


ಕಾರವಾರ: ಕೇಣಿ ಬಂದರು ಯೋಜನೆ ಕೈಬಿಡುವಂತೆ ಕೋರಿ ಉತ್ತರ ಕನ್ನಡ ಜಿಲ್ಲಾ ಹರಿಕಂತ್ರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಜಿಲ್ಲಾಧಿಕಾರಿ ಮುಖಾಂತರ ಪ್ರಧಾನಮಂತ್ರಿಗೆ ಮತ್ತು ರಾಜ್ಯದ ಮುಖ್ಯಮಂತ್ರಿಗೆ ಹಾಗೂ ಉಪಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಕೇಣಿಯಲ್ಲಿ ಬೃಹತ್ ವಾಣಿಜ್ಯ ಬಂದರು ನಿರ್ಮಾಣ ಕಾಮಗಾರಿ ಮಾಡಲು ಮುಂದಾಗಿದ್ದು ಇದನ್ನ ಉತ್ತರ ಕನ್ನಡ ಜಿಲ್ಲಾ ಹರಿಕಂತ್ರ ಕ್ಷೇಮಾಭಿವೃದ್ಧಿ ಸಂಘ ತೀವ್ರವಾಗಿ ವಿರೋಧಿಸುತ್ತಿದೆ. ಕಾರವಾರ ಅಂಕೋಲಾ ಭಾಗದ ಸಾಕಷ್ಟು ಮೀನುಗಾರರು ಮೀನುಗಾರಿಕೆಯನ್ನ ನಂಬಿಕೊಂಡು ಜೀವನ ಸಾಗಿಸುತ್ತಿದ್ದು ಈ ಹಿಂದೆ ನೌಕಾನೆಲೆ ನಿರ್ಮಾಣವಾಗುವಾಗ ಸಾವಿರಾರು ಎಕರೆ ಜಮೀನನ್ನ, ಕಡಲ ತೀರವನ್ನ ವಶಕ್ಕೆ ಪಡೆದ ನಂತರ ಮೀನುಗಾರರಿಗೆ ಮೀನುಗಾರಿಕೆ ಮಾಡಲು ಕಡಲ ತೀರ ಇಲ್ಲದ ರೀತಿಯಲ್ಲಿ ಆಗಿದೆ.
ಕಾರವಾರ ತಾಲೂಕಿನ ಬಿಣಗಾ, ಅರಗಾ, ಶಂಕ್ರುಬಾಗ್. ಅಲಿಗದ್ದ ಚಂಡಿಯ , ಕೊಡಾರ ಸೇರಿದಂತೆ ಹತ್ತಾರು ಊರುಗಳ ಕಡಲ ತೀರ ನೌಕಾನೆಲೆಯ ವಶಕ್ಕೆ ಹೋಗಿದ್ದು ಮೀನುಗಾರರು ತಮ್ಮ ವೃತ್ತಿ ಮಾಡಲು ಜಾಗವನ್ನೇ ಕಳೆದುಕೊಂಡಂತಾಗಿತ್ತು. ಇದೀಗ ಕೇಣಿ ಭಾಗದಲ್ಲಿ ಬೃಹತ್ ಬಂದರನ್ನ ನಿರ್ಮಾಣ ಮಾಡಲು ಮುಂದಾಗಿದ್ದು ಜೆ.ಎಸ್.ಡಬ್ಲ್ಯೂ ಕಂಪನಿ ಈಗಾಗಲೇ ಸರ್ವೆ ಸಹ ಮಾಡಿದ್ದು ಸಾರ್ವಜನಿಕ ಅಹವಾಲು ಸ್ವೀಕಾರ ದಿನಾಂಕವನ್ನ ಸಹ ನಿಗಧಿ ಮಾಡಲಾಗಿದೆ. ಸರ್ಕಾರ ಬಡ ಮೀನುಗಾರರ ಪರ ಇದೆಯೋ ಅಥವಾ ಬಂಡವಾಳಶಾಹಿಗಳ ಪರ ಇದೆಯೋ ಎನ್ನುವುದು ತಿಳಿಯುತ್ತಿಲ್ಲ. ಕೇಣಿಯಲ್ಲಿ ಮೀನುಗಾರಿಕೆಯನ್ನೇ ನಂಬಿಕೊಂಡು ನೂರಾರು ಜನರು ಇದ್ದು ಬಂದರು ನಿರ್ಮಾಣ ಆದರೆ ಕೇಣಿ ಮಾತ್ರವಲ್ಲ ಸುತ್ತಮುತ್ತಲಿನ ಹಲವಾರು ಗ್ರಾಮದ ಮೀನುಗಾರರಿಗೆ ಮೀನುಗಾರಿಕೆ ಮಾಡಲು ಸಮಸ್ಯೆ ಆಗಲಿದೆ.
