್ಟಿ ಕಲೈತಿಮಾರು, ಗೌರವಾಧ್ಯಕ್ಷ ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ, ಬಂಟರ ಮಾತೃ ಸಂಘದ ನಿರ್ದೇಶಕ ಭಾಸ್ಕರ ಶೆಟ್ಟಿ ವಿಟ್ಲ, ವಲಯ ಬಂಟರ ಸಂಘದ ಕಾರ್ಯದರ್ಶಿ ವೇಣುಗೋಪಾಲ ಶೆಟ್ಟಿ ಮರುವಾಳ, ವಲಯ ಮಹಿಳಾ ಬಂಟರ ಸಂಘದ ಅಧ್ಯಕ್ಷೆ ಶ್ರೀಮತಿ ಶಿವಾನಿ ಬಿ.ಶೆಟ್ಟಿ ಕೊಲ್ಯ, ವಲಯ ಯುವ ಬಂಟರ ಸಂಘದ ಅಧ್ಯಕ್ಷ ರಂಜಿತ್ ಶೆಟ್ಟಿ ಗುಬ್ಯ, ಹಾಗು ವಿಟ್ಲ ವಲಯದ ಹನ್ನೊಂದು ಗ್ರಾಮಗಳ ಬಂಟರ ಸಂಘದ ಅಧ್ಯಕ್ಷರು ಅತಿಥಿಗಳಾಗಿ ಉಪಸ್ಥಿತರಿದ್ದರು.

ಆಶೀರ್ವಚನದ ಮಾತುಗಳನ್ನಾಡಿ ಶ್ರೀಗಳು “ಇಂತಹ ಸಂಘಟನೆಗಳಿಂದ ಸಮಾಜಮುಖಿ ಕಾರ್ಯಗಳಾಗಲಿ”ಎಂದು ನುಡಿದರು. ಕಾರ್ಯಕ್ರಮದಲ್ಲಿ ಗೌರವಾನ್ವಿತ ಕರ್ನಲ್ ಜಗಜೀವನ ಭಂಡಾರಿ ಇವರನ್ನು ಗೌರವಿಸಿ, ಸನ್ಮಾನಿಸಲಾಯಿತು. ವಿಟ್ಲ ವಲಯ ಬಂಟರ ಸಂಘದ ಜೊತೆ ಕಾರ್ಯದರ್ಶಿ ಪ್ರವೀಣ್ ಶೆಟ್ಟಿ ಮೈರ ಸನ್ಮಾನ ಪತ್ರ ವಾಚಿಸಿದರು.ಅಲ್ಲದೇ ವಿವಾಹವಾಗಿ 50 ಸಂವತ್ಸರಗಳನ್ನು ಪೂರೈಸಿದ ಪೆರುವಾಯಿ ಗ್ರಾಮ ಬಂಟ ಸಮುದಾಯದ ಆರು ದಂಪತಿಗಳನ್ನು ಸನ್ಮಾನಿಸಲಾಯಿತು.

ಬಳಿಕ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ವಿಟ್ಲ ವಲಯ ಬಂಟರ ಸಂಘದ ಕ್ರೀಡಾ ಕಾರ್ಯದರ್ಶಿ ರಾಜೇಂದ್ರ ರೈ ಅಳಿಕೆ ಬಹುಮಾನಿತರ ಪಟ್ಟಿ ವಾಚಿಸಿದರು. ಯಶಿಕಾ ಶೆಟ್ಟಿ ಕೆಳಗಿನ ಮನೆ ಪೆರುವಾಯಿ ಪ್ರಾರ್ಥಿಸಿ, ವಿಟ್ಲ ವಲಯ ಬಂಟರ ಸಂಘದ ಕಾರ್ಯದರ್ಶಿ ವೇಣುಗೋಪಾಲ ಶೆಟ್ಟಿ ಮರುವಾಳ ಸ್ವಾಗತಿಸಿದರು. ಪೆರುವಾಯಿ ಗ್ರಾಮಸಮಿತಿ ಅಧ್ಯಕ್ಷ ಮನೋಹರ ಶೆಟ್ಟಿ ಪೇರಡ್ಕ ವಂದಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಸುರೇಶ್ ಶೆಟ್ಟಿ ಪಡಿಬಾಗಿಲು ಕಾರ್ಯಕ್ರಮ ನಿರೂಪಿಸಿದರು. ಪೆರುವಾಯಿ ಬಂಟರ ಸಂಘ ಗ್ರಾಮ ಸಮಿತಿಯವರು ವಿಶೇಷ ಊಟೋಪಚಾರದ ವ್ಯವಸ್ಥೆ ಏರ್ಪಡಿಸಿದ್ದರು.








