


ಬೆಂಗಳೂರು: ಪತ್ನಿಯಿಂದ ದೂರವಾಗುವ ಭಯದಲ್ಲಿ ಮಹಿಳೆಯನ್ನು ಕುತ್ತಿಗೆ ಬಿಗಿದು ಹತ್ಯೆ ಮಾಡಿ, ಬಳಿಕ ಶವಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ರಾಜಕಾಲುವೆಗೆ ಎಸೆದಿದ್ದ ಭಯಾನಕ ಘಟನೆ ಬೆಂಗಳೂರಿನ ದೇವನಹಳ್ಳಿಯಲ್ಲಿ ನಡೆದಿದೆ.ರಾಯಚೂರು ಮೂಲದ, ಮೌನೀಶ್ ಮೈತ್ರಿ ಬಂಧಿತ ವ್ಯಕ್ತಿ. ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದನು. ಆರೋಪಿಯ ಪತ್ನಿ ಹೆರಿಗೆಗಾಗಿ ತನ್ನ ತವರು ಮನೆಗೆ ತೆರಳಿದ್ದ ಸಂದರ್ಭದಲ್ಲಿ, ಈತ ಬೆಂಗಳೂರಿನಲ್ಲಿ ಮತ್ತೊಬ್ಬ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದನು.
ಹೆರಿಗೆಯ ನಂತರ ಪತ್ನಿ ಬೆಂಗಳೂರಿಗೆ ಮರಳುವ ಸಮಯ ಹತ್ತಿರವಾಗುತ್ತಿದ್ದಂತೆ, ತನ್ನ ಅಕ್ರಮ ಸಂಬಂಧದ ವಿಷಯ ಪತ್ನಿಗೆ ತಿಳಿಯಬಹುದೆಂಬ ಭಯದಿಂದ ಆತ ತನ್ನ ಗೆಳತಿಯನ್ನೇ ಕೊಲೆ ಮಾಡಿದ್ದಾನೆ. ಗೆಳತಿಯನ್ನು ಕೊಲೆ ಮಾಡಿದ ನಂತರ ಕೂಡಲೇ ಶವವನ್ನು ಸಾಗಿಸದೆ, ಸುಮಾರು ಎರಡು ದಿನಗಳ ಕಾಲ ತನ್ನ ಮನೆಯಲ್ಲೇ ಇರಿಸಿಕೊಂಡಿದ್ದು, ಬೆಡ್‌ಶೀಟ್ ಹಾಗೂ ಪ್ಲಾಸ್ಟಿಕ್ ಟಾರ್ಪಲ್‌ನಲ್ಲಿ ಶವವನ್ನು ಸುತ್ತಿ ಹಗ್ಗದಿಂದ ಬಿಗಿದು ದ್ವಿಚಕ್ರ ವಾಹನದಲ್ಲಿ ತೆಗೆದುಕೊಂಡು ಹೋಗಿ ದೇವನಹಳ್ಳಿ ಸಮೀಪದ ರಾಜಕಾಲುವೆಗೆ ಶವವನ್ನು ಎಸೆದು, ಸಾಕ್ಷ್ಯ ನಾಶ ಮಾಡಲು ಅದಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸುಟ್ಟು ಹಾಕಲು ಯತ್ನಿಸಿದ್ದಾನೆ. ರಾಜಕಾಲುವೆಯಲ್ಲಿ ಸುಟ್ಟ ಸ್ಥಿತಿಯಲ್ಲಿದ್ದ ಅಪರಿಚಿತ ಶವ ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ತಕ್ಷಣವೇ ಸ್ಥಳಕ್ಕೆ ಬಂದ ದೇವನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸಿದರು. ಸಿಸಿಟಿವಿ ದರಶ್ಯಗಳು ಮತ್ತು ಇತರೆ ಮಾಹಿತಿಗಳ ಆಧಾರದ ಮೇಲೆ ಆರೋಪಿ ಮೌನೀಶ್ ಮೈತ್ರಿಯನ್ನು ಬಂಧಿಸಿ, ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ವರದಿ ಮೂಲಕ ತಿಳಿದಿದೆ.








