


“ ನಮ್ಮ ಗ್ರಾಮ ನಮಗೆ ಹೆಮ್ಮೆ” ಉದ್ಯೋಗ, ಶಿಕ್ಷಣ, ವಿವಾಹ, ವಹಿವಾಟು ಎಂದು ಪರವೂರಿಗೆ ಹೋದರೂ ಎದ್ದು ಬಿದ್ದು ನಡೆದಾಡಿದ ಊರನ್ನು ಮರೆಯಲುಂಟೆ ? ಹಳೆ ಯಂತ್ರಗಳಿಗೆ ಬಾಗಗಳು ಸಿಗುವುದಿಲ್ಲ. ಹಾಗೆ ಹಳೆ ನೆನಪುಗಳ ಹಂಚಲು ಹಳೆ ಮನಸುಗಳೆ ಬೇಕಾದೀತು. ಹೊಸಬರಿಗೆ ವಿವರಿಸಿದರೂ ಇಷ್ಟವಾಗೊದು ಕಷ್ಟವೇ. ನಮ್ಮೂರು ಅಳಿಕೆ ಗ್ರಾಮದ ಎರುಂಬು. ರಾಜರ ಆಳ್ವಿಕೆ ನೆನಪಿಸುವುದಾದರೆ ವಿಟ್ಲ (ಇಷ್ಟಿಕಾಪುರ) ಸೀಮೆಯ ಅರಸೊತ್ತಿಗೆಯ ವ್ಯಾಪ್ತಿ. ಎರಡೂರು ಎನ್ನೋದರಲ್ಲಿ ಒಂದೂರು. ಎರುಂಬು ಶ್ರೀ ಶಂಕರನಾರಾಯಣ ಇಲ್ಲಿಗೆ ಗ್ರಾಮದೊಡೆಯ. ಹಳೆಯ ಅರಮನೆ, ಮಾಯಿಲರ ಕೋಟೆ, ನೆಲ್ಲಿಮಾರು ಗದ್ದೆ, ಶ್ರೀ ವಿಷ್ಣುಮಂಗಲ ದೇವಸ್ಥಾನ, ವಿಷ್ಣುಮಂಗಲ ಅನುದಾನಿತ ಶಾಲೆ, ಮಂಟಮೆ, ಬನ, ಸಾನ, ಗುತ್ತು, ಅಳಿಕೆ ವಿದ್ಯಾ ಸಂಸ್ಥೆ, ನೆಕ್ಕಿತಪುಣಿ ಸುಬ್ರಮಣ್ಯ ದೇವಸ್ಥಾನ, ಮಡಿಯಾಲ ಗೋಪಾಲಕೃಷ್ಣ ದೇವಸ್ಥಾನ, ಹೀಗೆ ಹತ್ತು ಹಲವು ಶ್ರದ್ದಾ ಕೇಂದ್ರಗಳು. ಅಳಿಕೆ ಗ್ರಾಮ ಒಳ್ಳೆಯ ವಿದ್ಯಾಸಂಸ್ಥೆ, ಅಡಳಿತ ಕಚೇರಿ, ಆಸ್ಪತ್ರೆ, ರಸ್ತೆಗಳನ್ನು ಪ್ರಸ್ತುತ ಹೊಂದಿದೆ. ದಕ್ಷಿಣದಿಂದ ಬಿಲ್ಲಂಪದವು ನೆಗಳಗುಳಿ ಬೆಟ್ಟದ ಸಾಲು, ಉತ್ತರದಿಂದ ವಿದ್ಯಾಗಿರಿ ಬೆಟ್ಟ, ಪೂರ್ವಕ್ಕೆ ಕೇಪು ಅಮ್ಮನವರ ಸನ್ನಿಧಾನ , ಪಶ್ಚಿಮಕ್ಕೆ ನೆಕ್ಕಿತಪುಣಿ ಸುಬ್ರಮಣ್ಯ ದೇವರು ರಕ್ಷಣೆ ನೀಡಿರುವ ಸುಮಾರು 1500 ಮನೆಗಳಿರುವ ವ್ಯಾಪ್ತಿ. ಇಲ್ಲಿರುವ ಪ್ರತಿಯೊಂದು ಸ್ವಾಭಾವಿಕ ಸ್ಥಳಗಳು ಪ್ರೇಕ್ಷಣೀಯ ಸ್ಥಳಗಳೆ, ಆದರೆ ಪೋಷಕರಿಲ್ಲದೆ ಮಾಯವಾಗಿದೆ. ಜಾನಪದ, ಕೃಷಿ, ಸಾಂಸ್ಕೃತಿಕ ಸೊಗಡು ಮಾಸಿ ಹೋಗಿವೆಯೆಂಬ ದುಖದೊಡನೆ ಸಂಬಂಧಗಳು ನಗುವಿನಿಂದ ಯಾಂತ್ರೀಕೃತ ಮನಗಳಿಗೆ ವಾಲಿವೆ ಎಂಬ ಖೇದವಿದೆ. ಉತ್ತಮ ಕೃಷಿ ಮತ್ತು ನಂಬಿಕೆಯನ್ನು ಆಧುನಿಕ ಶಿಕ್ಷಣ ಮೂಲೆಯಾಗಿಸಿದಂದಿನಿಂದ ಜನರಿಗೆ ನಮ್ಮೂರಿನ ಮೇಲಿನ ಕಾಳಜಿ ಕಮ್ಮಿಯಾಗಿದೆ ಎಂದರೂ ತಪ್ಪಿಲ್ಲ. ಅಂದು ಬದುಕಿನಲ್ಲಿ ಬಡತನವಿತ್ತು ಆದರೆ ಶ್ರೀಮಂತ ಮನಸಿತ್ತು. ಇಂದು ಶ್ರೀಮಂತಿಕೆ ಇದೆ ಆದರೆ ಮನಸ್ಸು ಬಡವಾಗಿದೆ. ಇರಲಿ ಊರವರು ಪರವೂರಲ್ಲಿ, ಪರವೂರವರು ನಮ್ಮೂರಲ್ಲಿ. ಹೇಗಿದೆ ? ನಲವತ್ತು ವರ್ಷದ ಅಜಗಜಾಂತರ ವ್ಯತ್ಯಾಸ ನೋಡಿ. ಅವರಿಗಾಗಿ ಸ್ವಲ್ಪ ಸ್ಥಳ ಇತಿಹಾಸ.
ಪಾಂಡವರ ಪಳೆಯುಳಿಕೆಗಳoತೆ ಕಾಣುವ, ಒಲೆಯಾಕಾರ, ದೇವಳಗುಳಿ ಬೆಟ್ಟದ ಮೇಲಿನ ವಿಶಾಲ ಪ್ರದೇಶವಿದೆ. ಅದು ನಂತರ ಪಿಲಿಪಂಜರ ಈಗ ಕಲ್ಲಿನ ಕೊರೆಯಾಗಿದೆ. ನೈಸರ್ಗಿಕ ವಿನಾಶವೆಂದರೆ ಇದೇ ಅಲ್ಲವೇ? ಮಾಯಿಲರ ಕೋಟೆ, ಕಲ್ಲಿನಿಂದ ನಿರ್ಮಿಸಲ್ಪಟ್ಟ ಅರಮನೆಯ ಕಾಂಪೌಂಡು ನಂತಹ ಆಕಾರ ಹಿಂದೆ ಕಾಣಿಸುತಿತ್ತು…ಪ್ರಸ್ತುತ ಮಾಯವಾಗಿ ಮರ ಗಿಡಗಳು, ತೋಟವಾಗಿ, ಜೆಸಿಬಿ ಕೋಟೆಗೆ ಏರಿದೆ.ನೆಲ್ಲಿಮಾರು ಗದ್ದೆ ಇಂದು ಕೃಷಿ ಕಾಣದೆ ಅತ್ತ ತೋಟವು ಅಲ್ಲ ಇತ್ತ ಪೊದೆಯ ಅಲ್ಲದೆ ಪಾಲು ಬಿದ್ದಿವೆ.
400 ಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳಿದ್ದ ಗ್ರಾಮದ ಎರುಂಬು ಶಾಲೆ ಮುಚ್ಚಿದೆ.
ಗ್ರಾಮದ ಅಲ್ಲಲ್ಲಿ ವಿಶಾಲ ಕೃಷಿ ಭೂಮಿಯಿದ್ದು, ಕಂಬಳ, ಪೂಕರೆ, ಬಾಳೆ ಹಾಕುವ ಗದ್ದೆಗಳಲ್ಲಿ ತೋಟ, ಮನೆಗಳಾಗಿವೆ.
