Monday, July 27, 2026
spot_imgspot_img
spot_imgspot_img

ಮಗಳ ಮದುವೆಗಾಗಿ ಕೂಡಿಟ್ಟ ಉಳಿತಾಯದ ಹಣವನ್ನು ವ್ಯರ್ಥ ಮಾಡುವ ಆತಂಕ – ಪತಿಯನ್ನೇ ಕೊಂದ ಪತ್ನಿ, ಮಕ್ಕಳು

- Advertisement -
- Advertisement -

ಮಹೋಬಾ: ಗ್ರಾಮವೊಂದರ ಚರಂಡಿಯಲ್ಲಿ ದೊರೆತಿದ್ದ ಮೃತದೇಹ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ಮಗಳ ಮದುವೆಗೆ ಕೂಡಿಟ್ಟ ಉಳಿತಾಯದ ಹಣವನ್ನು ತನ್ನ ಪತಿ ಪೋಲು ಮಾಡಿಬಿಡಬಹುದು ಎಂಬ ಶಂಕೆಯಲ್ಲಿ ಆತನನ್ನು ಆತನ ಪತ್ನಿ, ಪುತ್ರಿಯರು ಹಾಗೂ ಅಪ್ರಾಪ್ತ ಪುತ್ರನೇ ಹತ್ಯೆಗೈದಿರುವ ಸಂಗತಿ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಹರ್ ನಾರಾಯಣ್ ‍ಪ್ರಜಾಪತಿ (36) ಎಂಬ ವ್ಯಕ್ತಿಯ ಮೃತದೇಹವು ಎಪ್ರಿಲ್ 14ರಂದು ಉತ್ತರ ಪ್ರದೇಶದ ಮಹೋಬಾ ಜಿಲ್ಲೆಯ ಪನ್ವಾರಿ ಪೊಲೀಸ್ ಠಾಣೆ ವ್ಯಾಪ್ತಿಯ ಹರಿವಂತ್ ಪುರ ಬ್ರಾಹ್ಮಣನ್ ಗ್ರಾಮದ ಬಳಿಯ ಚರಂಡಿಯಲ್ಲಿ ಪತ್ತೆಯಾಗಿತ್ತು .ಬಳಿಕ, ತಮ್ಮ ಮೇಲೆ ಸಂಶಯ ಬಾರದಿರಲೆಂದು ಆರಂಭದಲ್ಲಿ ಪೊಲೀಸರನ್ನು ಸಂಪರ್ಕಿಸಿ ದೂರು ದಾಖಲಿಸಿದ್ದ ಮೃತ ವ್ಯಕ್ತಿಯ ಕುಟುಂಬದ ಸದಸ್ಯರು, ನನ್ನ ಪತಿ ನೆರೆಮನೆಯಾತನೊಂದಿಗೆ ಪದೇ ಪದೇ ಜಗಳವಾಡುತ್ತಿದ್ದುದರಿಂದ, ನಮಗೆ ಆತನ ಬಗ್ಗೆ ಅನುಮಾನವಿದೆ ಎಂದು ಆರೋಪಿಸಿದ್ದರು ಎಂದು ಮಂಗಳವಾರ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.“ಹೈಬತ್ ಪುರ ಗ್ರಾಮದ ಚರಂಡಿಯಲ್ಲಿ ಮೃತದೇಹ ಬಿದ್ದಿದೆ ಎಂಬ ಮಾಹಿತಿ ದೊರೆಯುತ್ತಿದ್ದಂತೆಯೇ ಪೊಲೀಸರ ತಂಡಗಳು ಸ್ಥಳಕ್ಕೆ ಧಾವಿಸಿ, ತಪಾಸಣೆ ನಡೆಸಿದವು. ಮೃತ ವ್ಯಕ್ತಿಯನ್ನು ಹರ್ ನಾರಾಯಣ್ ಪ್ರಜಾಪತಿ ಎಂದು ಗುರುತಿಸಲಾಯಿತು. ಆತನ ದೇಹದ ಮೇಲಿದ್ದ ಗಾಯದ ಗುರುತುಗಳನ್ನು ಪರಿಗಣಿಸಿ, ಹತ್ಯೆಗೈದಿರುವ ಪ್ರಕರಣ ಎಂಬ ಮೇಲ್ನೋಟದ ಸಂಶಯ ವ್ಯಕ್ತವಾಯಿತು.

