ಪುತ್ತೂರು: ಕಲಿತ ಶಿಕ್ಷಣದಿಂದ ಸುಭದ್ರ ಬದುಕಿನ ಭರವಸೆ ದೊರೆಯದ ಹಿನ್ನಲೆಯಲ್ಲಿ ತನ್ನದೇ ಆದ ಸ್ವಂತ ಉದ್ಯಮದಲ್ಲಿ ತೊಡಗಿಕೊಂಡ ಯುವಕನೋರ್ವ ಇದೀಗ ದೇಶದೆಲ್ಲೆಡೆಯ ಮಾರುಕಟ್ಟೆಗಳಿಗೆ ತನ್ನ ಉತ್ಪನ್ನಗಳನ್ನು ಮಾರಾಟ ಮಾಡುವ ಹಂತಕ್ಕೆ ಬೆಳೆದಿದ್ದಾನೆ. ಮನೆಯ ತೋಟದಲ್ಲಿ ಹಾಗೂ ಅಕ್ಕಪಕ್ಕದ ಅಡಿಕೆ ತೋಟಗಳಲ್ಲಿ ಬಿದ್ದಿದ್ದ ಅಡಿಕೆ ಹಾಳೆಯೇ ಈ ಯುವಕನ ಉದ್ಯಮದ ಕಚ್ಚಾವಸ್ತು.
ಅಡಿಕೆ ಹಾಳೆಯಲ್ಲಿ ಹಲವರು ತಟ್ಟೆಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದರೂ, ಈ ಯುವಕ ಹಾಳೆ ತಟ್ಟೆಯಲ್ಲಿ ಸುಮಾರು 60 ಕ್ಕೂ ಮಿಕ್ಕಿದ ತಟ್ಟೆ ಸೇರಿದಂತೆ ವಿವಿಧ ದಿನನಿತ್ಯ ಬಳಸುವ ವಸ್ತುಗಳನ್ನು ತಯಾರಿಸುವ ಮೂಲಕ ಯಶಸ್ವಿ ಉದ್ಯಮಿಯಾಗಿ ರೂಪುಗೊಂಡಿದ್ದಾನೆ. ಸಭೆ, ಸಮಾರಂಭಗಳಲ್ಲಿ ಪ್ಲಾಸ್ಟಿಕ್, ಪೇಪರ್ ತಟ್ಟೆ, ಲೋಟ, ಚಮಚದ ಜಾಗವನ್ನು ಇದೀಗ ಅಡಿಕೆ ಹಾಳೆಯಲ್ಲಿ ತಯಾರಿಸಿದ ಇಕೋ ಫ್ರೆಂಡ್ಲೀ ವಸ್ತುಗಳು ತುಂಬಲಾರಂಭಿಸಿದೆ. ಈ ರೀತಿಯ ಅಡಿಕೆಯ ವಿವಿಧ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಿದ ಕೀರ್ತಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಮಾಡಾವಿನ ಯುವಕ ಶ್ರೀಕೃಷ್ಣರಿಗೂ
ಸಲ್ಲುತ್ತದೆ.

ಮೆಕ್ಯಾನಿಕಲ್ ಇಂಜಿನಿಯರಿಂಗ್ ಮುಗಿಸಿ ಉದ್ಯೋಗದ ಅಲೆದಾಟದಲ್ಲಿದ್ದ ಶ್ರೀಕೃಷ್ಣರಿಗೆ ತಾನೊಂದು ಸ್ವಂತ ಉದ್ಯಮವನ್ನು ಯಾಕೆ ಪ್ರಾರಂಭಿಸಬಾರದು ಎನ್ನುವ ಯೋಚನೆ ಐದು ವರ್ಷಗಳ ಹಿಂದೆ ಹುಟ್ಟಿಕೊಂಡಿತ್ತು. ಮನೆಯ ತೋಟದಲ್ಲಿ ಹಾಗೂ ಅಕ್ಕಪಕ್ಕದ ಲೋಟದಲ್ಲಿ ಅಡಿಕೆ ಹಾಳೆಗಳು ಉಪಯೋಗವಿಲ್ಲದೆ ಬಿದ್ದಿರುವುದನ್ನು ಗಮನಿಸಿದ ಶ್ರೀಕೃಷ್ಣ ಅಡಿಕೆ ಹಾಳೆಯಲ್ಲಿ ತಟ್ಟೆ ತಯಾರಿಸುವ ಸಣ್ಣ ಉದ್ಯಮವೊಂದನ್ನು
ಆರಂಭಿಸಿದ್ದರು.

