ಮಂಗಳೂರು: ಕಾಲುಗಳಿಗೆ ಸರಪಳಿಯಿಂದ ಬಿಗಿದು, ಪದ್ಮಾಸನ ಭಂಗಿಯಲ್ಲಿ ಶಿಕ್ಷಕರೊಬ್ಬರು ಸಮುದ್ರದಲ್ಲಿ 1 ಕಿ.ಮೀ ದೂರ ಈಜಿ ದಾಖಲೆ ಬರೆದಿರುವ ಘಟನೆ ಮಂಗಳೂರಿನ ತಣ್ಣೀರುಬಾವಿ ಬೀಚ್ನಲ್ಲಿ ನಡೆದಿದೆ.ನಿಂತ ನೀರಲ್ಲಿ, ನದಿಯಲ್ಲಿ, ಸ್ವಿಮ್ಮಿಂಗ್ ಪೂಲ್ನಲ್ಲಿ ಈಜುವುದು ತುಸು ಸುಲಭ. ಆದರೆ ಕಡಲಲ್ಲಿ ಆಳೆತ್ತರದ ಅಲೆಗಳ ವಿರುದ್ಧ ಈಜುವ ಮೂಲಕ ಶಿಕ್ಷಕ ನಾಗರಾಜ್ ಖಾರ್ವಿ ಸಾಧನೆ ಮಾಡಿದ್ದಾರೆ.

ಕಡಲನಗರಿ ಮಂಗಳೂರಿನ ತಣ್ಣೀರುಬಾವಿ ಬೀಚ್, ನಾಗರಾಜ್ ಅವರ ಸಾಧನೆಗೆ ವೇದಿಕೆಯಾಗಿದೆ. ನೂರಾರು ಜನರ ಸಮ್ಮುಖದಲ್ಲಿ ಸಮುದ್ರದ ಅಲೆಗಳ ಮಧ್ಯೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ನಾಗರಾಜ್ ಖಾರ್ವಿ ವಿಶಿಷ್ಠ ಸಾಹಸದ ಜೊತೆಗೆ ಯೋಗಾಸನದ ವೈಶಿಷ್ಟ್ಯತೆಯನ್ನೂ ಸಾರಿ ಹೇಳಿದ್ದಾರೆ.

ಅಂದಹಾಗೇ ನಾಗರಾಜ್ ಖಾರ್ವಿ ಅವರು ಬಂಟ್ವಾಳದ ಸರ್ಕಾರಿ ಶಾಲಾ ಶಿಕ್ಷಕರಾಗಿದ್ದಾರೆ. ಬ್ರೆಸ್ಟ್ ಸ್ಟ್ರೋಕ್ ಮೂಲಕ ಈಜುತ್ತಾ ಒಂದು ಕಿಲೋ ಮೀಟರ್ ದೂರದ ಗುರಿಯನ್ನ ತಲುಪಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದಾರೆ. ಸಮುದ್ರದ ಅಬ್ಬರ ಅಲೆಗಳ ಹೊಡೆತದ ಮಧ್ಯೆಯೂ ನಾಗರಾಜ್ ಖಾರ್ವಿ 25 ನಿಮಿಷ 16 ಸೆಕೆಂಡುಗಳಲ್ಲಿ ಗುರಿ ತಲುಪಿ ನೆರೆದಿದ್ದವರನ್ನ ಹುಬ್ಬೇರಿಸುವಂತೆ ಮಾಡಿದ್ದರು.ಈ ಹಿಂದೆಯೂ ನಾಗರಾಜ್ ಖಾರ್ವಿ ಹಲವು ಸಾಧನೆಗಳನ್ನು ಮಾಡಿದ್ದಾರೆ. ತನ್ನ ಗುರುಗಳಾದ ಬಿಕೆ ನಾಯ್ಕ್ ಅವರ ಸಹಾಯದಿಂದ ಲಿಮ್ಕಾ ದಾಖಲೆಯ ಪುಟ ಸೇರಿದ್ದಾರೆ.

ಇದೇ ಸ್ಫೂರ್ತಿಯಿಂದ ಯೋಗಾಸನಕ್ಕೂ ಅಗತ್ಯ ಪ್ರೋತ್ಸಾಹ ಸಿಗಬೇಕೆನ್ನುವ ನಿಟ್ಟಿನಲ್ಲಿ ಪದ್ಮಾಸನದ ಮೂಲಕ ತಣ್ಣೀರುಬಾವಿ ಬೀಚ್ನಲ್ಲಿ ವಿಶಿಷ್ಟ ಸಾಧನೆಗೈದಿದ್ದಾರೆ. ಈ ವೇಳೆ ಅಗತ್ಯ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಇದೆಲ್ಲಕ್ಕೂ ಮಿಗಿಲಾಗಿ ನಾಗರಾಜ್ ಖಾರ್ವಿ ಅವರ ಗುರುಗಳೇ ಮುಂದೆ ನಿಂತು ಶಿಷ್ಯನ ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದು ವಿಶೇಷವಾಗಿತ್ತು.ನಾಗರಾಜ್ ಖಾರ್ವಿ ವೃತ್ತಿಯಲ್ಲಿ ಶಿಕ್ಷಕರಾದರೂ ಈಜುಗಾರಿಕೆಯಲ್ಲಿ ಪರಿಣಿತರು. ಈಜಿನ ಜೊತೆಗೆ ಪದ್ಮಾಸನ ಭಂಗಿ ಮೂಲಕ ಯೋಗಾಸನವನ್ನು ಪ್ರಚುರಪಡಿಸುವ ಕೆಲಸ ಮಾಡಿದ್ದಾರೆ.









