


ಚಿಕ್ಕಮಗಳೂರು: ರಸ್ತೆಯ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ 12 ಚಕ್ರದ ಲಾರಿಯೊಂದು ಸುಮಾರು 50 ಅಡಿ ಆಳಕ್ಕೆ ಬಿದ್ದ ಘಟನೆ ಮೂಡಿಗೆರೆ ತಾಲೂಕಿನ ಕೆಳಗೂರು ಟೀ ಎಸ್ಟೇಟ್ ಸಮೀಪ ನಡೆದಿದೆ.
ದೊಡ್ಡಬಳ್ಳಾಪುರದಿಂದ ಹಿರೇಬೈಲು ಗ್ರಾಮಕ್ಕೆ ಸಿಮೆಂಟ್ ಸಾಗಿಸುತ್ತಿದ್ದ ಲಾರಿ ತಿರುವಿನಲ್ಲಿ ನಿಯಂತ್ರಣ ತಪ್ಪಿ ಟೀ ಎಸ್ಟೇಟಿನ ಲೈನ್ ಮನೆಗಳ ಬಳಿ ಪ್ರಪಾತಕ್ಕೆ ಉರುಳಿದೆ. ಅಪಘಾತದಲ್ಲಿ ಲಾರಿ ಚಾಲಕ ಪಾರಾಗಿದ್ದು, ಕ್ಲೀನರ್ ಗಂಭೀರ ಗಾಯಗೊಂಡಿದ್ದಾರೆ.ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯರು ಸುಮಾರು ಎರಡು ಗಂಟೆಗಳ ಕಾಲ ಸಾಹಸಪಟ್ಟು ಲಾರಿಯೊಳಗೆ ಸಿಲುಕಿದ್ದ ಚಾಲಕ, ಕ್ಲೀನರ್ ಹೊರತೆಗೆದು ಆಸ್ಪತ್ರೆಗೆ ದಾಖಲಿಸಿದ್ದಾರೆ.
ರಿಪೇರಿ ಮಾಡಲು ಜಾಗವಿಲ್ಲದ ಕಾರಣ ಕಾರಣ ಲೈನ್ ಮನೆಗಳ ಬಳಿ ಜೆಸಿಬಿಯಿಂದ ರಸ್ತೆ ನಿರ್ಮಾಣ ಮಾಡಿ ಕ್ರೇನ್ ಮೂಲಕ ಲಾರಿಯನ್ನ ಮೇಲಕ್ಕೆ ಎತ್ತಲಾಗಿದೆ. ಅದೃಷ್ಟವಶಾತ್ ಲಾರಿ ಕಾರ್ಮಿಕರ ಮನೆ ಬಾಗಿಲಲ್ಲಿ ಲಾಕ್ ಆಗಿ ನಿಂತಿದೆ. ಒಂದು ವೇಳೆ ಲಾರಿ ಇನ್ನು ಒಂದು ಪಲ್ಟಿಯಾಗಿದ್ದರೂ ದೊಡ್ಡಮಟ್ಟದ ಅನಾಹುತ ಸಂಭವಿಸುತ್ತಿತ್ತು.








