
ಹೊಸದಿಲ್ಲಿ, ಮಾ. 26: ಪಶ್ಚಿಮ ಏಶ್ಯದಲ್ಲಿ ನಡೆಯುತ್ತಿರುವ ಯುದ್ಧದ ಹಿನ್ನೆಲೆಯಲ್ಲಿ ಔಷಧ ಕಚ್ಚಾವಸ್ತುಗಳ ಪೂರೈಕೆ ಸರಣಿ ವ್ಯತ್ಯಯಗೊಂಡಿದ್ದು, ಕೇವಲ 15 ದಿನಗಳಲ್ಲಿ ಪ್ರಮುಖ ಕಚ್ಚಾವಸ್ತುಗಳ ಬೆಲೆ 200-300 ಶೇಕಡದಷ್ಟು ಹೆಚ್ಚಿದೆ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ.
ಹಾಗಾಗಿ, ಇದೇ ಪರಿಸ್ಥಿತಿ ಮುಂದುವರಿದರೆ ಔಷಧಗಳ ಬೆಲೆಗಳಲ್ಲಿ ಏರಿಕೆಯಾಗಬಹುದು ಅಥವಾ ಔಷಧಗಳ ಪೂರೈಕೆಯಲ್ಲಿ ಕೊರತೆ ತಲೆದೋರಬಹುದು ಎಂಬ ಎಚ್ಚರಿಕೆಯನ್ನು ಔಷಧ ತಯಾರಕರು ನೀಡಿದ್ದಾರೆ.ಹಿಮಾಚಲಪ್ರದೇಶದಲ್ಲಿ 650 ಔಷಧ ತಯಾರಿಕಾ ಕಾರ್ಖಾನೆಗಳಿದ್ದು, ಅವುಗಳು ದೇಶಾದ್ಯಂತ ಪೂರೈಕೆಯಾಗುವ ಒಟ್ಟು ಔಷಧಿಗಳ 25 ಶೇಕಡದಷ್ಟನ್ನು ಉತ್ಪಾದಿಸುತ್ತವೆ.ಉದ್ಯಮದ ಪ್ರತಿನಿಧಿಗಳನ್ನು ಒಳಗೊಂಡ ತುರ್ತು ಕಾರ್ಯಪಡೆಯೊಂದನ್ನು ರಚಿಸಿ 1956ರ ಅಗತ್ಯ ವಸ್ತುಗಳ ಕಾಯ್ದೆಯನ್ನು ತಕ್ಷಣ ಜಾರಿಗೊಳಿಸುವಂತೆ ಹಿಮಾಚಲ ಔಷಧ ಉತ್ಪಾದಕರ ಸಂಘ (ಎಚ್‌ಡಿಎಮ್‌ಎ) ಕೇಂದ್ರ ಸರಕಾರವನ್ನು ಕೋರಿದೆ.
ಪಶ್ಚಿಮ ಏಶ್ಯದಲ್ಲಿನ ಈಗನ ಸಂಘರ್ಷ ಮುಂದುವರಿದರೆ, ಕಚ್ಚಾವಸ್ತುಗಳ ಕೊರತೆಯಿಂದಾಗಿ ಔಷಧಗಳ ಕೊರತೆ ತಲೆದೋರುವುದು ನಿಶ್ಚಿತ ಎಂದು ಹಿಮಾಚಲ ಔಷಧ ತಯಾರಕರ ಸಂಘದ ವಕ್ತಾರ ಸಂಜಯ್ ಶರ್ಮಾ ಹೇಳುತ್ತಾರೆ. ಪ್ರಸಕ್ತ 40 ಶೇಕಡ ಪೂರೈಕೆ ಕಡಿತಗೊಂಡಿದೆ ಹಾಗೂ ಕಚ್ಚಾವಸ್ತುಗಳ ಬೆಲೆ 150-200 ಶೇಕಡದಷ್ಟು ಹೆಚ್ಚಳವಾಗಿದೆ ಎಂದು ಅವರು ಹೇಳಿದರು.








