ರಾಮಕುಂಜ: ಸುಮಾರು 20 ದಿನದ ಹಿಂದೆ ಕಡಬ ತಾಲೂಕಿನ ರಾಮಕುಂಜ ಗ್ರಾಮದ ಪಾದೆ ಎಂಬಲ್ಲಿ ಮಗ ಗುಂಡೇಟಿನಿಂದ ಮೃತಪಟ್ಟು ತಂದೆ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಪ್ರಕರಣದಲ್ಲಿ ಚಾಕು ಇರಿತದಿಂದ ತಂದೆ ಗಾಯಗೊಂಡಿರುವುದಾಗಿ ಪ್ರಾಥಮಿಕ ವರದಿಯಾಗಿತ್ತು. ಆದರೆ ಇದೀಗ ತಂದೆಯೂ ಬಂದೂಕು ಗುಂಡಿನಿಂದಲೇ ಗಾಯಗೊಂಡಿರುವುದಾಗಿ ವೈದ್ಯರು ದೃಢೀಕರಣ ನೀಡಿರುತ್ತಾರೆ ಎಂದು ಪೊಲೀಸ್ ಇಲಾಖೆ ಸ್ಪಷ್ಟಪಡಿಸಿದೆ.

ಜ.24ರಂದು ಸಂಜೆ ರಾಮಕುಂಜ ಗ್ರಾಮದ ಪಾದೆ ನಿವಾಸಿ ವಸಂತ ಅಮೀನ್ ಹಾಗೂ ಜಯಶ್ರೀ ದಂಪತಿ ಪುತ್ರ ಮೋಕ್ಷ’ (17ವ.) ರಾಮಕುಂಜದ ಪಾದೆ ಮನೆಯಲ್ಲಿ ಗುಂಡೇಟಿನಿಂದ ಮೃತಪಟ್ಟ ಸ್ಥಿತಿಯಲ್ಲಿ ಹಾಗೂ ಅವರ ತಂದೆ ವಸಂತ ಅಮೀನ್ ಗಾಯಗೊಂಡ ಸ್ಥಿತಿಯಲ್ಲಿದ್ದರು. ಘಟನೆ ವೇಳೆ ಈ ಮನೆಯಲ್ಲಿ ತಂದೆ, ಮಗ ಮಾತ್ರ ಇದ್ದರು. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ್ದ ವಸಂತ ಅಮೀನ್ ಅವರ ಪರಿಚಯದ ಕೆಮ್ಮಾರ ನಿವಾಸಿ ಪದ್ಮನಾಭ ಶೆಟ್ಟಿ ಅವರು ಸ್ಥಳಕ್ಕೆ ಬಂದು ಪೊಲೀಸರಿಗೆ ಮಾಹಿತಿ ನೀಡಿ, ಪೊಲೀಸರು ಸ್ಥಳಕ್ಕೆ ಬಂದ ಬಳಿಕ ಗಾಯಗೊಂಡಿದ್ದ ವಸಂತ ಅಮೀನ್ ಅವರನ್ನು ಸ್ಥಳೀಯರ ಸಹಕಾರದೊಂದಿಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನನಗೆ ಚೂರಿಯಿಂದ ಇರಿದು ಕೋವಿಯಿಂದ ಗುಂಡುಹಾರಿಸಿಕೊಂಡು ಮಗ ಮೃತಪಟ್ಟಿರುವುದಾಗಿ ಗಾಯಾಳು ವಸಂತ ಅಮೀನ್ ಅವರು ಸ್ಥಳಕ್ಕೆ ಬಂದ ಸ್ನೇಹಿತರಿಗೆ ಹಾಗೂ ಪೊಲೀಸರಿಗೆ ಇದೇ ಮಾಹಿತಿ ನೀಡಿದ್ದರು.
ಅದರಂತೆ ಪೊಲೀಸರು ಕುಟುಂಬ ಕಲಹದ ಹಿನ್ನೆಲೆಯಲ್ಲಿ ಬಾಲಕ ಮೋಕ್ಷ ತನ್ನ ಮನೆಯೊಳಗೆ ತಂದೆಯಾದ ವಸಂತ್ ಅಮೀನ್ರವರ ಹೊಟ್ಟೆ ಭಾಗಕ್ಕೆ ಚಾಕುವಿನಿಂದ ಇರಿದು, ತಂದೆಯ ಹೆಸರಿನಲ್ಲಿ ಪರವಾನಗಿ ಹೊಂದಿರುವ ಬಂದೂಕಿನಿಂದ ತನ್ನ ಮುಖಕ್ಕೆ ಗುಂಡು ಹಾರಿಸಿಕೊಂಡು ಸ್ಥಳದಲ್ಲೇ ಮೃತಪಟ್ಟಿರುತ್ತಾನೆ ಎಂದು ಪ್ರಕರಣ ದಾಖಲಿಸಿಕೊಂಡು ಪ್ರಾಥಮಿಕ ಮಾಹಿತಿ ನೀಡಿದ್ದರು.
ಈ ಘಟನೆ ಕುರಿತು ಇದೀಗ ಪೊಲೀಸರು ಪ್ರಕಟಣೆ ನೀಡಿದ್ದು, ಬಿ.ಪದ್ಮನಾಭ ಶೆಟ್ಟಿ ಎಂಬವರು ನೀಡಿದ ದೂರಿನಂತೆ ಜ.24ರಂದು ಕಡಬ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕುಟುಂಬ ಕಲಹದ ಹಿನ್ನೆಲೆಯಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕ ತನ್ನ ತಂದೆಯ ಹೊಟ್ಟೆ ಭಾಗಕ್ಕೆ ಚಾಕುವಿನಿಂದ ಇರಿದಿದ್ದು ಘಟನೆ ನಂತರ ಆರೋಪಿಯು ತನ್ನ ತಂದೆಯ ಹೆಸರಿನಲ್ಲಿ ಪರವಾನಗಿ ಹೊಂದಿರುವ ಎಸ್ಬಿಬಿಎಲ್ ಬಂದೂಕಿನಿಂದ ತನ್ನ ಮುಖಕ್ಕೆ ಗುಂಡು ಹಾರಿಸಿಕೊಂಡು ಸ್ಥಳದಲ್ಲೇ ಮೃತಪಟ್ಟಿರುತ್ತಾನೆ. ಈ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಅ.ಕ್ರ: 10/2026. ಕಲಂ: 109 ಬಿಎನ್ಎಸ್-2023.ಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗಿದ್ದು, ಗಾಯಾಳು ತಂದೆಗೆ ಆದ ಗಾಯವು ಚಾಕುವಿನಿಂದ ಆಗಿರದೆ ಬಂದೂಕಿನ ಗುಂಡಿನಿಂದ ಆಗಿರುವುದು ಎಂದು ವೈದ್ಯರು ದೃಢೀಕರಣ ನೀಡಿದ್ದಾರೆ. ಎಫ್ಎಸ್ಎಲ್ ಬೆಂಗಳೂರು ಇವರಿಂದ ವರದಿ ಬರಲು ಬಾಕಿ ಇರುವುದರಿಂದ ಪ್ರಕರಣವನ್ನು ವರದಿ ಬಂದ ಬಳಿಕ ಅಂತಿಮಗೊಳಿಸಲಾಗುವುದು ಎಂದು ಪ್ರಕಟಣೆ ನೀಡಿದ್ದಾರೆ.