ಬಳಿಕ, ಕುಟುಂಬದ ಸದಸ್ಯರು ನೀಡಿದ ದೂರನ್ನು ಆಧರಿಸಿ ಪ್ರಕರಣ ದಾಖಲಿಸಿಕೊಳ್ಳಲಾಯಿತು” ಎಂದು ಪೊಲೀಸ್ ವರಿಷ್ಠಾಧಿಕಾರಿ ಶಶಾಂಕ್ ಸಿಂಗ್ ಸುದ್ದಿಗಾರರಿಗೆ ತಿಳಿಸಿದರು.ಈ ಪ್ರಕರಣದ ತನಿಖೆ ನಡೆಸಲು ವಿಶೇಷ ಕಾರ್ಯಾಚರಣೆ ತಂಡ ಹಾಗೂ ನಿಗಾವಣೆ ಘಟಕ ಸೇರಿದಂತೆ ಹಲವು ತಂಡಗಳನ್ನು ನಿಯೋಜಿಸಲಾಯಿತು ಎಂದು ಅವರು ಹೇಳಿದರು.“ನಾವು ಮೃತ ವ್ಯಕ್ತಿಯ ಕೊನೆಯ ಚಲನವಲನಗಳು, ಫೋನ್ ಕರೆ ದಾಖಲೆಗಳು ಹಾಗೂ ಇನ್ನಿತರ ಆಯಾಮಗಳನ್ನು ಪರಿಶೀಲಿಸಿದೆವು. ಆದರೆ, ಯಾವುದೇ ಖಚಿತ ಸುಳಿವುಗಳು ದೊರೆಯಲಿಲ್ಲ. ತನಿಖೆಗೆ ಕುಟುಂಬದ ಸದಸ್ಯರು ಅಸಹಕಾರ ತೋರುತ್ತಿದ್ದುದರಿಂದ ಅವರ ಮೇಲೆಯೇ ಅನುಮಾನ ತಿರುಗಿತು” ಎಂದು ಅವರು ತಿಳಿಸಿದರು.ತನಿಖಾಧಿಕಾರಿಗಳು ಪ್ರಕರಣದ ಕುರಿತು ಆಳವಾಗಿ ಪ್ರಶ್ನಿಸಲು ಪ್ರಾರಂಭಿಸಿದಾಗ, ಕುಟುಂಬದ ಸದಸ್ಯರ ಹೇಳಿಕೆಯಲ್ಲಿ ಅಸ್ಥಿರತೆ ಕಂಡು ಬಂದಿತು. ಅವರನ್ನು ಸತತವಾಗಿ ವಿಚಾರಣೆಗೊಳಪಡಿಸಿದಾಗ, ಪ್ರಕರಣ ಬೆಳಕಿಗೆ ಬಂದಿತು.

ಈ ಹತ್ಯೆ ಪ್ರಕರಣದಲ್ಲಿ ಮೃತ ವ್ಯಕ್ತಿಯ ಪತ್ನಿ ರಾಮ್ ಪ್ಯಾರಿ, ಪುತ್ರಿಯರಾದ ಜ್ಯೋತಿ, ಸೊನಾಲಿ, ಅಪ್ರಾಪ್ತ ಪುತ್ರ ಹಾಗೂ ಪುತ್ರಿಯೊಬ್ಬಳ ಸ್ನೇಹಿತ ಭಾಗಿಯಾಗಿರುವುದು ಬಯಲಾಗಿದೆ. ಈ ಎಲ್ಲರನ್ನೂ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.“ವಿಚಾರಣೆಯ ವೇಳೆ, ಮೃತ ವ್ಯಕ್ತಿಯು ಮದ್ಯ ಹಾಗೂ ಜೂಜಾಟ ವ್ಯಸನಕ್ಕೀಡಾಗಿದ್ದ ಎಂದು ಕುಟುಂಬದ ಸದಸ್ಯರು ಹೇಳಿದ್ದಾರೆ.

ಇತ್ತೀಚೆಗೆ ತನ್ನ ಪುತ್ರಿಯ ಮದುವೆಗೆಂದು ಜಾನುವಾರುಗಳನ್ನು ಮಾರಾಟ ಮಾಡಿದ್ದ ಮೃತ ವ್ಯಕ್ತಿ, ಅದರಿಂದ ಸುಮಾರು 82,500 ಅನ್ನು ಸಂಗ್ರಹಿಸಿದ್ದ. ಆ ಹಣವನ್ನು ಆತ ಪೋಲು ಮಾಡಬಹುದು ಎಂಬ ಶಂಕೆಯಿಂದ ಈ ಕೃತ್ಯ ನಡೆದಿದೆ” ಎಂದು ಶಶಾಂಕ್ ಸಿಂಗ್ ಹೇಳಿದ್ದಾರೆ.ಆರೋಪಿಗಳು ಸಾಕ್ಷ್ಯಾಧಾರಗಳನ್ನು ಅಳಿಸಿ ಹಾಕಲು ಹಾಗೂ ತನಿಖೆಯ ದಿಕ್ಕು ತಪ್ಪಿಸಲು ಪ್ರಯತ್ನಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.“ತನಿಖೆಯ ದಿಕ್ಕು ತಪ್ಪಿಸಲು ಆರೋಪಿಗಳು ಮೃತ ವ್ಯಕ್ತಿಯ ಮೊಬೈಲ್ ಫೋನ್ ಅನ್ನು ಎಸೆದು, ನಗದನ್ನು ಬಚ್ಚಿಟ್ಟಿದ್ದರು. ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಹಗ್ಗ, ಬಚ್ಚಿಟ್ಟಿದ್ದ 82,500 ರೂ. ನಗದು ಹಾಗೂ ಹಾನಿಗೀಡಾಗಿದ್ದ ಮೊಬೈಲ್ ಫೋನ್ ಅನ್ನು ವಶಪಡಿಸಿಕೊಳ್ಳಲಾಗಿದೆ” ಎಂದು ಅವರು ಹೇಳಿದ್ದಾರೆ.ಮತ್ತಷ್ಟು ತನಿಖೆ ಪ್ರಗತಿಯಲ್ಲಿದ್ದು, ಈ ಪ್ರಕರಣವನ್ನು ಭೇದಿಸಿದ ಪೊಲೀಸ್ ತಂಡಗಳಿಗೆ 10,000 ರೂ. ನಗದು ಬಹುಮಾನವನ್ನು ಘೋಷಿಸಲಾಗಿದೆ.

- Advertisement -

Related news

error: Content is protected !!