ಎಷ್ಟು ಜಾನಪದ ಕ್ರೀಡೆ, ದೈವಾರಾಧನೆ, ಗದ್ದೆ ಕೃಷಿಯಲ್ಲಿ ಬರುತಿದ್ದ ಜಾನಪದ ಉರಲ್ನ ಸ್ವರ, ಸಂದಿ, ಪಾಡ್ದನಗಳು, ಸಂಜೆ ದೂರದಿಂದ ಹಸುಗಳನ್ನು ಕರೆಯುತಿದ್ದ ಅಂಬಾ ಧ್ವನಿ, ಪುದ್ವರ್, ತೆನೆ ಹಬ್ಬ, ದೀಪಾವಳಿ(ಪರ್ಬ), ಗೋಪೂಜೆ, ನೆರೆಹೊರೆಯವರ ಸ್ನೇಹ ಕೂಟಗಳು, ತುಳು ತಿಂಗಳಲ್ಲಿ ಬರುತಿದ್ದ ಕನ್ಯಾಪು, ಮಾದಿರ, ಸೋನಂದ ಜೋಗಿ, ಆಟಿ ಕಳಂಜ, ಇದ್ದ ಈ ಗ್ರಾಮದಲ್ಲಿ ಎಲ್ಲವನ್ನೂ ಆಧುನಿಕ ಸವಲತ್ತು ನುಂಗಿ ಹಾಕಿದೆ. ಈಗಿನ ಇಲ್ಲಿನ ಮಕ್ಕಳಿಗೆ ಇವೆಲ್ಲದರ ಪರಿಚಯವಿಲ್ಲ. ಕೆಲವೊಂದು ಕಥೆಗಳಷ್ಟೆ ನೆನಪಿದೆ,ಹಿಂದೆ ಮಾಯಿಲರ ಕೋಟೆಯ ಮಾಯಿಲರಿಗು ಅರಮನೆಯ ಅರಸ ಸಂಸಾರಕ್ಕೂ ವಿವಾಹ ಸಂಬoಧವೇರ್ಪಟ್ಟು, ಮೇಲು ಕೀಳು ತಾರತಮ್ಯ ಬಂದು ಎರುಂಬು ನೆಲ್ಲಿಮಾರು ಗದ್ದೆಯಲ್ಲಿ ವಿವಾಹ ಚಪ್ಪರ ಮಾಡಿದ ಅರಸು ಮನೆತನ, ಗದ್ದೆಯ ತುಂಬಾ ನೆಲ್ಲಿಕಾಯಿ ಹರಡಿ ಮೇಲೆ ಚಾಪೆ ಹಾಕಿ ದಿಬ್ಬಣಿಗರಾಗಿ ಬಂದ ಮಾಯಿಲರನ್ನು ಚಪ್ಪರದಲ್ಲಿ ಕೊಚ್ಚಿ ಹಾಕಿ ಕೊಂದರಂತೆ, ನೆಲ್ಲಿಕಾಯಿಯ ಮೇಲೆ ಓಡಲಾರದೆ ಮಾಯಿಲರ ಅವನತಿಯಾಯಿತಲ್ಲದೆ, ಬಸುರಿ ಮಾಯಿಲ ಕುಟುಂಬದ ಹೆಂಗಸೊಬ್ಬಳು ನೆಲ್ಲಿಮಾರು ಗದ್ದೆಯ ಪಶ್ಚಿಮ ಭಾಗದ ನಡುವಿನ ರಂದ್ರದ (ಸೂಂಬು) ಮೂಲಕ ಹೋದಳಂತೆ. ಇಂದಿಗೂ ಆ ರಂದ್ರವನ್ನು ಪೂರ್ಣವಾಗಿ ಕಟ್ಟಲಾಗುವುದಿಲ್ಲ. ಹಾಗೆ ಗದ್ದೆಯಲ್ಲಿ ಉಳುಮೆ ಮುಕ್ತಾಯದ ದಿನ ಗದ್ದೆಯನ್ನು ಸೇಡಿ ಹಾಕಿ ಸಿಂಗರಿಸಿ ಕಂಡದ ಕೋರಿ ದೈವನರ್ತನ ನಡೆದು ಬಾಳೆ ಹಾಕುವ ಕ್ರಮವಿತ್ತು. ಆ ದಿನ ಗದ್ದೆಯ ನೀರು ರಕ್ತದಂತೆ ಗೋಚರವಾಗುತಿತ್ತು ಎನ್ನುತ್ತಾರೆ ಹಿರಿಯರು. ಈ ಕಥೆ ಈ ಗ್ರಾಮದ ಇತಿಹಾಸಕ್ಕೆ ಪೂರಕವೇ.ಡೊಂಬ ಅರಸು ಮನೆತನ ಕುಂಬಳೆಯಿಂದ ಬಂದು ಎರುಂಬಿನಲ್ಲಿ ವಾಸವಿದ್ದ ಕಾಲಕ್ಕೆ ಶ್ರೀ ಶಂಕರನಾರಾಯಣ ಹಾಗೂ ಶ್ರೀ ವಿಷ್ಣು ಮಂಗಲ ದೇವಳದ ನಿರ್ಮಾಣ ವಾಯಿತು ಹಾಗೂ ಶ್ರೀ ಶಂಕರನಾರಾಯಣ ದೇವರಿಗೆ ಮಂಡಲ ಪೂಜೆ, ಶ್ರೀ ವಿಷ್ಣುಮಂಗಲ ದೇವರಿಗೆ ವಸಂತ ಪೂಜೆ ವಿಶೇಷ ವೆಂಬುದು ದಕ್ಷಿಣಕನ್ನಡ ಇತಿಹಾಸ ಪುಸ್ತಕಗಳಲ್ಲಿ ಉಲ್ಲೇಖವಿದೆ.
