Thursday, July 23, 2026
spot_imgspot_img
spot_imgspot_img

ವಿಜಯನಗರ: ಚಿನ್ನದ ಬೆಲೆ ಇಳಿಕೆಗಾಗಿ ದೇವಿಗೆ ಭಕ್ತನ ವಿಭಿನ್ನ ಹರಕೆ!

- Advertisement -
- Advertisement -

ವಿಜಯನಗರ: ಚಿನ್ನದ ಬೆಲೆ ಗಗನಕ್ಕೇರುತ್ತಿರುವ ಹಿನ್ನೆಲೆಯಲ್ಲಿ, ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಚಿಮ್ನಳ್ಳಿ ಗ್ರಾಮದ ಪ್ರಸಿದ್ಧ ಚಿಮ್ನಳ್ಳಿ ದುರ್ಗಮ್ಮ ದೇವಿಯ ಜಾತ್ರೆಯಲ್ಲಿ ಭಕ್ತನೊಬ್ಬ ವಿಭಿನ್ನವಾದ ಹರಕೆ ಸಲ್ಲಿಸಿದ್ದಾರೆ.

ಭಕ್ತ ಕೆ. ನಾಗರಾಜ ಉಲವತ್ತಿ ಅವರು, “ಚಿನ್ನದ ದರ ಇಳಿಯಲಿ, ಬಡವರು ಹಾಗೂ ಸಾಮಾನ್ಯ ಜನರೂ ಚಿನ್ನ ಖರೀದಿಸಲು ಸಾಧ್ಯವಾಗಲಿ” ಎಂಬ ಅಪರೂಪದ ಆಶಯದೊಂದಿಗೆ ದೇವಿಯ ಮುಂದೆ ಹರಕೆ ಸಲ್ಲಿಸಿದರು. ತಾಯಿಯ ರಥೋತ್ಸವದ ವೇಳೆ, ನಾಗರಾಜ ಉಲವತ್ತಿ ಅವರು ಬಾಳೆ ಹಣ್ಣಿನ ಮೇಲೆ “ಚಿನ್ನದ ದರ ಇಳಿಯಲಿ, ಮುನಿದ ಚಿನ್ನ ಒಲಿಯಲಿ” ಎಂದು ಬರೆದು ಭಕ್ತಿಪೂರ್ವಕವಾಗಿ ದೇವಿಗೆ ಅರ್ಪಿಸಿದರು. ಈ ವಿಭಿನ್ನ ಭಕ್ತಿ ಪ್ರದರ್ಶನ ಜಾತ್ರೆಯಲ್ಲಿ ಪಾಲ್ಗೊಂಡಿದ್ದ ಸಾವಿರಾರು ಭಕ್ತರ ಗಮನ ಸೆಳೆಯಿತು.

ನಾಗರಾಜ ಅವರ ಈ ವಿಶಿಷ್ಟ ಹರಕೆ ವಿಶೇಷ ಚರ್ಚೆಗೆ ಕಾರಣವಾಯಿತು. ದೇವರ ಕೃಪೆಯಿಂದ ಚಿನ್ನದ ಬೆಲೆ ಇಳಿದು, ಸಾಮಾನ್ಯ ಜನರಿಗೂ ಚಿನ್ನದ ಕನಸು ನನಸಾಗಲಿ ಎಂಬ ಹಾರೈಕೆಯನ್ನು ಅನೇಕ ಭಕ್ತರು ವ್ಯಕ್ತಪಡಿಸಿದರು. ದೇಶಾದ್ಯಂತ ಚಿನ್ನದ ಬೆಲೆ ಏರಿಕೆಯಿಂದ ಸಾಮಾನ್ಯ ಜನರಲ್ಲಿ ಆತಂಕ ಹೆಚ್ಚಿರುವ ಈ ಸಂದರ್ಭದಲ್ಲಿ, ಭಕ್ತಿಪೂರ್ಣವಾಗಿ ಸಲ್ಲಿಸಿದ ಹರಕೆ ಸಾಮಾಜಿಕವಾಗಿ ಕೂಡ ಗಮನ ಸೆಳೆದಿದೆ.

- Advertisement -

Related news

error: Content is protected !!