ಮಂಗಳೂರು, ಫೆಬ್ರವರಿ 21: ಮಂಗಳೂರು ನಗರ ಪೊಲೀಸ್ ವ್ಯಾಪ್ತಿಯಲ್ಲಿ ಅಂತರ್ ರಾಜ್ಯ ಗಾಂಜಾ ಮಾರಾಟ ಜಾಲವನ್ನು ಪತ್ತೆಹಚ್ಚಿರುವ Mangaluru City Police ಅಧಿಕಾರಿಗಳು 22 ಕೆ.ಜಿ 250 ಗ್ರಾಂ ತೂಕದ ಅಕ್ರಮ ಗಾಂಜಾವನ್ನು ವಶಪಡಿಸಿಕೊಂಡು ನಾಲ್ವರನ್ನು ಬಂಧಿಸಿದ್ದಾರೆ.ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ಜೋಕಟ್ಟೆ ಕ್ರಾಸ್ ರೈಲ್ವೇ ಬ್ರಿಡ್ಜ್ ಹತ್ತಿರ ಹೊರ ರಾಜ್ಯದಿಂದ ಗಾಂಜಾವನ್ನು ತಂದು ಮಾರಾಟ ಮಾಡಲು ಯತ್ನಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಉತ್ತರ ಉಪ ವಿಭಾಗದ ಎ.ಸಿ.ಪಿ ಹಾಗೂ ತಂಡದ ಅಧಿಕಾರಿಗಳು, ಪಣಂಬೂರು ಠಾಣೆಯ ಪಿ.ಎಸ್.ಐ ಮತ್ತು ಸಿಬ್ಬಂದಿಗಳ ನೇತೃತ್ವದಲ್ಲಿ ದಾಳಿ ನಡೆಸಿದರು.

ದಾಳಿಯಲ್ಲಿಕರಣ್ ಬಾಬು ರಾಂ ಜಾದವ್ (27), ಸಮೀರ್ ಶಾ (19) ಮಧ್ಯಪ್ರದೇಶ,ಎಂ.ಹೆಚ್. ಮಯ್ಯದಿ (48) ಉಡುಪಿ, ಇಬ್ರಾಹಿಂ ಕಲೀಲ್ (47) ಕುದ್ರೋಳಿ, ಮಂಗಳೂರು ಇವರನ್ನು ಬಂಧಿಸಲಾಯಿತು
.ಆರೋಪಿತರ ವಶದಿಂದ 22 ಕೆ.ಜಿ 250 ಗ್ರಾಂ ಗಾಂಜಾ (ಅಂದಾಜು ಮೌಲ್ಯ ರೂ. 11,12,500), 6 ಮೊಬೈಲ್ ಫೋನ್‌ಗಳು (ಅಂದಾಜು ರೂ. 18,000) ಹಾಗೂ ಗಾಂಜಾ ಸಾಗಿಸಲು ಬಳಸಿದ ಎರಡು ಸ್ಕೂಟರ್‌ಗಳು (ಅಂದಾಜು ರೂ. 1,00,000) ವಶಪಡಿಸಿಕೊಳ್ಳಲಾಗಿದೆ. ಒಟ್ಟು ಸ್ವಾಧೀನ ಮೌಲ್ಯ ರೂ. 12,30,500 ಆಗಿದೆ.ಪೊಲೀಸರ ತನಿಖೆ ಪ್ರಕಾರ, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದಿಂದ ಗಾಂಜಾವನ್ನು ಪಡೆದು ಉಡುಪಿ ಜಿಲ್ಲೆಯ ಹೆಜಮಾಡಿ ಕೋಡಿಯ ಎಂ.ಹೆಚ್. ಮಯ್ಯದಿ ಹಾಗೂ ಮಂಗಳೂರಿನ ಇಬ್ರಾಹಿಂ ಕಲೀಲ್ ಅವರಿಗೆ ನೀಡಲಾಗುತ್ತಿತ್ತು. ಬಳಿಕ ಅವರು ಉಡುಪಿ, ಮಲ್ಪೆ, ಕಾರ್ಕಳ, ಮುಲ್ಕಿ, ಸುರತ್ಕಲ್, ಪಣಂಬೂರು ಸೇರಿದಂತೆ ಮಂಗಳೂರು ನಗರದ ಪ್ರಮುಖ ಪ್ರದೇಶಗಳಲ್ಲಿ ಗಾಂಜಾವನ್ನು ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ. ಈ ಹಿಂದೆ ಕೂಡ ಹಲವು ಬಾರಿ ಗಾಂಜಾವನ್ನು ಅಕ್ರಮವಾಗಿ ತಂದು ಉಡುಪಿ ಜಿಲ್ಲೆ ಹಾಗೂ ಮಂಗಳೂರು ನಗರದಲ್ಲಿ ಮಾರಾಟ ಮಾಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.ಈ ಸಂಬಂಧ ಪಣಂಬೂರು ಪೊಲೀಸ್ ಠಾಣೆಯಲ್ಲಿ ಅ.ಕ್ರ. 21/2026 ಕಲಂ 8(C), 20(b)(ii)(C) ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಳ್ಳಲಾಗಿದೆ.








