





ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮೀ ಯೋಜನೆಯ ಫೆಬ್ರವರಿ ಹಾಗೂ ಮಾರ್ಚ್ ತಿಂಗಳ ಹಣ ನಾಪತ್ತೆಯಾಗಿದೆ ಎಂಬ ಆರೋಪಗಳನ್ನು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ. ಯಾವುದೇ ಹಣ ದುರ್ಬಳಕೆ ಆಗಿಲ್ಲ; ಎಲ್ಲಾ ಮೊತ್ತವೂ ಶೀಘ್ರದಲ್ಲೇ ಫಲಾನುಭವಿಗಳ ಖಾತೆಗೆ ಜಮೆಯಾಗಲಿದೆ ಎಂದು ಅವರು ಭರವಸೆ ನೀಡಿದರು.
ಗುರುವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವರು, “ಒಂದು ವೇಳೆ 5 ಸಾವಿರ ಕೋಟಿ ರೂಪಾಯಿ ಹಣ ನಾಪತ್ತೆಯಾಗಿದ್ದರೆ ಆದಾಯ ತೆರಿಗೆ ಇಲಾಖೆ ಸುಮ್ಮನೆ ಕೂತಿರುತ್ತಿತ್ತೇ?” ಎಂದು ಪ್ರಶ್ನಿಸಿದರು. ಈ ಕುರಿತು ಅನಾವಶ್ಯಕ ಗೊಂದಲ ಸೃಷ್ಟಿಸಲಾಗುತ್ತಿದ್ದು, ಶೀಘ್ರದಲ್ಲೇ ಹಣಕಾಸು ಇಲಾಖೆ ಹಾಗೂ ಸಂಬಂಧಪಟ್ಟ ಸಚಿವರು ಸ್ಪಷ್ಟನೆ ನೀಡಲಿದ್ದಾರೆ ಎಂದರು.
ಕಾಂಗ್ರೆಸ್ ಪಕ್ಷದೊಳಗಿನ ಆಂತರಿಕ ಭಿನ್ನಮತಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, “ಆಂತರಿಕ ವಿಚಾರಗಳನ್ನು ಪಕ್ಷವೇ ಬಗೆಹರಿಸಿಕೊಳ್ಳಲಿ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಆದರೆ ಆ ಹೇಳಿಕೆ ನಮಗಲ್ಲ, ಕ್ಯಾಪ್ಟನ್ ಮತ್ತು ವೈಸ್ ಕ್ಯಾಪ್ಟನ್‌ಗಳಿಗೆ ಹೈಕಮಾಂಡ್ ನೀಡಿದ ಸಂದೇಶ” ಎಂದು ಮಾರ್ಮಿಕವಾಗಿ ಹೇಳಿದರು.
ಇನ್ನು ಜನವರಿ 25ರಂದು ನಡೆಯಲಿರುವ ಅಹಿಂದ ಸಮಾವೇಶ ಕುರಿತು ಮಾತನಾಡಿದ ಸಚಿವರು, “ಅಹಿಂದ ನಮ್ಮ ಶಕ್ತಿ. ಅದನ್ನು ಆಚರಿಸಲು ನಮಗೆ ಯಾರ ಪ್ರಮಾಣಪತ್ರವೂ ಅಗತ್ಯವಿಲ್ಲ. ಸಮಾವೇಶವನ್ನು ಯಾರೇ ಆಯೋಜಿಸಿದರೂ ನಮಗೆ ಯಾವುದೇ ಆಕ್ಷೇಪವಿಲ್ಲ” ಎಂದು ಸ್ಪಷ್ಟಪಡಿಸಿದರು