ಹಾಳೆಯಲ್ಲಿ ತಟ್ಟೆಯನ್ನು ತಯಾರಿಸುವ ಉದ್ಯಮಗಳು ಸಾಕಷ್ಟು ಇದ್ದ ಆ ಸಮಯದಲ್ಲಿ ತಮ್ಮ ಹಾಳೆಗಳು ಕೊಂಚ ಡಿಫರೆಂಟ್ ಆಗಿರಬೇಕೆಂದು ಹಲವು ರೀತಿಯ ಸಂಶೋಧನೆಗಳನ್ನು ಈ ಹಂತದಲ್ಲಿ ಕೈಗೊಂಡಿದ್ದರು. ಈ ಸಂಶೋಧನೆಗಳ ಫಲವೇ ಇದೀಗ ಸುಮಾರು 60 ಕ್ಕೂ ಮಿಕ್ಕಿದ ಅಡಿಕೆ ಹಾಳೆಯ ಉತ್ಪನ್ನಗಳನ್ನು ಶ್ರೀಕೃಷ್ಣ ಮಾರುಕಟ್ಟೆಗೆ ಪರಿಚಯಿಸಿದ್ದಾರೆ.

ಹಲವು ಆಕಾರದ, ರೂಪದ ಬಟ್ಟಲುಗಳು, ತಟ್ಟೆಗಳು, ಸಾಬೂನಿನ ಬಾಕ್ಸ್, ಐಸ್ ಕ್ರೀಂ ಕಪ್, ಚಮಚ ಹೀಗೆ ಇವರ ಬಳಿ ತಯಾರಾಗದ ತಟ್ಟೆಗಳಿಲ್ಲ. ಈ ತಟ್ಟೆಗಳನ್ನು ತಯಾರಿಸಲು ಯಂತ್ರಗಳ ಅಗತ್ಯತೆಯನ್ನು ಮನಗಂಡಿದ್ದ ಶ್ರೀಕೃಷ್ಣ ತಮಗೆ ಬೇಕಾದ ವಿನ್ಯಾಸದ ಯಂತ್ರಗಳನ್ನು ಸಿದ್ಧಪಡಿಸುವ ಮೂಲಕ ಅಡಿಕೆ ಹಾಳೆಯ ವಿವಿಧ ರೀತಿಯ ತಟ್ಟೆಗಳನ್ನು ತಯಾರಿಸುತ್ತಿದ್ದಾರೆ. ಶ್ರೀಕೃಷ್ಣರ ಹಾಳೆ ಫ್ಯಾಕ್ಟರಿಯಲ್ಲಿ ತಯಾರಾಗುವ ತಟ್ಟೆಗಳಿಗೆ ದೇಶದೆಲ್ಲೆಡೆ ಉತ್ತಮ ಬೇಡಿಕೆಯೂ ಬರುತ್ತಿದೆ. ಪುತ್ತೂರಿನ ಕುಗ್ರಾಮವಾದ ಮಾಡಾವಿನಲ್ಲಿ ತಯಾರಾಗುವ ತಟ್ಟೆಗಳು ಇದೀಗ ಮಹಾರಾಷ್ಟ್ರ, ತಮಿಳುನಾಡು, ಕೇರಳ, ಗುಜರಾತ್ ಹೀಗೆ ಹಲವು ರಾಜ್ಯಗಳ ಮಾರುಕಟ್ಟೆಯನ್ನು ಪ್ರವೇಶಿಸಿದೆ.

ಅತೀ ಸಣ್ಣ ಪ್ರಮಾಣದಲ್ಲಿ ಪ್ರಾರಂಭಿಸಿದ ಶ್ರೀಕೃಷ್ಣರ ಉದ್ಯಮ ಇದೀಗ 16 ನಿರುದ್ಯೋಗಿಗಳಿಗೆ ಉದ್ಯೋಗ ಕೊಡುವ ಹಂತಕ್ಕೆ ಬೆಳೆದಿದೆ. ಅದರಲ್ಲೂ ಹಳ್ಳಿಯಲ್ಲೇ ಉದ್ಯೋಗವಿಲ್ಲದೆ ಇರುವ ಮಹಿಳೆಯರಿಗೆ ತಮ್ಮ ಫ್ಯಾಕ್ಟರಿಯಲ್ಲಿ ಉದ್ಯೋಗ ನೀಡುವ ಮೂಲಕ ಶ್ರೀಕೃಷ್ಣ ಹಲವು ಕುಟುಂಬಗಳ ಪಾಲಿಗೆ ಅನ್ನದಾತರೂ
ಆಗಿದ್ದಾರೆ.









