ಚಿಕ್ಕಮಗಳೂರು: ಯುವತಿಯೊಬ್ಬಳಿಗೆ ಸಾಮಾಜಿಕ ಜಾಲತಾಣದ ಮೂಲಕ ಹುಟ್ಟುಹಬ್ಬದ ಶುಭಾಶಯ ಕೋರಿ ಮೆಸೇಜ್ ಮಾಡಿದ ಕಾರಣಕ್ಕೆ ಯುವಕನೋರ್ವನನ್ನು ಚೂರಿಯಿಂದ ಇರಿದು ಕೊಲೆಗೈದ ಘಟನೆ ತರೀಕೆರೆ ತಾಲೂಕಿನ ಅತ್ತಿಗನಾಳು ಗ್ರಾಮದಲ್ಲಿ ಬುಧವಾರ ರಾತ್ರಿ ನಡೆದಿದೆ.

ಉಡೇವಾ ಮೂಲದ ಮಂಜುನಾಥ್ (28) ಕೊಲೆಯಾದ ಯುವಕ. ಯುವತಿಯೊಂದಿಗೆ ವಿವಾಹ ನಿಶ್ಚಿತಾರ್ಥವಾಗಿದ್ದ ಯುವಕ ವೇಣು ಮತ್ತು ಕೊಲೆ ಆರೋಪಿಗಳು ಎಂದು ತಿಳಿದು ಬಂದಿದೆ.
ವೇಣುವಿನ ಜೊತೆ ವಿವಾಹ ನಿಶ್ಚಿತಾರ್ಥ ಆಗಿದ್ದ ಯುವತಿಗೆ ಮಂಜುನಾಥ್ ಹುಟ್ಟುಹಬ್ಬದ ಶುಭಾಶಯ ಕೋರಿ ಸಾಮಾಜಿಕ ಜಾಲತಾಣದಲ್ಲಿ ಮೆಸೇಜ್ ಮಾಡಿದ್ದನು. ಈ ವಿಚಾರವಾಗಿ ವೇಣು ಮತ್ತು ಮಂಜುನಾಥ್ ಮಧ್ಯೆ ಅತ್ತಿಗನಾಳು ಗ್ರಾಮದಲ್ಲಿ ಬುಧವಾರ ಗಲಾಟೆ ನಡೆದಿದೆ. ಇದು ಅತಿರೇಕಕ್ಕೆ ತಿರುಗಿದ್ದು, ವೇಣು ಹಾಗೂ ಸ್ನೇಹಿತರು ಮಂಜುನಾಥ್ ನಿಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಗಂಭೀರವಾಗಿ ಗಾಯಗೊಂಡಿದ್ದ ಮಂಜುನಾಥ್ ಅವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ. ಈ ಬಗ್ಗೆ ತರೀಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.








