Thursday, June 25, 2026
spot_imgspot_img
spot_imgspot_img

15 ಸಾವಿರ ರೂ. ಲಂಚ ಪಡೆದಿದ್ದ ನಿವೃತ್ತ ತಾ.ಪಂ ಇಒ, ಎಸ್‌ಡಿಎಗೆ 4 ವರ್ಷ ಜೈಲು-ಏನಿದು ಪ್ರಕರಣ?

- Advertisement -
- Advertisement -

ಕಲಬುರಗಿ : ಸರ್ವೀಸ್ ಬುಕ್ ಕಳುಹಿಸಲು 15 ಸಾವಿರ ರೂ. ಲಂಚ ಪಡೆದ ಪ್ರಕರಣದಲ್ಲಿ ಕಲಬುರಗಿ ತಾಲೂಕು ಪಂಚಾಯಿತಿಯ ನಿವೃತ್ತ ಕಾರ್ಯನಿರ್ವಾಹಕ ಅಧಿಕಾರಿ (ಇಒ) ಹಾಗೂ ದ್ವಿತೀಯ ದರ್ಜೆ ಸಿಬ್ಬಂದಿಗೆ ಜಿಲ್ಲಾ ನ್ಯಾಯಾಲಯ ತಲಾ 4 ವರ್ಷ ಜೈಲು ಶಿಕ್ಷೆ ಹಾಗೂ 20 ಸಾವಿರ ದಂಡ ವಿಧಿಸಿದೆ. ನಿವೃತ್ತ ಇಒ ಅಶೋಕ ರೆಡ್ಡಿ ಹಾಗೂ ಎಸ್‌ಡಿಎ ನಿಜಲಿಂಗಪ್ಪ ಪಂಡಿತ್ ಶಿಕ್ಷೆಗೆ ಒಳಗಾದವರು.

ಪ್ರಕರಣದ ವಿವರ :
ಕಲಬುರಗಿ ತಾಲೂಕಿನ ಕಿಣ್ಣಿಸಡಕ ಪಂಚಾಯಿತಿ ಪಿಡಿಒ ಶರಣಗೌಡ ಕವಿತಾಳ ಅವರನ್ನು ಜೇವರ್ಗಿ ತಾಲೂಕಿನ ಹುಲ್ಲೂರು ಪಂಚಾಯಿತಿಗೆ ವರ್ಗಾವಣೆ ಮಾಡಲಾಗಿತ್ತು. ತಮ್ಮ ಸರ್ವೀಸ್ ಬುಕ್ ಹಾಗೂ ಕೊನೆಯ ವೇತನ ಪ್ರಮಾಣಪತ್ರವನ್ನು ಕಳುಹಿಸಲು ಆರೋಪಿಗಳು 15 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.

ಈ ಕುರಿತು ಶರಣಗೌಡ ಲೋಕಾಯುಕ್ತರಿಗೆ ದೂರು ನೀಡಿದ್ದರು. ನಂತರ ನಿಜಲಿಂಗಪ್ಪ ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಇನ್‌ಸ್ಪೆಕ್ಟರ್ ಕೆ.ಎಸ್.ಕಲ್ಲದೇವರು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಜಿ.ಎಲ್.ಲಕ್ಷ್ಮೀನಾರಾಯಣ, ಇಬ್ಬರೂ ಲಂಚದ ಬೇಡಿಕೆ ಇಟ್ಟು ಸ್ವೀಕರಿಸಿರುವುದು ಸಾಬೀತಾಗಿರುವ ಹಿನ್ನೆಲೆಯಲ್ಲಿ ಭ್ರಷ್ಟಾಚಾರ ತಡೆ ಕಾಯ್ದೆಯ ಕಲಂ 7(ಬಿ) ಅಡಿಯಲ್ಲಿ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ.

ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಅಶೋಕ ಎಸ್.ಚಾಂದಕವಠ ವಾದ ಮಂಡಿಸಿದ್ದರು.

- Advertisement -

Related news

error: Content is protected !!