Wednesday, July 22, 2026
spot_imgspot_img
spot_imgspot_img

ಬುರ್ಖಾ ಎಳೆದ ಪ್ರಕರಣ: ನಿತೀಶ್ ಕುಮಾರ್ ವಿರುದ್ಧ ಶ್ರೀನಗರದಲ್ಲಿ ಎಫ್‌ಐಆರ್‌ಗೆ ಒತ್ತಾಯ- ಪಿಡಿಪಿ ನಾಯಕಿ ಇಲ್ತಿಜಾ ಮುಫ್ರಿ ದೂರು ದಾಖಲು

- Advertisement -
- Advertisement -

ಶ್ರೀನಗರ: ಪಾಟ್ನಾದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮವೊಂದರಲ್ಲಿ ಮುಸ್ಲಿಂ ಮಹಿಳಾ ವೈದ್ಯೆಯ ನಿಖಾಬ್ (ಬುರ್ಖಾ) ಎಳೆದಿರುವುದನ್ನು ತೋರಿಸುವ ವೈರಲ್ ವೀಡಿಯೊ ಸಂಬಂಧ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ (ಪಿಡಿಪಿ) ನಾಯಕಿ ಇಲ್ತಿಜಾ ಮುಫ್ರಿ ಶುಕ್ರವಾರ ಶ್ರೀನಗರದ ಕೋಥಿಬಾಗ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಇಲ್ತಿಜಾ ಮುಫ್ರಿ, ಈ ಕೃತ್ಯವು ಅತ್ಯಂತ ಅವಮಾನಕರವಾಗಿದ್ದು, ಮಹಿಳೆಯರು ಹಾಗೂ ಧಾರ್ಮಿಕ ಅಲ್ಪಸಂಖ್ಯಾತರ ಬಗ್ಗೆ ಅಸಂವೇದನಶೀಲ ಮತ್ತು ಸ್ತ್ರೀದ್ವೇಷದ ಮನೋಭಾವವನ್ನು ತೋರಿಸುತ್ತದೆ ಎಂದು ಆರೋಪಿಸಿದರು. “ಸಾಂವಿಧಾನಿಕ ಹುದ್ದೆ ಹೊಂದಿರುವ ವ್ಯಕ್ತಿಯಿಂದ ಈ ರೀತಿಯ ವರ್ತನೆ ಸಂಪೂರ್ಣವಾಗಿ ಅಸ್ವೀಕಾರಾರ್ಹ. ಇಂತಹ ಘಟನೆಗಳನ್ನು ನಿರ್ಲಕ್ಷಿಸುವುದಕ್ಕೂ ಸಾಮಾನ್ಯೀಕರಿಸುವುದಕ್ಕೂ ಸಾಧ್ಯವಿಲ್ಲ” ಎಂದು ಅವರು ಹೇಳಿದರು.

ಬುರ್ಖಾ ಮತ್ತು ನಿಖಾಬ್‌ಗೆ ಸಂಬಂಧಿಸಿದ ವಿವಾದಗಳು ಹೊಸದಲ್ಲ ಎಂದು ಹೇಳಿದ ಇಲ್ತಿಜಾ, “ಇವು ಪ್ರತ್ಯೇಕ ಘಟನೆಗಳಲ್ಲ. ಮುಸ್ಲಿಂ ಮಹಿಳೆಯರ ಘನತೆ ಮತ್ತು ಸ್ವಾತಂತ್ರ್ಯವನ್ನು ಪದೇಪದೇ ಪ್ರಶ್ನಿಸುವ ಆಳವಾದ ಸಮಸ್ಯೆಯನ್ನು ಇವು ಪ್ರತಿಬಿಂಬಿಸುತ್ತವೆ. ಇದನ್ನು ನಾವು ದೃಢವಾಗಿ ಎದುರಿಸಬೇಕಾಗಿದೆ” ಎಂದು ಅಭಿಪ್ರಾಯಪಟ್ಟರು.

ವೀಡಿಯೊ ವೈರಲ್ ಆದ ಬಳಿಕ ಜಮ್ಮು ಮತ್ತು ಕಾಶ್ಮೀರದ ರಾಜಕೀಯ ನಾಯಕತ್ವ ತೋರಿದ ಆರಂಭಿಕ ಮೌನವನ್ನು ಕೂಡ ಅವರು ಟೀಕಿಸಿದರು. “ಈ ವಿಷಯ ಹೊರಬಂದಾಗ ತಕ್ಷಣದ ಖಂಡನೆ ಕಾಣಿಸಲಿಲ್ಲ. ನಂತರ ಬಂದ ಕೆಲವು ಹೇಳಿಕೆಗಳು ಖಂಡನೆಗಿಂತ ಸಮರ್ಥನೆಯಂತೆ ಕಂಡವು. ಅದು ಇನ್ನಷ್ಟು ಕಳವಳಕಾರಿ” ಎಂದರು.

ಈ ಘಟನೆ ದೇಶಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದು, ಸಾಮಾಜಿಕ ಕಾರ್ಯಕರ್ತರು ಮತ್ತು ವಿರೋಧ ಪಕ್ಷದ ನಾಯಕರು ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ. ಮಹಿಳೆಯರ ಘನತೆ ಮತ್ತು ಧಾರ್ಮಿಕ ಸ್ವಾತಂತ್ರ್ಯದ ಮೇಲೆ ನಡೆದ ದಾಳಿಯೆಂದು ಹಲವರು ಈ ಘಟನೆಯನ್ನು ಖಂಡಿಸಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಬಿಹಾರ ಮುಖ್ಯಮಂತ್ರಿಯ ನಡವಳಿಕೆಗೆ ತೀವ್ರ ಟೀಕೆ ವ್ಯಕ್ತವಾಗಿದೆ.

- Advertisement -

Related news

error: Content is protected !!