ಕೇಣಿಯಲ್ಲಿ ಬಂದರು ಆದರೆ ಉದ್ಯೋಗ ಸೃಷ್ಟಿಯಾಗಲಿದೆ, ಅಭಿವೃದ್ದಿಯಾಗಲಿದೆ ಎನ್ನುತ್ತಿದ್ದಾರೆ. ಬೃಹತ್ ಯೋಜನೆಗಳಾದಾದಗ ಯಾವ ರೀತಿ ಉದ್ಯೋಗ ಸೃಷ್ಟಿಯಾಗಿದೆ, ಸ್ಥಳೀಯರಿಗೆ ಎಷ್ಟು ಉದ್ಯೋಗ ಸಿಗಲಿದೆ, ಅಭಿವೃದ್ದಿ ಯಾವ ಮಟ್ಟದಲ್ಲಿ ಆಗಿದೆ ಎನ್ನುವುದು ಜಿಲ್ಲೆಯ ಜನರಿಗೆ ತಿಳಿದಿದ್ದು ಕೇಣಿ ಬಂದರು ನಿರ್ಮಾಣ ಆದರೆ ಅಂಕೋಲಾ ಕಾರವಾರ ಭಾಗದಲ್ಲಿ ಮೀನುಗಾರರಿಗೆ ಮಾತ್ರವಲ್ಲ ಇತರೇ ವರ್ಗದ ಜನರು ಸಮಸ್ಯೆ ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಲಿದೆ.
ಜಿಲ್ಲೆಯ ಜನರು ಪದೇ ಪದೇ ಯೋಜನೆಗಳಿಗೆ ಭೂಮಿ ನೀಡುತ್ತಾ ನಿರಾಶ್ರಿತರು ಆಗುತ್ತಲೇ ಇದ್ದಾರೆ. ಈಗಾಗಲೇ ಹೊನ್ನಾವರ ಹಾಗೂ ಕಾರವಾರದಲ್ಲಿ ಬಂದರು ಮಾಡಲು ಮುಂದಾಗಿದ್ದು, ಕೇಣಿಯಲ್ಲೂ ಬೃಹತ್ ಬಂದರು ನಿರ್ಮಾಣ ಮಾಡಿದರೆ ಇಡೀ ಕಡಲ ತೀರಗಳೇ ಬಂದರಿಗೆ ಹೋದರೆ ಮೀನುಗಾರರು ಎಲ್ಲಿ ಹೋಗಬೇಕು. ಕರಾವಳಿಯ ಜನರು ಮೀನು ಆಹಾರವನ್ನ ಅವಲಂಬಿತರಾಗಿದ್ದು ಮೀನುಗಾರರು ತಮ್ಮ ವೃತ್ತಿಯಲ್ಲಿ ಬೆಳೆಯಬೇಕು ಹೊರತು, ಬಂದರು ಆಗಿ ವೃತ್ತಿಯನ್ನ ಕಳೆದುಕೊಳ್ಳಬಾರದು. ಸರ್ಕಾರ ಈ ಬಗ್ಗೆ ಗಮನಹರಿಸಿ ಕೂಡಲೇ ಕೇಣಿ ಬಂದರು ಯೋಜನೆಯನ್ನ ಕೈ ಬಿಡಲು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೇ ಮುಂದಿನ ದಿನದಲ್ಲಿ ಸಂಘಟನೆ ವತಿಯಿಂದ ನಿರಂತರ ಹೋರಾಟ ಹಾಗೂ ಕಾನೂನು ಹೋರಾಟ ಮಾಡಲಾಗುವುದು ಎಂದು ತಿಳಿಸಲಾಯಿತು. ಜಿಲ್ಲಾಧಿಕಾರಿ ಮುಖಾಂತರ ಪ್ರಧಾನಮಂತ್ರಿಗೆ ಮತ್ತು ರಾಜ್ಯದ ಮುಖ್ಯಮಂತ್ರಿಗೆ ಹಾಗೂ ಉಪಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು .
ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ದಿಲೀಪ್ ಜಿ ಅರ್ಗೇಕರ್, ಜಿಲ್ಲಾಧ್ಯಕ್ಷ ರೋಷನ್ ಹರಿಕಂತ್ರ, ಜಿಲ್ಲಾ ಉಪಾಧ್ಯಕ್ಷ ಭರತ್ ಕಾರ್ವಿ, ಸುನಿಲ್ ತಾಂಡೇಲ್, ಪ್ರವೀಣ್ ತಾಂಡೇಲ್, ಕಾರ್ಯದರ್ಶಿ ಕೃಷ್ಣ ತಾಂಡೇಲ್, ನಂದೀಶ್ ಮಜಾಳಿಕರ್, ಮೋಹನ್ ಉಳ್ಳೇಕರ್, ಕೃಷ್ಣ ಕಾಮು ಹರಿಕಂತ್ರ, ವಿನಾಯಕ ಚಂದ್ರಕಾಂತ ಹರಿಕಂತ್ರ ಉಪಸ್ಥಿತರಿದ್ದರು.