ಪ್ರಸ್ತುತ ಅಳಿಕೆ ವಿದ್ಯಾಸಂಸ್ಥೆ ದಿ. ಮಡಿಯಾಲ ನಾರಾಯಣ ಭಟ್ಟರ ಕನಸಿನ ಕೂಸು ಇಂದು ದೇಶಪ್ರಸಿದ್ದಿ. ನಮ್ಮೂರಿನ ಸಂಸ್ಕಾರದ ಬೆಳವಣಿಗೆಗೆ ಒಂದು ರೀತಿಯ ಗರಿ. ಕೇಪು ಶ್ರೀ ಉಳ್ಳಾಲ್ತಿ ದೇವಳಕ್ಕೆ ಉಂಬಳಿ ಬಿಟ್ಟ ಜಾಗಗಳು , ಮಂಟಮೆ ಯಂತ ತಂಗುದಾಣ ಗಳು ಈ ಗ್ರಾಮದ ಅಲ್ಲಲ್ಲಿ ಇವೆ . ಮುಳಿಯ ಮೆಚ್ಚಿ, ಮಿತ್ತಳಿಕೆ ಗುತ್ತು ಮನೆ ಇನ್ನೂ ದೈವಗಳ ಪರಿಚಾರಿಕೆಯಲ್ಲಿ ಮುಂದಿದೆ. ಪೂರ್ವ ಕಟ್ಟುಪಾಡುಗಳು ಅಳಿಯದೆ ಹೊಸತರ ಹುಟ್ಟು ಸುಸ್ಥಿರತೆ ಅನ್ನುತ್ತೇವೆ. ಆದರೆ ಮತ್ತೆ ನಾವು ಹಿಂದಿನ ಚಿಮಿಣಿ ದೀಪದ ಬೆಳಕಿಗೆ ಸಾಗಿ ಮಣ್ಣಿನ ಮನೆಯ ಸಗಣಿ ಸಾರಿಸಿದ ನೆಲದಲ್ಲಿ ದಿನ ಕಳೆಯುವುದು ಆರೋಗ್ಯವಿದ್ದರೂ ಅಸಾದ್ಯ. ಏನಿಲ್ಲದಿದ್ದರೂ ನಾವು ಹೇಗಿದ್ದೆವು ಎನ್ನುವುದರಲ್ಲಿ ಒಂದಷ್ಟು ಮಾನಸಿಕ ಸಂತಸಪಡುವುದರಲ್ಲಿ ತಪ್ಪಿಲ್ಲ. ನಮ್ಮವರಿಗೆ ಹೇಳುವುದಕ್ಕೂ ಮುಜುಗರವಿಲ್ಲ. ಯಾಕೆಂದರೆ ಈ ಗ್ರಾಮದವರು ಸಾಗಿ ಬಂದ ಚಿತ್ರಣವಿದು. ಒಟ್ಟಾಗಿ “ ಕಥೆಯಿರಲಿ ವ್ಯಥೆ ಬರುವ ಹೊತ್ತಿಗೆ ” ಎಂಬ ನೆನೆಗುದಿಗೆ ಸಾಗೋಣ. ಕ್ರಿಯಾತ್ಮಕ ನಮ್ಮೂರಿನ ರಾಜಕೀಯ ನಾಯಕರಿದ್ದರೆ ಜಾನಪದ , ಕೃಷಿ ಸೊಗಡನ್ನು ಮತ್ತೆ ಅಧುನಿಕ ರೀತಿಯಲ್ಲಿ ಕೊಡಲು ಯತ್ನಿಸುವಿರ? ಎಂಬ ಮನದ ಮೂಲೆಯ ಸಣ್ಣ ಆಸೆ ಅಷ್ಟೇ.
✒️ರಾಧಾಕೃಷ್ಣ ಎರುಂಬು








